ಸಾರಾಂಶ
ಬೆಂಗಳೂರು: ಮಾಜಿ ಕ್ರಿಕೆಟಿಗ ಕೆ.ಯೆರೇಗೌಡ್ ಅವರು ಮುಂದಿನ ಋತುವಿನ ದೇಸಿ ಕ್ರಿಕೆಟ್‌ನಲ್ಲಿ ಕರ್ನಾಟಕ ಪುರುಷರ ತಂಡಕ್ಕೆ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ) ಘೋಷಿಸಿದೆ.
ಯೆರೇಗೌಡ್ ಈ ಮೊದಲು 2018ರಿಂದ 2021ರ ವರೆಗೂ ಕೋಚ್ ಆಗಿದ್ದರು. ಕಳೆದ 2 ವರ್ಷಗಳಿಂದ ಪಿ.ವಿ. ಶಶಿಕಾಂತ್ ರಾಜ್ಯ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಈಗ ಮತ್ತೆ ಕೋಚ್ ಸ್ಥಾನಕ್ಕೆ ಯೆರೇಗೌಡ್ ನೇಮಕಗೊಂಡಿದ್ದಾರೆ. ಇತ್ತೀಚೆಗಷ್ಟೇ ಯೆರೇಗೌಡ್ ಅವರ ಕೋಚ್ ಅವಧಿಯಲ್ಲೇ ಕರ್ನಾಟಕ ಅಂಡರ್-23 ತಂಡ ಸಿಕೆ ನಾಯ್ಡು ಟ್ರೋಫಿಯಲ್ಲಿ ಚಾಂಪಿಯನ್ ಆಗಿತ್ತು. ಇದೇ ವೇಳೆ, ರಾಜ್ಯ ಹಿರಿಯರ ತಂಡಕ್ಕೆ ಮನ್ಸೂರ್ ಅಲಿ ಖಾನ್ ಬೌಲಿಂಗ್ ಕೋಚ್ ಆಗಿ ಮುಂದುವರಿಯಲಿದ್ದು, ಶಬರೀಶ್ ಮೋಹನ್ ಪೀಲ್ಡಿಂಗ್ ಕೋಚ್ ಆಗಿರಲಿದ್ದಾರೆ. ಅಂಡರ್-23 ತಂಡಕ್ಕೆ ಸೋಮಶೇಖರ್ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.
ಎನ್‌ಸಿಎ ಮುಖ್ಯಸ್ಥರಾಗಿ ಲಕ್ಷ್ಮಣ್ ಮುಂದುವರಿಕೆ?
ಬೆಂಗಳೂರು: ಭಾರತದ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಇನ್ನೂ ಒಂದು ವರ್ಷ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಮುಖ್ಯಸ್ಥರಾಗಿ ಮುಂದುವರಿಯಲಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಲಕ್ಷ್ಮಣ್ 2021ರಿಂದಲೂ ಎನ್‌ಸಿಎ ಮುಖ್ಯಸ್ಥರಾಗಿದ್ದು, ಅವರ ಅವಧಿ ಈ ವರ್ಷ ಸೆಪ್ಟೆಂಬರ್‌ಗೆ ಕೊನೆಗೊಳ್ಳಲಿದೆ. ಆದರೆ ಬಿಸಿಸಿಐ ಲಕ್ಷ್ಮಣ್‌ರ ಅವಧಿಯನ್ನು ಮತ್ತೊಂದು ವರ್ಷಕ್ಕೆ ಮುಂದುವರಿಸಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಇತ್ತೀಚೆಗಷ್ಟೇ, ಲಕ್ಷ್ಮಣ್ ಐಪಿಎಲ್ ತಂಡವೊಂದಕ್ಕೆ ಮುಖ್ಯ ಕೋಚ್ ಆಗಿ ನೇಮಕಗೊಳ್ಳಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿತ್ತು. ಆದರೆ ಅವರು ಎನ್‌ಸಿಎಯಲ್ಲೇ ಮುಂದುವರಿಯುವ ಸಾಧ್ಯತೆ ಹೆಚ್ಚು.