ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ ಸೇರಿದಂತೆ ಪ್ರಮುಖ ದಿಗ್ಗಜ ಕ್ರಿಕೆಟಿಗರ ಅನುಪಸ್ಥಿತಿ ನಡುವೆಯೂ ಹೊಸ ಇತಿಹಾಸ ಸೃಷ್ಟಿಸುವ ಗುರಿ ಇಟ್ಟುಕೊಂಡಿರುವ ಭಾರತ ತಂಡ ಶುಕ್ರವಾರದಿಂದ ಇಂಗ್ಲೆಂಡ್‌ ಟೆಸ್ಟ್‌ ಸರಣಿಯಲ್ಲಿ ಕಣಕ್ಕಿಳಿಯಲಿದೆ

ಲೀಡ್ಸ್‌: ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ ಸೇರಿದಂತೆ ಪ್ರಮುಖ ದಿಗ್ಗಜ ಕ್ರಿಕೆಟಿಗರ ಅನುಪಸ್ಥಿತಿ ನಡುವೆಯೂ ಹೊಸ ಇತಿಹಾಸ ಸೃಷ್ಟಿಸುವ ಗುರಿ ಇಟ್ಟುಕೊಂಡಿರುವ ಭಾರತ ತಂಡ ಶುಕ್ರವಾರದಿಂದ ಇಂಗ್ಲೆಂಡ್‌ ಟೆಸ್ಟ್‌ ಸರಣಿಯಲ್ಲಿ ಕಣಕ್ಕಿಳಿಯಲಿದೆ. 2025-27ರ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಶುಭಾರಂಭ ಮಾಡುವ ಗುರಿ ಇಟ್ಟುಕೊಂಡಿರುವ ಉಭಯ ತಂಡಗಳು ಮೊದಲ ಟೆಸ್ಟ್‌ ಪಂದ್ಯಕ್ಕೆ ಸಜ್ಜಾಗಿವೆ. 5 ಪಂದ್ಯಗಳ ಸರಣಿಯ ಮೊದಲ ಪಂದ್ಯಕ್ಕೆ ಲೀಡ್ಸ್‌ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.

ಈ ವರೆಗೂ ಭಾರತದ ಆಧಾರಸ್ತಂಭವಾಗಿದ್ದ ವಿರಾಟ್‌, ರೋಹಿತ್, ಆರ್‌.ಅಶ್ವಿನ್‌ ಸದ್ಯ ನಿವೃತ್ತಿಯಾಗಿದ್ದಾರೆ. ಈಗ ಇರುವುದು ಹೊಸ ತಂಡ, ಹೊಸ ನಾಯಕ. ಒಂದೆಡೆ ಶುಭ್‌ಮನ್‌ ಗಿಲ್‌ ನಾಯಕತ್ವದ ಚುಕ್ಕಾಣಿ ಹಿಡಿದು ತಂಡವನ್ನು ಮುನ್ನಡೆಸಲಿದ್ದು, ಮತ್ತೊಂದೆಡೆ ಕೆಲ ಯುವ ಪ್ರತಿಭೆಗಳು ತಮ್ಮ ಸಾಮರ್ಥ್ಯ ಸಾಬೀತುಪಡಿಸುವ ವಿಶ್ವಾಸದಲ್ಲಿದ್ದಾರೆ. 45 ದಿನಗಳ ಸುದೀರ್ಘ ಸರಣಿ ಬಳಿಕ ಟ್ರೋಫಿಯನ್ನು ಭಾರತಕ್ಕೆ ಹೊತ್ತುತರುವ ಹೊಣೆಗಾರಿಕೆ ಯಂಗ್‌ ಇಂಡಿಯಾ ಮೇಲಿದೆ.

ಆಯ್ಕೆ ಗೊಂದಲ: ಕೆಲ ಆಟಗಾರರ ನಿವೃತ್ತಿಯಿಂದಾಗಿ ತಂಡದಲ್ಲಿ ಬದಲಾವಣೆ ಸಹಜ. ಆಟಗಾರರ ಆಯ್ಕೆ ಗೊಂದಲವಿದ್ದು, ಬ್ಯಾಟಿಂಗ್‌ ಕ್ರಮಾಂಕದಲ್ಲೂ ಕುತೂಹಲವಿದೆ. ಕೆ.ಎಲ್‌.ರಾಹುಲ್‌-ಯಶಸ್ವಿ ಜೈಸ್ವಾಲ್‌ ಆರಂಭಿಕರಾಗಿ ಆಡಲಿದ್ದು, ನಾಯಕ್‌ ಶುಭ್‌ಮನ್‌ ಗಿಲ್‌ 4ನೇ, ಉಪನಾಯಕ ರಿಷಭ್‌ ಪಂತ್‌ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ. ಉಳಿದಂತೆ 3 ಹಾಗೂ 6ನೇ ಕ್ರಮಾಂಕದ ಆಟಗಾರರ ಬಗ್ಗೆ ಟಾಸ್‌ ವೇಳೆ ಉತ್ತರ ಸಿಗಲಿದೆ. 3ನೇ ಕ್ರಮಾಂಕಕ್ಕೆ ಸಾಯಿ ಸುದರ್ಶನ್‌ ಆಯ್ಕೆಯಾದರೆ, ಕರುಣ್‌ ನಾಯರ್ 6ನೇ ಕ್ರಮಾಂಕದಲ್ಲಿ ಆಡಬೇಕಾಗಬಹುದು. ಅಥವಾ ಕರುಣ್‌ರನ್ನು 3ನೇ ಕ್ರಮಾಂಕದಲ್ಲಿ ಆಡಿಸಿ, ಹೆಚ್ಚುವರಿ ವೇಗದ ಬೌಲಿಂಗ್ ಆಲ್ರೌಂಡರ್‌ಗಳಾಗಿ ಶಾರ್ದೂಲ್ ಹಾಗೂ ನಿತೀಶ್‌ ಕುಮಾರ್‌ ಇಬ್ಬರನ್ನೂ ಆಡಿಸಿದರೂ ಅಚ್ಚರಿಯಿಲ್ಲ.

ಜಡೇಜಾ 7ನೇ ಕ್ರಮಾಂಕದಲ್ಲಿ ಆಡುವ ಸಾಧ್ಯತೆ ಹೆಚ್ಚು. ಉಳಿದಂತೆ ಹೆಚ್ಚುವರಿ ಸ್ಪಿನ್ನರ್‌ ಆಡಿಸಲಾಗುತ್ತದೆಯೋ ಅಥವಾ ಮೂವರು ತಜ್ಞ ವೇಗಿಗಳನ್ನು ಕಣಕ್ಕಿಳಿಸಲಾಗುತ್ತೆಯೋ ಎಂಬ ಕುತೂಹಲವಿದೆ. ಬೂಮ್ರಾ, ಮೊಹಮದ್‌ ಸಿರಾಜ್‌ ಜೊತೆ ಪ್ರಸಿದ್ಧ್‌ ಕೃಷ್ಣ ಸ್ಥಾನ ಗಿಟ್ಟಿಸಿಕೊಳ್ಳಬಹುದು.

ಆತ್ಮವಿಶ್ವಾಸದಲ್ಲಿ ಇಂಗ್ಲೆಂಡ್‌: ಬೆನ್‌ ಸ್ಟೋಕ್ಸ್‌ ನಾಯಕತ್ವದ ಇಂಗ್ಲೆಂಡ್‌ ತಂಡದಲ್ಲಿ ಅನುಭವಿಗಳು ಹೆಚ್ಚಿದ್ದು, ತವರಿನ ಕ್ರೀಡಾಂಗಣದ ಲಾಭವನ್ನೂ ಪಡೆಯಲಿದೆ. ಹೀಗಾಗಿ ತುಂಬು ಆತ್ಮವಿಶ್ವಾಸದಿಂದಲೇ ಟೂರ್ನಿಯಲ್ಲಿ ಕಣಕ್ಕಿಳಿಯಲಿದೆ. 36 ಶತಕ ಒಳಗೊಂಡ 13000+ ರನ್‌ಗಳ ಸರದಾರ ಜೋ ರೂಟ್‌ ಬ್ಯಾಟಿಂಗ್‌ ಆಧಾರಸ್ತಂಭ. ಜ್ಯಾಕ್‌ ಕ್ರಾವ್ಲಿ, ಓಲಿ ಪೋಪ್‌, ಹ್ಯಾರಿ ಬ್ರೂಕ್, ಬೆನ್‌ ಡಕೆಟ್‌, ಜೆಮೀ ಸ್ಮಿತ್‌ ಕೂಡಾ ಬ್ಯಾಟಿಂಗ್‌ನಲ್ಲಿ ತಂಡಕ್ಕೆ ನೆರವಾಗಲಿದ್ದಾರೆ. ಬೌಲಿಂಗ್‌ ವಿಭಾಗದಲ್ಲಿ ಕ್ರಿಸ್‌ ವೋಕ್ಸ್‌ ಜೊತೆ ಬ್ರೈಡನ್‌ ಕಾರ್ಸ್‌, ಜೋಶ್‌ ಟಂಗ್‌, ಶೊಐಬ್‌ ಬಶೀರ್‌ ಭಾರತವನ್ನು ಕಾಡಲು ಸಜ್ಜಾಗಿದ್ದಾರೆ.

ಒಟ್ಟು ಮುಖಾಮುಖಿ: 136

ಭಾರತ: 35

ಇಂಗ್ಲೆಂಡ್‌: 51

ಡ್ರಾ: 50

ಆಟಗಾರರ ಪಟ್ಟಿ:

ಭಾರತ(ಸಂಭವನೀಯ): ಜೈಸ್ವಾಲ್‌, ರಾಹುಲ್‌, ಸುದರ್ಶನ್‌, ಗಿಲ್‌(ನಾಯಕ), ರಿಷಭ್‌ ಪಂತ್‌, ಕರುಣ್‌ ನಾಯರ್‌, ಜಡೇಜಾ, ಶಾರ್ದೂಲ್‌/ನಿತೀಶ್‌, ಸಿರಾಜ್‌, ಬೂಮ್ರಾ, ಪ್ರಸಿದ್ಧ್‌.

ಇಂಗ್ಲೆಂಡ್‌(ಆಡುವ 11): ಜ್ಯಾಕ್‌ ಕ್ರಾವ್ಲಿ, ಬೆನ್‌ ಡಕೆಟ್‌, ಪೋಪ್‌, ರೂಟ್‌, ಬ್ರೂಕ್‌, ಸ್ಟೋಕ್ಸ್(ನಾಯಕ), ಜೆಮೀ ಸ್ಮಿತ್‌, ವೋಕ್ಸ್‌, ಬ್ರೈಡನ್‌ ಕಾರ್ಸ್‌, ಜೋಶ್‌ ಟಂಗ್‌, ಬಶೀರ್‌.

ಪಂದ್ಯ: ಮಧ್ಯಾಹ್ನ 3.30ರಿಂದ(ಭಾರತೀಯ ಕಾಲಮಾನ)

ನೇರಪ್ರಸಾರ: ಸೋನಿ ಸ್ಪೋರ್ಟ್ಸ್‌, ಜಿಯೋ ಹಾಟ್‌ಸ್ಟಾರ್‌.

ಆಸೀಸ್‌, ಕಿವೀಸ್‌ ಸೋಲಿನ

ಕಹಿ ಮರೆಸುತ್ತಾ ಈ ಸರಣಿ?

ಕಳೆದ ವರ್ಷಾಂತ್ಯದಲ್ಲಿ ತವರಿನಲ್ಲಿ ನ್ಯೂಜಿಲೆಂಡ್‌ ಹಾಗೂ ತವರಿನಾಚೆ ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ಎದುರಾಗಿದ್ದ ಹೀನಾಯ ಸೋಲಿನ ಮುಖಭಂಗವನ್ನು ಆಟಗಾರರು, ಅಭಿಮಾನಿಗಳು ಇನ್ನೂ ಮರೆತಿರಲಿಕ್ಕಿಲ್ಲ. ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದ ಭಾರತವನ್ನು ಆ ಎರಡು ಸರಣಿಗಳ ಸೋಲು ಕಂಗೆಡಿಸಿತ್ತು. ಅದರ ಕಹಿಯನ್ನು ಇಂಗ್ಲೆಂಡ್‌ ಸರಣಿಯಲ್ಲಿ ಗೆಲ್ಲುವ ಮೂಲಕ ಮರೆಯಲಿದೆಯೇ ಎಂಬ ಕುತೂಹಲ ಸದ್ಯ ಕ್ರಿಕೆಟ್‌ ಪ್ರೇಮಿಗಳಲ್ಲಿದೆ.

ಇಂಗ್ಲೆಂಡ್‌ನಲ್ಲಿ 18

ವರ್ಷ ಬಳಿಕ ಸರಣಿ

ಗೆಲ್ಲುತ್ತಾ ಭಾರತ?

ಭಾರತ ತಂಡ 18 ವರ್ಷಗಳ ಬಳಿಕ ಇಂಗ್ಲೆಂಡ್‌ನಲ್ಲಿ ಸರಣಿ ಗೆಲ್ಲುವ ಗುರಿ ಇಟ್ಟುಕೊಂಡಿದೆ. ಈವರೆಗೂ ಇಂಗ್ಲೆಂಡ್‌ ನೆಲದಲ್ಲಿ ಭಾರತ 19 ಬಾರಿ ಟೆಸ್ಟ್‌ ಸರಣಿ ಆಡಿದೆ. ಇದರಲ್ಲಿ ಇಂಗ್ಲೆಂಡ್‌ 14ರಲ್ಲಿ ಗೆದ್ದಿದ್ದರೆ, ಭಾರತ 3ರಲ್ಲಿ ಜಯಗಳಿಸಿದೆ. ಉಳಿದ ಸರಣಿಗಳು ಡ್ರಾಗೊಂಡಿವೆ. 2007ರಲ್ಲಿ ಕೊನೆ ಬಾರಿ ಇಂಗ್ಲೆಂಡ್‌ನಲ್ಲಿ ಸರಣಿ ಗೆದ್ದಿದ್ದ ತಂಡ, 2021-2022ರ ಕೊನೆ ಸರಣಿಯಲ್ಲಿ 2-2 ಡ್ರಾ ಮಾಡಿಕೊಂಡಿತ್ತು.

ವಾಡೇಕರ್‌, ಕಪಿಲ್‌, ದ್ರಾವಿಡ್‌

ಸಾಲಿಗೆ ಸೇರುತ್ತಾರಾ ಗಿಲ್‌?

1932ರಿಂದ ಭಾರತ ತಂಡ ಇಂಗ್ಲೆಂಡ್‌ನಲ್ಲಿ ಟೆಸ್ಟ್‌ ಸರಣಿ ಆಡುತ್ತಿದೆ. ಆದರೆ 9 ದಶಕಗಳಲ್ಲಿ ಭಾರತಕ್ಕೆ ಇಂಗ್ಲೆಂಡ್‌ ನೆಲದಲ್ಲಿ ಸರಣಿ ಗೆಲ್ಲಿಸಿಕೊಟ್ಟ ನಾಯಕರು ಮೂವರು ಮಾತ್ರ. 1971ರಲ್ಲಿ ಅಜಿತ್‌ ವಾಡೇಕರ್‌, 1986ರಲ್ಲಿ ಕಪಿಲ್‌ ದೇವ್‌, 2007ರಲ್ಲಿ ರಾಹುಲ್‌ ದ್ರಾವಿಡ್‌ ನಾಯಕತ್ವದಲ್ಲಿ ಟೀಂ ಇಂಡಿಯಾ ಸರಣಿ ಗೆದ್ದಿತ್ತು. ಈ ದಿಗ್ಗಜ ನಾಯಕರ ಸಾಲಿಗೆ ಶುಭ್‌ಮನ್‌ ಗಿಲ್‌ ಸೇರ್ಪಡೆಗೊಳ್ಳಲಿದ್ದಾರೆಯೇ ಎಂಬ ಕುತೂಹಲವಿದೆ.

ಹೊಸ ತಂಡ, ಹೊಸ ನಾಯಕ,

ಹೊಸ ಟೆಸ್ಟ್‌ ಚಾಂಪಿಯನ್‌ಶಿಪ್‌

ಭಾರತ ತಂಡದಲ್ಲಿ ಈಗ ಬಹುತೇಕ ಹೊಸದು. ಗಿಲ್‌ ಮೊದಲ ಬಾರಿ ಟೆಸ್ಟ್‌ ತಂಡದ ನಾಯಕತ್ವದ ವಹಿಸುತ್ತಿದ್ದಾರೆ. ತಂಡದ ಬಹುತೇಕರಿಗೂ ಇದು ಮೊದಲ ಸರಣಿ. ಭಾರತದ 18 ಆಟಗಾರರ ಪೈಕಿ 10 ಮಂದಿ ಇದೇ ಮೊದಲ ಬಾರಿ ಇಂಗ್ಲೆಂಡ್‌ನಲ್ಲಿ ಟೆಸ್ಟ್‌ ಆಡಲು ಸಜ್ಜಾಗಿದ್ದಾರೆ. ಆರಂಬಿಕ 2 ಆವೃತ್ತಿಗಳಲ್ಲಿ ಫೈನಲ್‌ಗೇರಿ, ಕಳೆದ ವರ್ಷ ಫೈನಲ್‌ ಅಂಚಿನಲ್ಲಿ ಎಡವಿದ್ದ ತಂಡ ಹೊಸ ಟೆಸ್ಟ್‌ ಚಾಂಪಿಯನ್‌ಶಿಪ್‌(2025-27)ನಲ್ಲಿ ಟ್ರೋಫಿ ಗುರಿಯೊಂದಿಗೆ ಕಣಕ್ಕಿಳಿಯಲಿದೆ.

ಇಂಗ್ಲೆಂಡ್‌ನಲ್ಲಿ 67

ಟೆಸ್ಟ್‌ ಪೈಕಿ ಭಾರತ

ಗೆದ್ದಿದ್ದು 9ರಲ್ಲಿ ಮಾತ್ರ!

ಭಾರತ ತಂಡ 1932ರಿಂದ ಈ ವರೆಗೂ ಇಂಗ್ಲೆಂಡ್‌ನಲ್ಲಿ 67 ಟೆಸ್ಟ್‌ ಪಂದ್ಯಗಳನ್ನಾಡಿದೆ. ಈ ಪೈಕಿ ಗೆದ್ದಿದ್ದು 9 ಟೆಸ್ಟ್‌ಗಳಲ್ಲಿ ಮಾತ್ರ. ಉಳಿದಂತೆ 36 ಟೆಸ್ಟ್‌ನಲ್ಲಿ ಇಂಗ್ಲೆಂಡ್‌ ಜಯಿಸಿದ್ದರೆ, 22 ಪಂದ್ಯಗಳು ಡ್ರಾಗೊಂಡಿವೆ.