ಸಾರಾಂಶ
ಬೆಂಗಳೂರು: ಕಾಲೇಜು ವಿದ್ಯಾರ್ಥಿಗಳು ಶಿಕ್ಷಣದ ಜೊತೆಯಲ್ಲೇ ಕ್ರೀಡಾ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳಬೇಕು ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಜಯಕರ ಎಸ್ ಎಂ ಕರೆ ನೀಡಿದರು.
ಮಂಗಳವಾರ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಸಾಫ್ಟ್ ಬಾಲ್ ಚಾಂಪಿಯನ್‌ಶಿಪ್ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಕಲಿಕೆಯ ಜೊತೆಯಲ್ಲಿಯೇ ಕ್ರೀಡಾ ಚಟುವಟಿಕೆಗಳಲ್ಲೂ ಸಕ್ರೀಯ ವಾಗಿ ಪಾಲ್ಗೊಳ್ಳಬೇಕು. ಇದು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ದಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.
ಬೆಂಗಳೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಪಿ ಸಿ ಕೃಷ್ಣಸ್ವಾಮಿ ಅವರು ಮಾತನಾಡಿ, ಈ ಪಂದ್ಯಾವಳಿ ಬೆಂಗಳೂರು ವಿಶ್ವವಿದ್ಯಾಲಯ ಮತ್ತು ಸೌಂದರ್ಯಾ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಅಂಡ್ ಸೈನ್ಸ್ ಸಂಸ್ಥೆಯ ಹೆಮ್ಮೆಯ ಆಯೋಜನೆಯಾಗಿದೆ. ಹಲವಾರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಬೆಂಗಳೂರು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಶ್ರೀ ಶೈಖ್ ಲತೀಫ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಆಲ್ ಇಂಡಿಯಾ ಯೂನಿವರ್ಸಿಟಿಯ (ಎ ಐ ಯು) ಅಧಿಕಾರಿಗಳಾದ ಶ್ರೀ ಗುಲಾಬ್ ಸಿಂಗ್ ರಾಹುಲ್, ಸ್ಪರ್ಶ್ ಆಸ್ಪತ್ರೆಯ ಡಾ. ಜಾನ್ ಪೌಲ್, ಸೌಂದರ್ಯಾ ಇನ್ಸ್ಟಿಟ್ಯೂಟ್ ಅಫ್ ಮ್ಯಾನೇಜ್ಮೆಂಟ್ ಅಂಡ್ ಸೈನ್ಸ್ ನ ಪ್ರಾಂಶುಪಾಲರಾದ ಡಾ. ಬಿ ಎ ವಾಸು ಮತ್ತು ಆಲ್ ಇಂಡಿಯಾ ಯೂನಿವರ್ಸಿಟಿಯ ಸಂಘಟನಾ ಕಾರ್ಯದರ್ಶಿಯಾದ ಡಾ. ಹರೀಶ್ ಪಿ ಎಂ ಉಪಸ್ಥಿತರಿದ್ದರು.