ಸಾರಾಂಶ
6ನೇ ಆವೃತ್ತಿ ಖೇಲೋ ಇಂಡಿಯಾ ಯೂತ್ ಗೇಮ್ಸ್‌ಗೆ ಬುಧವಾರ ತೆರೆ ಬಿದ್ದಿದ್ದು, ಕರ್ನಾಟಕ 47 ಪದಕಗಳೊಂದಿಗೆ ಅಭಿಯಾನ ಕೊನೆಗೊಳಿಸಿದೆ.
ಚೆನ್ನೈ: 6ನೇ ಆವೃತ್ತಿ ಖೇಲೋ ಇಂಡಿಯಾ ಯೂತ್ ಗೇಮ್ಸ್‌ಗೆ ಬುಧವಾರ ತೆರೆ ಬಿದ್ದಿದ್ದು, ಕರ್ನಾಟಕ 47 ಪದಕಗಳೊಂದಿಗೆ ಅಭಿಯಾನ ಕೊನೆಗೊಳಿಸಿದೆ. ಜ.19ಕ್ಕೆ ಆರಂಭಗೊಂಡಿದ್ದ ಕೂಟದಲ್ಲಿ ಕರ್ನಾಟಕದ ಅಥ್ಲೀಟ್‌ಗಳು 9 ಚಿನ್ನ, 19 ಬೆಳ್ಳಿ ಹಾಗೂ 19 ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡರು. ಅಥ್ಲೆಟಿಕ್ಸ್‌ನಲ್ಲಿ ರಾಜ್ಯಕ್ಕೆ ಒಟ್ಟು 6 ಪದಕಗಳು ಒಲಿಯಿತು. 2021ರಲ್ಲಿ 3ನೇ ಸ್ಥಾನಿಯಾಗಿದ್ದ ಕರ್ನಾಟಕ ಈ ಬಾರಿ ಪದಕ ಪಟ್ಟಿಯಲ್ಲಿ 11ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. 57 ಚಿನ್ನ ಸೇರಿ 158 ಪದಕ ಬಾಚಿದ ಮಹಾರಾಷ್ಟ್ರ ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿದರೆ, 38 ಚಿನ್ನ ಸೇರಿ 98 ಪದಕ ಗೆದ್ದ ಆತಿಥೇಯ ತಮಿಳುನಾಡು 2ನೇ, 35 ಚಿನ್ನ ಸೇರಿ 103 ಪದಕ ಗೆದ್ದ ಹರ್ಯಾಣ 3ನೇ ಸ್ಥಾನಿಯಾಯಿತು.ಬುಧವಾರ ನಡೆದ ಸಮಾರೋಪ ಸಮಾರಂಭದಲ್ಲಿ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್, ತಮಿಳುನಾಡು ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡರು.