ಪ್ರಸ್ತುತ ದಿನಮಾನಗಳಲ್ಲಿ ನಾವು ಆಧುನಿಕ ಆಹಾರ ಪದ್ಧತಿ ಅಳವಡಿಕೆ ಮಾಡಿಕೊಂಡಿದ್ದೇವೆ. ಆದರೆ, ಯಾವುದು ಶುದ್ಧ ಮತ್ತು ಯಾವುದು ಅಶುದ್ಧ ಎಂಬುದನ್ನು ಪತ್ತೆ ಮಾಡುವುದೇ ಸವಾಲಿನ ಸಂಗತಿ ಆಗಿದೆ.

 ಬೆಂಗಳೂರು : ಪ್ರಸ್ತುತ ದಿನಮಾನಗಳಲ್ಲಿ ನಾವು ಆಧುನಿಕ ಆಹಾರ ಪದ್ಧತಿ ಅಳವಡಿಕೆ ಮಾಡಿಕೊಂಡಿದ್ದೇವೆ. ಆದರೆ, ಯಾವುದು ಶುದ್ಧ ಮತ್ತು ಯಾವುದು ಅಶುದ್ಧ ಎಂಬುದನ್ನು ಪತ್ತೆ ಮಾಡುವುದೇ ಸವಾಲಿನ ಸಂಗತಿ ಆಗಿದೆ. ಈ ಸಮಸ್ಯೆಯ ಪರಿಹಾರಕ್ಕೆ ಬೆಂಗಳೂರಿನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಆಯುರ್ವೇದಿಕ್‌ ಮೆಡಿಸಿನ್‌ ಆ್ಯಂಡ್‌ ರಿಸರ್ಚ್‌ ಹಾಸ್ಟಿಟಲ್‌ನ (ಐಐಎಎಂಆರ್‌) ವಿದ್ಯಾರ್ಥಿಗಳು ಸರಳ ಮಾರ್ಗ ಪ್ರದರ್ಶಿಸಿದ್ದಾರೆ.

ನಗರದ ಅರಮನೆ ಮೈದಾನದಲ್ಲಿ ಗುರುವಾರ ಆಯೋಜಿಸಿದ್ದ ‘ಎರಡನೇ ಆಯುರ್ವೇದ ವಿಶ್ವ ಸಮ್ಮೇಳನ’ದಲ್ಲಿ ಐಐಎಎಂಆರ್‌ ಮಕ್ಕಳು ಪ್ರದರ್ಶನ ಮಾಡಿದರು. ‘ಬೇಳೆಕಾಳು, ಟೀ ಪುಡಿ, ಸಕ್ಕರೆ, ಹಸಿರು ಬಟಾಣಿ, ಜೇನು ಸೇರಿ ಮೊದಲಾದ ವಸ್ತುಗಳನ್ನು ನೀರಿನಲ್ಲಿ ಹಾಕಿದ ತಕ್ಷಣ ನೀರಿನ ಬಣ್ಣ ಬದಲಾವಣೆಗೊಂಡರೆ ಅದು ಕಲಬೆರಕೆ ಎಂದು ಸುಲಭವಾಗಿ ತಿಳಿಯಬಹುದಾಗಿದೆ. ತೊಗರಿ ಬೇಳೆ, ಕಡಲೆ ಬೇಳೆಯನ್ನು ನೀರಿನ ಹಾಕಿದ ತಕ್ಷಣ ಎಣ್ಣೆ ಅಂಶ ನೀರಿನಲ್ಲಿ ತೇಲುವುದು ಜೊತೆಗೆ ನೀರು ಹಳದಿ ಬಣ್ಣಕ್ಕೆ ತಿರುಗಲಿವೆ.

ಇನ್ನು ಟೀ ಪುಡಿ ನೀರಿಗೆ ಹಾಕಿದ ತಕ್ಷಣ ನೀರಿನ ಬಣ್ಣ ಕಂದು ಬಣ್ಣಕ್ಕೆ ಪರಿವರ್ತನೆಗೊಂಡರೆ ಟೀ ಪೌಡರ್‌ ಕಲಬೆರಕೆ ಆಗಿದೆ ಎಂದು ಖಚಿತ ಪಡಿಸಿಕೊಳ್ಳಬಹುದಾಗಿದೆ. ಜೇನುಹನಿಯನ್ನು ನೀರಿಗೆ ಹಾಕಿದರೆ ಅದು ಚದರದೇ ತಳಭಾಗಕ್ಕೆ ಹೋಗಿ ಶೇಖರಣೆಗೊಂಡರೆ ಶುದ್ಧವಾಗಿದೆ ಎಂದರ್ಥ.

ಸಕ್ಕರೆ ನೀರಿಗೆ ಹಾಕಿದರೆ ಕಲಬೆರೆಕೆಗೊಂಡಿರುವ ಸೀಮೆ ಸುಣ್ಣ ನೀರಿನ ಮೇಲೆ ತೇಲುತ್ತದೆ. ಹೀಗೆ ಆಹಾರ ಪದಾರ್ಥಗಳನ್ನು ಹೇಗೆ ಪರೀಕ್ಷೆ ಮಾಡಬಹುದು ಎಂದು ಕಾಲೇಜು ವಿದ್ಯಾರ್ಥಿಗಳು ಜನರಿಗೆ ಪ್ರಾತ್ಯಕ್ಷಿಕೆ ಮೂಲಕ ತೋರಿಸಿಕೊಟ್ಟರು.

ದೇಶೀ ಹಸುವಿನ ಶುದ್ಧ ತುಪ್ಪ ಕೆಂಪಕ್ಕಿ, ಗಾಣದೆಣ್ಣೆ ಆಕರ್ಷಣೆ

ಯಾವುದು ಶುದ್ಧ?, ಯಾವುದು ಕಲಬೆರಕೆ? ತಿಳಿಸುವುದಕ್ಕೆ ಸುಲಭ ಉಪಾಯ ಪ್ರದರ್ಶಿಸಿದ ವಿದ್ಯಾರ್ಥಿಗಳು, ದೇಶಿ ಹಸುವಿನ ಶುದ್ಧ ತುಪ್ಪ, ಗಾಣದ ಎಣ್ಣೆ, ಕೆಂಪಕ್ಕಿ, ತುಪ್ಪದ ಹೀರೇಕಾಯಿಯ ನಾರಿನ ಸ್ನಾನದ ಬ್ರಷ್‌ ಸೇರಿದಂತೆ ಸ್ವದೇಶಿ ಉತ್ಪನ್ನಗಳು ಆಕರ್ಷಣೆಯ ಕೇಂದ್ರಗಳು.

ಅಷ್ಟೇ ಅಲ್ಲ, ಮೈ-ಕೈ, ಸೊಂಟ ನೋವು, ತಲೆ ನೋವಿನಿಂದ ಗಂಭೀರ ಸಮಸ್ಯೆಯ ಕಾಯಿಲೆಗಳಿಗೂ ಆರ್ಯುವೇದದ ಔಷಧ ಮತ್ತು ಮಾತ್ರೆಗಳು. ಹೀಗೆ, ಭಾರತೀಯ ಪರಂಪರೆಯ ಆರ್ಯುವೇದವನ್ನು ಮೈಗೂಡಿಸಿಕೊಳ್ಳುವುದಕ್ಕೆ ಎಂಬುದಕ್ಕೆ ಸುಪ್ರಸಿದ್ಧ ಲೇಖಕರ, ಸಂಶೋಧಕರ ಪುಸಕ್ತಗಳು ಎಲ್ಲವೂ ಒಂದೇ ಸೂರಿನಲ್ಲಿ ಲಭ್ಯ. ಎಲ್ಲಿ ಎಂದರೆ- ಬೆಂಗಳೂರು ಅರಮನೆ ಮೈದಾನದಲ್ಲಿ ಮೈದಾನದಲ್ಲಿ ಡಿ.25 ರಿಂದ 28ರ ವರೆಗೆ ಕಜೆ ಆಯುರ್ವೇದಿಕ್ ಚಾರಿಟೆಬಲ್ ಫೌಂಡೇಷನ್ ಗೇಟ್ ಸಂಖ್ಯೆ6ರ ರಾಯಲ್ ಸೆನೆಟ್ ಆ್ಯಂಡ್ ದಿ ಗ್ರ್ಯಾಂಡ್ ಕ್ಯಾಸಲ್‌ನಲ್ಲಿ 2ನೇ ಆಯುರ್ವೇದ ವಿಶ್ವ ಸಮ್ಮೇಳನದಲ್ಲಿ ಎಂಬುದೇ ಉತ್ತರ.

ಗುರುವಾರ ಸಮ್ಮೇಳನಕ್ಕೆ ಚಾಲನೆ ನೀಡಲಾಗಿದೆ. ಇನ್ನೂ ಮೂರು ದಿನ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿದೆ. ಪ್ರವೇಶ ಸಂಪೂರ್ಣ ಉಚಿತವಾಗಿದ್ದು, ಬೆಳಗ್ಗೆ 9ರಿಂದ ರಾತ್ರಿ 9 ಗಂಟೆ ವರೆಗೆ ಭೇಟಿ ನೀಡಬಹುದಾಗಿದೆ.

ಆಯುರ್ವೇದ ಕುರಿತು ಜಾಗೃತಿ

ಆಯುರ್ವೇದ ವಿಶ್ವ ಸಮ್ಮೇಳನದಲ್ಲಿ ಆಯುರ್ವೇದದ ಕುರಿತು ಜಾಗೃತಿ ಮೂಡಿಸುವುದಕ್ಕೆ ಸ್ಪರ್ಧೆ ಆಯೋಜಿಸಲಾಗಿದ್ದು, ಸುಮಾರು 20ಕ್ಕೂ ಅಧಿಕ ಕಾಲೇಜಿನ ವಿದ್ಯಾರ್ಥಿಗಳ ತಂಡವು ಈ ಸ್ಪರ್ಧೆಯಲ್ಲಿ ಭಾಗವಹಿಸಿದೆ.

ಪ್ರತಿ ತಂಡಕ್ಕೆ 30 ನಿಮಿಷ ಕಾಲಾವಕಾಶ ನೀಡಲಾಗುತ್ತದೆ. ಈ ಅವಧಿಯಲ್ಲಿ ನೃತ್ಯ, ನಾಟಕ, ರೂಪಕ, ಸಂಗೀತ, ಸಂಭಾಷಣೆ ಸೇರಿದಂತೆ ಮೊದಲಾದವುಗಳ ಮೂಲಕ ಆಯುರ್ವೇದದ ಬಗ್ಗೆ ಜನ ಜಾಗೃತಿ ಮೂಡಿಸಬೇಕು. ಅತ್ಯುತ್ತಮ ಜಾಗೃತಿ ಪ್ರದರ್ಶನ ನೀಡಿದ ತಂಡಕ್ಕೆ ಬಹುಮಾನ ನೀಡಲಾಗುತ್ತದೆ. ಪ್ರಥಮ ಬಹುಮಾನ ಮೊತ್ತ 3 ಲಕ್ಷ ರು, ದ್ವಿತೀಯಕ್ಕೆ 2 ಲಕ್ಷ ರು, ತೃತೀಯ ಬಹುಮಾನಕ್ಕೆ 1 ಲಕ್ಷ ರು. ನೀಡಲಾಗುತ್ತದೆ. ಜತೆಗೆ 10 ತಂಡಗಳಿಗೆ ಸಮಾಧಾನಕರ ಬಹುಮಾನವಾಗಿ ತಲಾ 50 ಸಾವಿರ ನೀಡಲಾಗುತ್ತದೆ.

ಆರೋಗ್ಯ ಮತ್ತು ಪರಿಸರ ಸ್ನೇಹಿ ಸ್ಯಾನಿಟರಿ ಪ್ಯಾಡ್‌

ಈ ಮೇಳದಲ್ಲಿ ಜಿ.ಎಂ.ಎಂಟರ್ ಪ್ರೈಸಸ್ ಆಯುರ್ವೇದ ಸಮ್ಮೇಳನದಲ್ಲಿ ಆರೋಗ್ಯ ಮತ್ತು ಪರಿಸರ ಸ್ನೇಹಿ ಸ್ಯಾನಿಟರಿ ಪ್ಯಾಡ್‌ಗಳ ಪ್ರದರ್ಶಿಸಿದೆ. ಅಲೋವೆರಾ, ಪುದೀನಾ ಹಾಗೂ ಬಾಳೆ ಬಳಕೆ ಮಾಡಿಕೊಂಡು ಸ್ಯಾನಿಟರಿ ಪ್ಯಾಡ್‌ ಸಿದ್ಧಪಡಿಸಲಾಗಿದೆ. ದಿನಕ್ಕೆ ಒಂದು ಪ್ಯಾಡ್‌ ಬಳಕೆ ಮಾಡಿದರೆ ಸಾಕು, ಪದೆ ಪದೇ ಬದಲಾವಣೆ ಮಾಡುವ ಅಗತ್ಯವಿಲ್ಲ. ಸುಮಾರು 250 ಎಂಎಲ್‌ನಷ್ಟು ದ್ರವವನ್ನು ಶೇಖರಣೆ ಮಾಡಿಕೊಳ್ಳುವ ಸಾಮರ್ಥ್ಯ ಈ ಪ್ಯಾಡ್‌ಗಳಿಗೆ ಇದೆ.