ಇಸ್ರೇಲ್‌-ಇರಾನ್‌ ನಡುವೆ ಸಮರ ಆರಂಭದ ಸೂಚನೆಯ ನಡುವೆಯೇ 17 ಭಾರತೀಯ ಸಿಬ್ಬಂದಿ ಇದ್ದ ಇಸ್ರೇಲ್‌ನ ಹಡಗೊಂದನ್ನು ಇರಾನ್‌ ಪಡೆಗಳು ಹೆಲಿಕಾಪ್ಟರ್ ಮೂಲಕ ದಾಳಿ ನಡೆಸಿ ತಮ್ಮ ವಶಕ್ಕೆ ತೆಗೆದುಕೊಂಡಿವೆ.

ಇರಾನ್‌ ಮೇಲೆ ಹಾರಾಟ ನಡೆಸಲ್ಲ: ಏರ್‌ ಇಂಡಿಯಾ

ನವದೆಹಲಿ: ಇರಾನ್‌ ಮತ್ತು ಇಸ್ರೇಲ್‌ ಯುದ್ಧಾತಂಕದ ಕಾರಣ ಭಾರತದ ಏರ್‌ ಇಂಡಿಯಾ ಸಂಸ್ಥೆ ಇರಾನ್‌ ವಾಯುಪ್ರದೇಶದ ಬಳಕೆಗೆ ನಿರ್ಬಂಧ ಹಾಕಿಕೊಂಡಿದೆ. ಯುರೋಪ್‌ಗೆ ಸಾಗುವ ವಿಮಾನಗಳು ಈಗ ಸುತ್ತು ಮಾರ್ಗ ಬಳಸಿ ತಮ್ಮ ಗಮ್ಯಸ್ಥಾನವನ್ನು ತಲುಪುತ್ತಿವೆ. ಇದಕ್ಕೆ ಕನಿಷ್ಠ 45 ನಿಮಿಷ ಹೆಚ್ಚು ಸಮಯ ತಗುಲುತ್ತಿದೆ. ಸಿಂಗಾಪುರದ ವಿಮಾನ ಸಂಸ್ಥೆ ಲಫ್ತಾನ್ಸಾ ಕೂಡ ಇರಾನ್‌ ವಾಯುಪ್ರದೇಶದ ಮೇಲೆ ಹಾಗೂ ಟೆಹ್ರಾನ್‌ಗೆ ತನ್ನ ವಿಮಾನಗಳ ಸಂಚಾರ ನಿಲ್ಲಿಸಿದೆ.

--ದುಬೈ: ಇಸ್ರೇಲ್‌-ಇರಾನ್‌ ನಡುವೆ ಸಮರ ಆರಂಭದ ಸೂಚನೆಯ ನಡುವೆಯೇ 17 ಭಾರತೀಯ ಸಿಬ್ಬಂದಿ ಇದ್ದ ಇಸ್ರೇಲ್‌ನ ಹಡಗೊಂದನ್ನು ಇರಾನ್‌ ಪಡೆಗಳು ಹೆಲಿಕಾಪ್ಟರ್ ಮೂಲಕ ದಾಳಿ ನಡೆಸಿ ತಮ್ಮ ವಶಕ್ಕೆ ತೆಗೆದುಕೊಂಡಿವೆ. ಇದು ಇಸ್ರೇಲ್‌ ಮೇಲೆ ಇರಾನ್‌ ನಡೆಸಲಿರುವ ದಾಳಿಯ ಆರಂಭ ಎಂದು ಹೇಳಲಾಗಿದೆ. ಆದರೆ ಇದಕ್ಕೆ ಇಸ್ರೇಲ್‌ ಖಾರವಾಗಿ ಪ್ರತಿಕ್ರಿಯಿಸಿದ್ದು, ‘ಇದರ ಪರಿಣಾಮ ಎದುರಿಸುತ್ತೀರಿ’ ಎಂದು ಎಚ್ಚರಿಕೆ ನೀಡಿದೆ.

ಪರ್ಷಿಯನ್‌ ಕೊಲ್ಲಿ ಹಾಗೂ ಒಮಾನ್‌ ಕೊಲ್ಲಿಗೆ ಸಮೀಪದಲ್ಲಿರುವ ಹೊರ್ಮುಜ್‌ ಜಲಸಂಧಿಯಲ್ಲಿ ಹಡಗು ಸಾಗುವಾಗ ಶನಿವಾರವೇ ಇರಾನ್‌ನ ಹೆಲಿಕಾಪ್ಟರ್‌ಗಳು ದಾಳಿ (ಹೆಲಿಬೋರ್ನ್‌ ದಾಳಿ) ನಡೆಸಿ ವಶಪಡಿಸಿಕೊಂಡಿದೆ. ಇದರ ವಿಡಿಯೋ ಮಾಧ್ಯಮಗಳಿಗೆ ಲಭ್ಯವಾಗಿದೆ.ಈ ಬಗ್ಗೆ ಇರಾನ್‌ ಸರ್ಕಾರಿ ಮಾಧ್ಯಮ ವರದಿ ಮಾಡಿದ್ದು, ‘ಗಲ್ಫ್‌ನಲ್ಲಿ ಜಿಯೋನಿಸ್ಟ್ ಆಡಳಿತಕ್ಕೆ (ಇಸ್ರೇಲ್) ಸಂಬಂಧಿಸಿದ ‘ಎಂಸಿಎಸ್ ಆರೀಸ್’ ಹೆಸರಿನ ಕಂಟೇನರ್ ಹಡಗನ್ನು ಇರಾನ್‌ ರೆವಲ್ಯೂಷನರಿ ಗಾರ್ಡ್‌ ಯೋಧರು ವಶಪಡಿಸಿಕೊಂಡಿದ್ದಾರೆ’ ಎಂದಿದೆ. ಇದು ಝೋಡಿಯಾಕ್‌ ಎಂಬ ಇಸ್ರೇಲಿ ಕಂಪನಿಗೆ ಸಂಬಂಧಿಸಿದ ಹಡಗು. ಯುಎಇನಿಂದ ನವೀ ಮುಂಬೈಗೆ ಬರುತ್ತಿತ್ತು ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.

ಇಸ್ರೇಲ್ ಎಚ್ಚರಿಕೆ:

ಇಸ್ರೇಲ್‌ ಸೇನಾ ವಕ್ತಾರ ಡೇನಿಯಲ್‌ ಹಗರಿ ಈ ಬಗ್ಗೆ ಮಾತನಾಡಿ, ‘ಈ ಪ್ರದೇಶದಲ್ಲಿ ಸಂಘರ್ಷವನ್ನು ಹೆಚ್ಚಿಸುವ ‘ಪರಿಣಾಮಗಳನ್ನು’ ಇರಾನ್ ಅನುಭವಿಸಲಿದೆ. ಇರಾನ್ ಮತ್ತಷ್ಟು ಪರಿಸ್ಥಿತಿಯನ್ನು ಉಲ್ಬಣಗೊಳಿಸಲು ಯತ್ನಿಸುತ್ತಿದೆ’ ಎಂದು ಕಿಡಿಕಾರಿದ್ದಾರೆ.

ಇರಾನ್‌ ಜತೆ ಮಾತುಕತೆ- ಭಾರತ:

ಇರಾನ್‌ ಪಡೆ ವಶಪಡಿಸಿಕೊಂಡ ಇಸ್ರೇಲಿ ಕಂಟೇನರ್ ಹಡಗಿನಲ್ಲಿದ್ದ 25 ಸಿಬ್ಬಂದಿಗಳಲ್ಲಿ 17 ಮಂದಿ ಭಾರತೀಯರು ಎಂದು ಭಾರತ ಸರ್ಕಾರದ ಮೂಲಗಳು ಹೇಳಿವೆ. ಅಲ್ಲದೆ, ಎಲ್ಲ ಸಿಬ್ಬಂದಿಯ ಸುರಕ್ಷತೆಗಾಗಿ ಇರಾನ್‌ ಅಧಿಕಾರಿಗಳ ಜತೆ ಸಂಪರ್ಕದಲ್ಲಿ ಇರುವುದಾಗಿ ಅವು ಹೇಳಿವೆ.

ಈ ಕೊಲ್ಲಿಯ ಮೂಲಕ ಜಗತ್ತಿನ 5ನೇ 1ರಷ್ಟು ತೈಲ ಸಾಗಣೆ ನಡೆಯುವ ಕಾರಣ, ಇಲ್ಲಿ ಯುದ್ಧ ನಡೆದರೆ ಜಾಗತಿಕ ತೈಲ ಪೂರೈಕೆ ವ್ಯತ್ಯಯವಾಗುವ ಸಾಧ್ಯತೆಯಿದೆ.