ಸಾರಾಂಶ
ಟಿಬೆಟ್ ಹೋರಾಟ ಬೆಂಬಲಿಸುವ ಸಲುವಾಗಿ ಸರ್ವಪಕ್ಷದ ಸುಮಾರು 80 ಸಂಸದರು ಟಿಬೆಟಿಯನ್ ಬೌದ್ಧ ಧರ್ಮಗುರು ದಲೈಲಾಮಾಗೆ ಭಾರತ ರತ್ನ ನೀಡುವಂತೆ ಆಗ್ರಹಿಸಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ನವದೆಹಲಿ: ಟಿಬೆಟ್ ಹೋರಾಟ ಬೆಂಬಲಿಸುವ ಸಲುವಾಗಿ ಸರ್ವಪಕ್ಷದ ಸುಮಾರು 80 ಸಂಸದರು ಟಿಬೆಟಿಯನ್ ಬೌದ್ಧ ಧರ್ಮಗುರು ದಲೈಲಾಮಾಗೆ ಭಾರತ ರತ್ನ ನೀಡುವಂತೆ ಆಗ್ರಹಿಸಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಜೊತೆಗೆ ದಲೈಲಾಮಾ ಅವರು ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲು ಅವಕಾಶ ಕಲ್ಪಿಸುವಂತೆಯೂ ಒತ್ತಾಯಿಸಿದ್ದಾರೆ.
ಮೂಲಗಳ ಪ್ರಕಾರ ಬಿಜೆಪಿ , ಬಿಜು ಜನತಾದಳ, ಜನತಾದಳ( ಯುನೈಟೆಡ್) ಸಂಸದರನ್ನು ಒಳಗೊಂಡ ಟೆಬೆಟ್‌ಗಾಗಿನ ಸರ್ವಪಕ್ಷ ಭಾರತೀಯ ಸಂಸದೀಯ ವೇದಿಕೆಯು ಈ ಪತ್ರವನ್ನು ಕಳುಹಿಸಿದೆ. ವೇದಿಕೆಯ ಸಭೆಯಲ್ಲಿ ನಿರ್ಣಯ ಅಂಗೀಕರಿಸಿದ್ದು, ಬಿಜೆಡಿ ರಾಜ್ಯಸಭಾ ಸಂಸದ ಸುಜೀತ್ ಕುಮಾರ್ ನೇತೃತ್ವದಲ್ಲಿ 10 ಸದಸ್ಯರ ಸಮಿತಿಯು ಈ ಅಭಿಯಾನಕ್ಕೆ ಮುಂದಾಗಿದ್ದು ಈಗಾಲೇ 80 ಸಂಸದರಿಂದ ಸಹಿ ಸಂಗ್ರಹಿಸಿದೆ.
ಟಿಬೆಟ್ ಹೋರಾಟ ಬೆಂಬಲಿಸುವ ಸರ್ವಪಕ್ಷ ಭಾರತೀಯ ಸಂಸದೀಯ ವೇದಿಕೆಯು ಕಳೆದ ವರ್ಷ ಡಿಸೆಂಬರ್‌ನಲ್ಲಿ ಉದ್ಘಾಟನೆಯಾದ ಬಳಿಕ ಚೀನಾದ ಟೀಕೆ ಎದುರಿಸಿತ್ತು.
ದಲೈಲಾಮಾಗೆ ಮೋದಿ ಜನ್ಮದಿನಕ್ಕೆ ಶುಭ ಕೋರಿದ್ದಕ್ಕೆ ಚೀನಾ ಆಕ್ಷೇಪ
ಬೀಜಿಂಗ್: ದಲೈಲಾಮಾ 90ನೇ ಜನ್ಮದಿನಕ್ಕೆ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿದ್ದಕ್ಕೆ ಮತ್ತು ಹುಟ್ಟುಹಬ್ಬದ ಆಚರಣೆಯಲ್ಲಿ ಭಾರತೀಯ ಅಧಿಕಾರಿಗಳು ಭಾಗಿಯಾಗಿದ್ದಕ್ಕೆ ಚೀನಾ ಆಕ್ಷೇಪ ವ್ಯಕ್ತಪಡಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಚೀನಾ ವಿದೇಶಾಂಗ ಇಲಾಖೆ ವಕ್ತಾರ ಮಾವೋ, ‘14ನೇ ದಲೈಲಾಮ ರಾಜಕೀಯ ಭ್ರಷ್ಟ. ಅವರು ದೀರ್ಘಕಾಲದಿಂದ ಪ್ರತ್ಯೇಕವಾದಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಧರ್ಮದ ನೆಪದಲ್ಲಿ ಟಿಬೆಟ್‌ನ್ನು ಪ್ರತ್ಯೇಕಿಸಲು ಪ್ರಯತ್ನಿಸುತ್ತಿದ್ದಾರೆ. ಇದರ ಬಗ್ಗೆ ಚೀನಾಗಿರುವ ಸೂಕ್ಷ್ಮತೆವನ್ನು ಭಾರತ ಪ್ರಶಂಶಿಸಬೇಕು. ದಲೈಲಾಮ ಅವರ ಪ್ರತ್ಯೇಕವಾದಿ ಮನಸ್ಥಿತಿ ಗುರುತಿಸಬೇಕು. ಭಾರತವು ವಿವೇಕದಿಂದ ವರ್ತಿಸಬೇಕು ಮತ್ತು ಮಾತನಾಡಬೇಕು. ಚೀನಾದ ಆಂತರಿಕ ವ್ಯವಹಾರಗಳಲ್ಲಿ ಮಧ್ಯಪ್ರವೇಶಿಸಲು ಈ ವಿಷಯವನ್ನು ಬಳಸುವುದನ್ನು ನಿಲ್ಲಿಸಬೇಕು’ ಎಂದರು.