ಗಾಜಾ ಸಿಲುಕಿದ್ದ ವಿದೇಶಿಗರಿಗೆ ಸ್ಥಳ ಬಿಡಲು ಅವಕಾಶ
KannadaprabhaNewsNetwork | Published : Oct 15 2023, 12:45 AM IST
ಗಾಜಾ ಸಿಲುಕಿದ್ದ ವಿದೇಶಿಗರಿಗೆ ಸ್ಥಳ ಬಿಡಲು ಅವಕಾಶ
ಸಾರಾಂಶ
ಕಳೆದೊಂದು ವಾರದಿಂದ ನಡೆಯುತ್ತಿರುವ ಇಸ್ರೇಲ್-ಹಮಾಸ್ ಸಂಘರ್ಷದ ಹಿನ್ನೆಲೆಯಲ್ಲಿ ಗಾಜಾ ಪಟ್ಟಿ ಪ್ರದೇಶದಲ್ಲಿ ಸಿಕ್ಕಿಹಾಕಿಕೊಂಡಿರುವ ವಿದೇಶಿಯರಿಗೆ ಗಾಜಾ ತೊರೆಯಲು ಕೊನೆಗೂ ಅವಕಾಶ ಮಾಡಿಕೊಡಲಾಗಿದೆ.
ಜೆರುಸಲೇಂ: ಕಳೆದೊಂದು ವಾರದಿಂದ ನಡೆಯುತ್ತಿರುವ ಇಸ್ರೇಲ್-ಹಮಾಸ್ ಸಂಘರ್ಷದ ಹಿನ್ನೆಲೆಯಲ್ಲಿ ಗಾಜಾ ಪಟ್ಟಿ ಪ್ರದೇಶದಲ್ಲಿ ಸಿಕ್ಕಿಹಾಕಿಕೊಂಡಿರುವ ವಿದೇಶಿಯರಿಗೆ ಗಾಜಾ ತೊರೆಯಲು ಕೊನೆಗೂ ಅವಕಾಶ ಮಾಡಿಕೊಡಲಾಗಿದೆ. 24 ಗಂಟೆಯೊಳಗೆ ಉತ್ತರ ಗಾಜಾದ 11 ಲಕ್ಷ ಜನರಿಗೆ ಸ್ಥಳ ತೆರವು ಮಾಡಲು ಇಸ್ರೇಲ್ ಸೇನೆ ಸೂಚನೆ ನೀಡಿದ ಬೆನ್ನಲ್ಲೇ ಈ ಅವಕಾಶ ಕಲ್ಪಿಸಲಾಗಿದೆ. ಈ ತೆರವು ಕಾರ್ಯಾಚರಣೆಗೆ ಇಸ್ರೇಲ್ ಮತ್ತು ಹಮಾಸ್ ಉಗ್ರರ ಕಡೆಯಿಂದ ಅನುಮತಿ ಸಿಕ್ಕಿದೆ. ಒಪ್ಪಂದ ಪ್ರಕ್ರಿಯೆಯಲ್ಲಿ ಈಜಿಪ್ಟ್, ಅಮೆರಿಕ ಹಾಗೂ ಖತಾರ್ ಕೂಡ ಪಾಲ್ಗೊಂಡಿವೆ. ಗಾಜಾಕ್ಕೆ ಪ್ರವೇಶ ಮಾಡಲು ಮತ್ತು ಅಲ್ಲಿಂದ ಹೊರಗೆ ಹೋಗಲು ಇರುವುದು ಎರಡೇ ಸ್ಥಳ. ಈ ಪೈಕಿ ಉತ್ತರ ಭಾಗದಲ್ಲಿರುವ ‘ಇರೇಜ್ ಚೆಕ್‌ಪಾಯಿಂಟ್’ ಇಸ್ರೇಲ್ ನಿಗಾದಲ್ಲಿದ್ದರೆ, ದಕ್ಷಿಣದ ‘ರಫಾ ಚೆಕ್‌ಪಾಯಿಂಟ್’ ಈಜಿಪ್ಟ್ ವಶದಲ್ಲಿದೆ. ಎರಡೂ ಚೆಕ್‌ಪಾಯಿಂಟ್‌ಗಳನ್ನು ಶನಿವಾರದಿಂದಲೇ ಮುಕ್ತಗೊಳಿಸಲಾಗಿದೆ. ಈ ಎರಡೂ ಚೇಕ್‌ಪಾಯಿಂಟ್‌ಗಳತ್ತ ದಾಳಿ ನಡೆಸುವುದಿಲ್ಲ ಎಂದು ಇಸ್ರೇಲ್ ಭರವಸೆ ನೀಡಿದೆ. ಹೀಗಾಗಿ ಗಾಜಾದಲ್ಲಿ ಸಿಕ್ಕಿಹಾಕಿಕೊಂಡಿದ್ದ ವಿದೇಶಿಯರು ಎರಡೂ ಚೆಕ್‌ಪಾಯಿಂಟ್‌ಗಳಿಂದ ತರಾತುರಿಯಲ್ಲಿ ದೇಶ ತೊರೆಯುತ್ತಿದ್ದಾರೆ. ಇತ್ತೀಚೆಗೆ ಭಾರತ ಸರ್ಕಾರ ಗಾಜಾದಲ್ಲಿ 4 ಹಾಗೂ ವೆಸ್ಟ್ ಬ್ಯಾಂಕ್‌ನಲ್ಲಿ 12 ಭಾರತೀಯರು ಸಿಲುಕಿದ್ದಾರೆ ಎಂದಿತ್ತು. ಈಗ ಒಪ್ಪಂದದಿಂದ ಇವರ ಸುರಕ್ಷಿತ ಸ್ಥಳಾಂತರಕ್ಕೂ ಅವಕಾಶ ಲಭಿಸಲಿದೆ.