ಬಾಂಗ್ಲಾದೇಶದ ಪ್ರಧಾನಿ ಶೇಖ್‌ ಹಸೀನಾ ಮನೆ ಹಾಗೂ ಸಂಸತ್ತಿಗೆ ನುಗ್ಗಿ ದಂಗೆಕೋರರ ಮೋಜು!

| Published : Aug 06 2024, 12:40 AM IST / Updated: Aug 06 2024, 04:50 AM IST

ಸಾರಾಂಶ

ಬಾಂಗ್ಲಾದೇಶ ಪ್ರಧಾನಿ ಶೇಖ್‌ ಹಸೀನಾ ಅವರ ಆಡಳಿತದ ವಿರುದ್ಧ ಸಿಡಿದೆದ್ದ ಪ್ರತಿಭಟನಾಕಾರರು ಹಾಗೂ ವಿದ್ಯಾರ್ಥಿಗಳು, ಸೋಮವಾರ ಹಸೀನಾ ಅವರ ಅಧಿಕೃತ ನಿವಾಸಕ್ಕೆ ನುಗ್ಗಿದ್ದು, ಮನೆಯಲ್ಲಿದ್ದ ಕಂಡಕಂಡ ವಸ್ತುಗಳನ್ನು ದೋಚಿದ್ದಾರೆ  

ಢಾಕಾ: ಬಾಂಗ್ಲಾದೇಶ ಪ್ರಧಾನಿ ಶೇಖ್‌ ಹಸೀನಾ ಅವರ ಆಡಳಿತದ ವಿರುದ್ಧ ಸಿಡಿದೆದ್ದ ಪ್ರತಿಭಟನಾಕಾರರು ಹಾಗೂ ವಿದ್ಯಾರ್ಥಿಗಳು, ಸೋಮವಾರ ಹಸೀನಾ ಅವರ ಅಧಿಕೃತ ನಿವಾಸಕ್ಕೆ ನುಗ್ಗಿದ್ದು, ಮನೆಯಲ್ಲಿದ್ದ ಕಂಡಕಂಡ ವಸ್ತುಗಳನ್ನು ದೋಚಿದ್ದಾರೆ ಹಾಗೂ ಅವರ ಬೆಡ್‌ರೂಮಿಗೆ ನುಗ್ಗಿ ಪ್ರಧಾನಿ ಮಲಗುವ ಬೆಡ್‌ ಮೇಲೆ ಮಲಗಿ ಆನಂದ ಅನುಭವಿಸಿದ್ದಾರೆ. ಇದಲ್ಲದೆ ಸಂಸತ್ತಿಗೂ ನುಗ್ಗಿ ಸಂಸದರ ಸೀಟು, ಸಭಾಧ್ಯಕ್ಷ ಪೀಠ, ಪ್ರಧಾನಿ ಕೂರುವ ಸ್ಥಾನದಲ್ಲಿ ಕೂತು ಮಜಾ ಮಾಡಿದ್ದಾರೆ.

ಹಸೀನಾ ಸರ್ಕಾರದ ಔದ್ಯೋಗಿಕ ಮೀಸಲು ನೀತಿ ವಿರುದ್ಧ ಕೆಲವು ದಿನಗಳಿಂದ ಬಾಂಗ್ಲಾದಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ನಡೆಯುತ್ತಿದ್ದು, ಸೋಮವಾರ ತೀವ್ರ ಸ್ವರೂಪ ಪಡೆದುಕೊಂಡಿತು. ಪ್ರತಿಭಟನಾಕಾರರು ಹಸೀನಾ ನಿವಾಸಕ್ಕೆ ನುಗ್ಗಲು ಯತ್ನಿಸಿದಾಗ ಅಪಾಯದ ಮುನ್ಸೂಚನೆ ಅರಿತ ಹಸೀನಾ ಸೇನಾ ವಿಮಾನದಲ್ಲಿ ವಿದೇಶಕ್ಕೆ ಪಲಾಯನ ಆದರು.

ಇದೇ ಸಮಯ ಕಾಯುತ್ತಿದ್ದ ಪ್ರತಿಭಟನಾಕಾರರು ಪ್ರಧಾನಿ ನಿವಾಸದಲ್ಲಿನ ಹೂಕುಂಡಗಳು, ಕೋಳಿ, ಮೀನು, ತರಕಾರಿಗಳು ಮತ್ತು ಪೀಠೋಪಕರಣಗಳನ್ನು ದೋಚಿದ್ದಾರೆ. ಕೆಲವರು ಹಸೀನಾ ಅವರ ಕಪಾಟು ತೆಗೆದು ಸೀರೆ ಹಾಗೂ ಇತರ ವಸ್ತುಗಳನ್ನೂ ದೋಚಿದ್ದಾರೆ.

ಇನ್ನು ಮಧ್ಯಾಹ್ನವಾದ ಕಾರಣ ಪ್ರಧಾನಿ ನಿವಾಸದಲ್ಲಿನ ನಿವಾಸಿಗಳು ಹಾಗೂ ಅತಿಥಿಗಳಿಗೆ ಸಿದ್ಧಪಡಿಸಿ ಇಡಲಾಗಿದ್ದ ರುಚಿಯಾದ ಭೋಜನವನ್ನು ಪ್ರತಿಭಟನಾಕಾರರು ಸವಿದಿದ್ದಾರೆ. ಬಳಿಕ ಹಸೀನಾ ಅವರ ಶಯನಗೃಹಕ್ಕೆ ಹೋಗಿ ಅವರು ಮಲಗುವ ಹಾಸಿಗೆ ಮೇಲೆ ಬಿದ್ದು ಹೊರಳಾಡಿದ್ದಾರೆ. ಇನ್ನು ಕೆಲವರು ಹಸೀನಾ ನಿವಾಸದಲ್ಲಿರುವ ಪುಟ್ಟ ಕೊಳದಲ್ಲಿನ ಬೋಟ್‌ನಲ್ಲಿ ಯಾನ ಮಾಡಿ ಸಂಭ್ರಮಿಸಿದ್ದಾರೆ.

---

ಬಾಂಗ್ಲಾ, ಆಫ್ಘನ್‌ ದೃಶ್ಯಗಳ ಪುನರಾವರ್ತನೆ

ಕೆಲವು ವರ್ಷ ಹಿಂದೆ ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನದಲ್ಲಿ ಚುನಾಯಿತ ಸರ್ಕಾರಗಳನ್ನು ದಂಗೆ ಮೂಲಕ ಬೀಳಿಸಲಾಗಿತ್ತು. ಆಗ ಶ್ರೀಲಂಕಾದಲ್ಲಿ ಅಂದಿನ ಅಧ್ಯಕ್ಷ ಗೋಟಬಾಯ ರಾಜಪಕ್ಸೆ ಅವರ ಅಧ್ಯಕ್ಷೀಯ ಅರಮನೆಗೆ ನುಗ್ಗಿದ್ದ ಪ್ರತಿಭಟನಾಕಾರರು ಸಿಕ್ಕ ಸಿಕ್ಕ ವಸ್ತು ಲೂಟಿ ಮಾಡಿದ್ದರು ಹಾಗೂ ಅರಮನೆಯಲ್ಲಿ ಸಕಲ ಸುಪ್ಪತ್ತಿಗೆಗಳನ್ನು ಸವಿದಿದ್ದರು. ಇನ್ನು ಅಫ್ಘಾನಿಸ್ತಾನದಲ್ಲಿ ಚುನಾಯಿತ ಸರ್ಕಾರವನ್ನು ಬೀಳಿಸಿ ತಾಲಿಬಾನಿಗಳು ಅಧಿಕಾರಕ್ಕೆ ಬಂದಾಗಲೂ ಅಧ್ಯಕ್ಷರ ಅರಮನೆ, ಮಕ್ಕಳ ಆಟದ ಪಾರ್ಕುಗಳು, ಇತ್ಯಾದಿ ಕಡೆ ಮೋಜು ಮಾಡಿದ್ದರು.