ದೇಶದ್ರೋಹದ ಆರೋಪದಡಿ ಬಂಧಿತರಾಗಿದ್ದ ಇಸ್ಕಾನ್‌ ಸನ್ಯಾಸಿ ಚಿನ್ಮಯ್‌ ದಾಸ್‌ ಅವರಿಗೆ ಜಾಮೀನಿಲ್ಲ

| Published : Jan 03 2025, 12:31 AM IST / Updated: Jan 03 2025, 04:09 AM IST

ಸಾರಾಂಶ

 ಮೊಹಮ್ಮದ್‌ ಯೂನಸ್‌ ನೇತೃತ್ವದ ಬಾಂಗ್ಲಾದೇಶದ ಮಧ್ಯಂತರ ಸರ್ಕಾರ ಭಾರತ ವಿರೋಧಿ ಹೆಜ್ಜೆಗಳನ್ನಿಡುತ್ತಿರುವ ನಡುವೆಯೇ, ದೇಶದ್ರೋಹದ ಆರೋಪದಡಿ ನ.25ರಂದು ಬಂಧಿತರಾಗಿದ್ದ ಇಸ್ಕಾನ್‌ ಸನ್ಯಾಸಿ ಚಿನ್ಮಯ್‌ ದಾಸ್‌ ಅವರಿಗೆ ಜಾಮೀನು ನೀಡಲು ಅಲ್ಲಿನ ನ್ಯಾಯಾಲಯ ನಿರಾಕರಿಸಿದೆ.

ಢಾಕಾ: ಮೊಹಮ್ಮದ್‌ ಯೂನಸ್‌ ನೇತೃತ್ವದ ಬಾಂಗ್ಲಾದೇಶದ ಮಧ್ಯಂತರ ಸರ್ಕಾರ ಭಾರತ ವಿರೋಧಿ ಹೆಜ್ಜೆಗಳನ್ನಿಡುತ್ತಿರುವ ನಡುವೆಯೇ, ದೇಶದ್ರೋಹದ ಆರೋಪದಡಿ ನ.25ರಂದು ಬಂಧಿತರಾಗಿದ್ದ ಇಸ್ಕಾನ್‌ ಸನ್ಯಾಸಿ ಚಿನ್ಮಯ್‌ ದಾಸ್‌ ಅವರಿಗೆ ಜಾಮೀನು ನೀಡಲು ಅಲ್ಲಿನ ನ್ಯಾಯಾಲಯ ನಿರಾಕರಿಸಿದೆ.

ಗುರುವಾರ ನಡೆದ ಜಾಮೀನು ಅರ್ಜಿ ವಿಚಾರಣೆ ವೇಳೆ ದಾಸ್‌, ವರ್ಚ್ಯುವಲ್‌ ಆಗಿ ನ್ಯಾಯಾಲಯದ ಮುಂದೆ ಹಾಜರಾಗಿದ್ದರು. ಈ ವೇಳೆ ದಾಸ್‌, ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಆರೋಪ ನಿರಾಧಾರ. ಆರೋಪಿತ ಪ್ರಕರಣದಲ್ಲಿ ಬಳಕೆಯಾಗಿದ್ದು ಬಾಂಗ್ಲಾದೇಶದ ರಾಷ್ಟ್ರಧ್ವಜ ಅಲ್ಲ ಎಂದು ದಾಸ್‌ ಪರ ವಕೀಲರು ವಾದ ಮಂಡಿಸಿದರು.

 ಆದರೆ ಸರ್ಕಾರದ ಪರ ವಕೀಲರು ದಾಸ್‌, ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆ. ಅವರಿಗೆ ಜಾಮೀನು ನೀಡಬಾರದು ಎಂದು ವಾದಿಸಿದರು. ಹೀಗೆ ಸುಮಾರು 30 ನಿಮಿಷಗಳ ಕಾಲ ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ, ದಾಸ್‌ಗೆ ಜಾಮೀನು ನಿರಾಕರಿಸಿ ಆದೇಶ ಹೊರಡಿಸಿತು.

ಈ ನಡುವೆ ದಾಸ್‌ ಪರವಾಗಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ಅವರ ಪರ ವಕೀಲರು ಹೇಳಿದ್ದಾರೆ.

ಬಾಂಗ್ಲಾದೇಶದಲ್ಲಿ ಶೇಖ್‌ ಹಸೀನಾ ಸರ್ಕಾರದ ಪದಚ್ಯುತಿ ಬಳಿಕ ಹಿಂದೂಗಳು ಮತ್ತು ದೇಗುಲಗಳ ಮೇಲೆ ದಾಳಿ ನಡೆಸಿತ್ತು. ಇದನ್ನು ಖಂಡಿಸಿ ನಡೆಸಿದ ಪ್ರತಿಭಟನೆ ವೇಳೆ ದಾಸ್‌, ಬಾಂಗ್ಲಾದೇಶ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ ಅವರು ಮತ್ತು ಇತರೆ 18 ಜನರ ವಿರುದ್ಧ ಕಳೆದ ಅ.31ರಂದು ಪ್ರಕರನ ದಾಖಲಿಸಲಾಗಿತ್ತು.