ಆಫ್ರಿಕಾ ಮೂಲದ ಬ್ರಿಟನ್‌ ವ್ಯಕ್ತಿಯೊಬ್ಬ ಇಸ್ಕಾನ್‌ನ ಸಾತ್ವಿಕ ಆಹಾರದ ರೆಸ್ಟೋರೆಂಟ್‌ನಲ್ಲಿ ಮಾಂಸಾಹಾರ ಸೇವಿಸಿದ ಘಟನೆ ಲಂಡನ್‌ನಲ್ಲಿ ನಡೆದಿದೆ. ಈ ಉದ್ಧಟತನದ ವಿಡಿಯೋ ವೈರಲ್‌ ಅಗುತ್ತಿದ್ದು, ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ಲಂಡನ್‌: ಆಫ್ರಿಕಾ ಮೂಲದ ಬ್ರಿಟನ್‌ ವ್ಯಕ್ತಿಯೊಬ್ಬ ಇಸ್ಕಾನ್‌ನ ಸಾತ್ವಿಕ ಆಹಾರದ ರೆಸ್ಟೋರೆಂಟ್‌ನಲ್ಲಿ ಮಾಂಸಾಹಾರ ಸೇವಿಸಿದ ಘಟನೆ ಲಂಡನ್‌ನಲ್ಲಿ ನಡೆದಿದೆ. ಈ ಉದ್ಧಟತನದ ವಿಡಿಯೋ ವೈರಲ್‌ ಅಗುತ್ತಿದ್ದು, ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ಮೊದಲಿಗೆ ರೆಸ್ಟೋರೆಂಟ್‌ ಒಳಹೊಕ್ಕ ವ್ಯಕ್ತಿ, ‘ಇಲ್ಲಿ ಮಾಂಸಾಹಾರ ಸಿಗುವುದಿಲ್ಲವೇ?’ ಎಂದು ಪ್ರಶ್ನಿಸಿದ್ದಾನೆ. ಅದಕ್ಕೆ ಅಲ್ಲಿದ್ದ ಸಿಬ್ಬಂದಿ, ‘ಇಲ್ಲಿ ಮಾಂಸ, ಈರುಳ್ಳಿ, ಬೆಳ್ಳುಳ್ಳಿ ಇರುವ ಆಹಾರ ಸಿಗುವುದಿಲ್ಲ’ ಎಂದು ವಿವರಿಸಿದ್ದಾರೆ. ಕೂಡಲೇ ಆತ ತನ್ನೊಂದಿಗೆ ತಂದಿದ್ದ ಡಬ್ಬಿ ತೆರೆದು, ಚಿಕನ್‌ ತಿನ್ನಲು ಆರಂಭಿಸಿದ್ದಾನೆ. ಸಾಲದ್ದಕ್ಕೆ, ಅಲ್ಲಿದ್ದವರಿಗೂ ಕೊಡಲು ಮುಂದಾಗಿದ್ದಾನೆ. ಎಚ್ಚರಿಕೆಗಳ ಹೊರತಾಗಿಯೂ ಆತ ಮನಸೋಇಚ್ಛೆ ವರ್ತಿಸತೊಡಗಿದಾಗ, ಭದ್ರತಾ ಸಿಬ್ಬಂದಿ ಬಂದು ಅವನನ್ನು ಹೊರದಬ್ಬಿದ್ದಾರೆ.

‘ಆತ ಧಾರ್ಮಿಕ ಭಾವನೆಗಳನ್ನು ಅವಮಾನಿಸಲು ಹೀಗೆ ಮಾಡಿದ್ದಾನೆ’ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿದ್ದು, ಅವನ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಲಾಗುತ್ತಿದೆ.