ಶ್ರೀ ಲಕ್ಷ್ಮೀದೇವಿ ಅಮ್ಮನ ಜಾತ್ರೆ: ಮಾಂಸಾಹಾರ ನಿಷೇಧ

| Published : Mar 18 2025, 12:34 AM IST

ಸಾರಾಂಶ

ಕುದೂರು: ಗ್ರಾಮದಲ್ಲಿ ಮಾ.24ರಿಂದ ಶ್ರೀಲಕ್ಷ್ಮೀದೇವಿ ಅಮ್ಮನ ಜಾತ್ರೋತ್ಸವದ ಪ್ರಯುಕ್ತ 10 ದಿನಗಳ ಕಾಲ ಮಾಂಸಾಹಾರ ಸೇವಿಸುವಂತಿಲ್ಲ. ಮೆಣಸಿನಕಾಯಿ ಘಾಟು ಮಾಡಿ ಖಾರದ ಪುಡಿ ಮಾಡುವಂತಿಲ್ಲ. ಏಕೆಂದರೆ ಗ್ರಾಮದ ಶ್ರೀ ಲಕ್ಷ್ಮೀದೇವಿ ಅಮ್ಮನವರ ಅಗ್ನಿಕುಂಡದ ಪ್ರಯುಕ್ತ ಕಂಬವನ್ನು ನೆಟ್ಟು ಜಾತ್ರೆ ಘೋಷಿಸುವುದು ಇಲ್ಲಿನ ಪದ್ಧತಿ. ಘೋಷಣೆ ನಂತರ ಗ್ರಾಮಸ್ಥರು ಕಟ್ಟುನಿಟ್ಟಾಗಿ ಪಾಲಿಸುವುದು ನಿಯಮ.

ಕುದೂರು: ಗ್ರಾಮದಲ್ಲಿ ಮಾ.24ರಿಂದ ಶ್ರೀಲಕ್ಷ್ಮೀದೇವಿ ಅಮ್ಮನ ಜಾತ್ರೋತ್ಸವದ ಪ್ರಯುಕ್ತ 10 ದಿನಗಳ ಕಾಲ ಮಾಂಸಾಹಾರ ಸೇವಿಸುವಂತಿಲ್ಲ. ಮೆಣಸಿನಕಾಯಿ ಘಾಟು ಮಾಡಿ ಖಾರದ ಪುಡಿ ಮಾಡುವಂತಿಲ್ಲ. ಏಕೆಂದರೆ ಗ್ರಾಮದ ಶ್ರೀ ಲಕ್ಷ್ಮೀದೇವಿ ಅಮ್ಮನವರ ಅಗ್ನಿಕುಂಡದ ಪ್ರಯುಕ್ತ ಕಂಬವನ್ನು ನೆಟ್ಟು ಜಾತ್ರೆ ಘೋಷಿಸುವುದು ಇಲ್ಲಿನ ಪದ್ಧತಿ. ಘೋಷಣೆ ನಂತರ ಗ್ರಾಮಸ್ಥರು ಕಟ್ಟುನಿಟ್ಟಾಗಿ ಪಾಲಿಸುವುದು ನಿಯಮ.

ದಿಂಡಿಗದ ಜಾತಿಯ ಮರವನ್ನು ಹುಡುಕಿ ಅದರಲ್ಲಿ ಮೂರು ಕವಲುಗಳಿರುವ ಭಾಗವನ್ನು ಹುಡುಕಿಕೊಂಡು ಅದಕ್ಕೆ ಪೂಜೆ ಸಲ್ಲಿಸಿ ಶ್ರದ್ಧಾಭಕ್ತಿಯಿಂದ ಅದನ್ನು ಮಂಗಳವಾದ್ಯಗಳೊಂದಿಗೆ ತಂದು ದೇವಾಲಯದ ಮಂಟಪದೊಳಗೆ ನೆಡಲಾಗುತ್ತದೆ. ಹೀಗೆ ಕಂಬ ನೆಟ್ಟ ಹತ್ತು ದಿನಗಳ ಕಾಲ ಗ್ರಾಮದಲ್ಲಿ ಮಾಂಸಾಹಾರ ಸೇವಿಸುವಂತಿಲ್ಲ.

ಸರ್ವಜನಾಂಗದ ಜಾತ್ರೆ:

ಜಾತ್ರೆಯಲ್ಲಿ ಎಲ್ಲಾ ಜಾತಿ ಧರ್ಮದವರು ಸೇರುವುದು ಪದ್ಧತಿ, ಆದರೆ ಕುದೂರು ಗ್ರಾಮದ ಶ್ರೀಲಕ್ಷ್ಮೀದೇವಿ ಅಮ್ಮನವರ ಜಾತ್ರೆಯಲ್ಲಿ ಒಂದೊಂದು ಜಾತಿಯವರು ಕೆಲಸ ಹಂಚಿಕೊಂಡು ಮಾಡುವ ಪದ್ಧತಿಯನ್ನು ಪರಂಪರೆಯಿಂದ ರೂಢಿಸಿಕೊಂಡು ಬರಲಾಗಿದೆ. ತಳವಾರ್ ಜಾತಿಯವರು ದಿಂಡಿಗದ ಮರ ಹುಡುಕಿ ಕಂಬ ನೆಡುತ್ತಾರೆ. ಅಗ್ನಿವಂಶ ಕ್ಷತ್ರಿಯವರು ಅಗ್ನಿಕೊಂಡ ನಿರ್ಮಿಸಿ ಅದರ ಉಸ್ತುವಾರಿ ನೋಡಿಕೊಳ್ಳುತ್ತಾರೆ. ಕುರುಬ ಜನಾಂಗದವರಿಂದ ಮೊದಲ ಮಡಿಲಕ್ಕಿ ಮತ್ತು ಗಂಗಾಪೂಜೆ, ವಾಲ್ಮೀಕಿ ಜನಾಂಗದವರಿಂದ ಸಾಂಸ್ಕೃತಿಕ ಕಾರ್‍ಯಕ್ರಮ, ಮಾರುತಿ ನಗರದವರಿಂದ ಬಾಯಿಬೀಗ ಸೇವೆ, ಸಾದರರಿಂದ ಕಳಸ ಪೂಜೆ, ಮಡಿವಾಳರಿಂದ ಮಡಿ ಮತ್ತು ಪಂಜಿನಸೇವೆ, ಗ್ರಾಮದ ಎಲ್ಲಾ ಜನಾಂಗದ ಜನರಿಂದ ಕಗ್ಗಲಿಮರ ಸಂಗ್ರಹ ಮತ್ತು ಅಗ್ನಿಕುಂಡದಲ್ಲಿ ಹರಕೆ ಹೊತ್ತು ಹೊರುವ ವೀರಮಕ್ಕಳು ಹೀಗೆ ಎಲ್ಲಾ ಜನಾಂಗದವರು ಒಟ್ಟಿಗೆ ಸೇರಿ ಜಾತ್ರೆಯನ್ನು ಸಂಭ್ರಮಿಸುವುದರಿಂದ ಗ್ರಾಮದಲ್ಲಿ ಸಾಮರಸ್ಯದ ವಾತಾವರಣ ಎಂದೆಂದಿಗೂ ಇರುತ್ತದೆ.

ಬಾಕ್ಸ್‌...........

24ರಂದು ಅದ್ಧೂರಿ ಅಗ್ನಿಕುಂಡ ಮಹೋತ್ಸವ

ಮಾ.24ರಂದು ಶ್ರೀ ಲಕ್ಷ್ಮೀದೇವಿ ಅಮ್ಮನವರ ಅಗ್ನಿಕುಂಡ ಮಹೋತ್ಸವ ನಡೆಯುತ್ತದೆ. ಅಂದು ಕಗ್ಗಲಿ ಮರದ ಜಾತಿಯನ್ನಷ್ಟೇ ಬಳಸಿ ಕೆಂಡ ಮಾಡಲಾಗುತ್ತದೆ. ಇದು ದಪ್ಪನೆ ಬಿಡಿಬಿಡಿ ಭಾಗವಾಗಿ ಕೆಂಡ ಉರುಳುವುದರಿಂದ ಇದರ ಮೇಲೆ ಹರಕೆ ಹೊತ್ತ ವೀರಮಕ್ಕಳು ಓಡುವುದು ನಿಜಕ್ಕೂ ಸಾಹಸದ ವಿಷಯವಾಗಿದೆ. ಗ್ರಾಮದ ಜನರು ವಯಸ್ಸು, ಜಾತಿ, ಧರ್ಮವನ್ನು ಮೀರಿ ಹರಕೆ ಹೊತ್ತು ಅಗ್ನಿಕುಂಡದಲ್ಲಿ ಸಾಲುಸಾಲು ಓಡುತ್ತಾರೆ. ಅಂದು ಬೆಳಗಿನಿಂದ ಗ್ರಾಮದಲ್ಲಿ ನಾಡಿನ ವಿವಿಧ ಮೂಲೆಗಳಿಂದ ಜನದ ಕಲಾವಿದರ ನೃತ್ಯ ಸಂಗೀತ ಕಾರ್‍ಯಕ್ರಮ ಏರ್ಪಡಿಸಲಾಗಿದೆ. 25ರಂದು ಉಯ್ಯಾಲೆ ಉತ್ಸವ, ಮತ್ತು ಮುತ್ತಿನ ಪಲ್ಲಕ್ಕಿ ಉತ್ಸವ, 26 ರಂದು ಕಂಬವಿಸರ್ಜನೆ ಮತ್ತು ಕುದುರೆ ಉತ್ಸವ, 27 ರಂದು ಗಜವಾಹನೋತ್ಸವ, 28ರಂದು ಅಶ್ವರಥ ಉತ್ಸವ, 29ರಂದು ಉಯ್ಯಾಲೆ ಉತ್ಸವ, ಹೀಗೆ ಏಪ್ರಿಲ್ 7ರವರೆಗೆ ವಿವಿಧ ರೀತಿಯ ಉತ್ಸವ ಏರ್ಪಡಿಸಲಾಗಿದೆ.

17ಕೆ ಆರ್ ಎಂಎನ್ 4.ಜೆಪಿಜಿ

ಕುದೂರು ಗ್ರಾಮದ ಶ್ರೀ ಲಕ್ಷ್ಮೀದೇವಿ ಅಮ್ಮನವರ ಜಾತ್ರಾ ಮಹೋತ್ಸವದ ಅಂಗವಾಗಿ ಕಂಬದ ಸೇವೆ