ತನ್ನ ಚುನಾವಣೆಯಲ್ಲಿ ಭಾರತದ ಹಸ್ತಕ್ಷೇಪ: ಕೆನಡಾ ಆರೋಪ

| Published : Apr 08 2024, 01:08 AM IST / Updated: Apr 08 2024, 04:27 AM IST

ತನ್ನ ಚುನಾವಣೆಯಲ್ಲಿ ಭಾರತದ ಹಸ್ತಕ್ಷೇಪ: ಕೆನಡಾ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

2019 ಹಾಗೂ 2021ರ ಕೆನಡಾ ಸಾರ್ವತ್ರಿಕ ಚುನಾವಣೆಯಲ್ಲಿ ಭಾರತ ಮತ್ತು ಪಾಕಿಸ್ತಾನಗಳು ಹಸ್ತಕ್ಷೇಪ ಮಾಡಿವೆ ಎಂದು ಅಲ್ಲಿನ ಗುಪ್ತಚರ ಸಂಸ್ಥೆ ನಡೆಸಿದ ತನಿಖಾ ವರದಿ ಆರೋಪಿಸಿದೆ.

ನವದೆಹಲಿ: 2019 ಹಾಗೂ 2021ರ ಕೆನಡಾ ಸಾರ್ವತ್ರಿಕ ಚುನಾವಣೆಯಲ್ಲಿ ಭಾರತ ಮತ್ತು ಪಾಕಿಸ್ತಾನಗಳು ಹಸ್ತಕ್ಷೇಪ ಮಾಡಿವೆ ಎಂದು ಅಲ್ಲಿನ ಗುಪ್ತಚರ ಸಂಸ್ಥೆ ನಡೆಸಿದ ತನಿಖಾ ವರದಿ ಆರೋಪಿಸಿದೆ.

ಆದರೆ, ಈ ವರದಿಯನ್ನು ಭಾರತೀಯ ವಿದೇಶಾಂಗ ಇಲಾಖೆ ತಿರಸ್ಕರಿಸಿದ್ದು, ಭಾರತ ಹಸ್ತಕ್ಷೇಪ ಮಾಡುವ ಬದಲಿಗೆ ಕೆನಡಾ ಭಾರತ ಸರ್ಕಾರದ ಆಂತರಿಕ ವಿಷಯಗಳಲ್ಲಿ ಮೂಗು ತೂರಿಸುತ್ತಿದೆ ಎಂದು ಪ್ರತ್ಯಾರೋಪ ಮಾಡಿದೆ.

ಯಾವ ವರದಿ?:

ಭಾರತ-ಪಾಕಿಸ್ತಾನಗಳು 2019 ಮತ್ತು 2021ರಲ್ಲಿ ನಡೆದ ಕೆನಡಾ ಸಾರ್ವತ್ರಿಕ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಿವೆ ಎಂಬ ಆರೋಪದ ಬಗ್ಗೆ ಕೆನಡಾ ಅಧ್ಯಕ್ಷ ಜಸ್ಟಿನ್‌ ಟ್ರೂಡೋ ಜನವರಿಯಲ್ಲಿ ತನಿಖೆಗೆ ಆದೇಶಿಸಿದ್ದರು. ಆ ತನಿಖೆಯನ್ನು ಕೆನೆಡಿಯನ್ ಸೆಕ್ಯುರಿಟಿ ಇಂಟೆಲಿಜೆನ್ಸ್‌ ಸರ್ವೀಸ್‌ ಎಂಬ ಸಂಸ್ಥೆಯ ವತಿಯಿಂದ ನಡೆಸಲಾಗಿತ್ತು. ಅದರ ವರದಿ ಈಗ ಬಂದಿದೆ.

ವರದಿಯಲ್ಲಿ ಏನಿದೆ?:

ಭಾರತ-ಪಾಕಿಸ್ತಾನಗಳು ಕೆನಡಾದಲ್ಲಿ 2019 ಮತ್ತು 2021ರಲ್ಲಿ ನಡೆದ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಿವೆ ಎಂದು ತನಿಖಾ ವರದಿ ಪ್ರಕಟಿಸಿದೆ. ಅದರಲ್ಲೂ ಭಾರತವು 2021ರ ಚುನಾವಣೆ ವೇಳೆ ಸರ್ಕಾರಿ ಏಜೆಂಟ್‌ವೊಬ್ಬರ ಮೂಲಕ ಭಾರತೀಯರು ಹೆಚ್ಚು ಮತದಾರರಿರುವ ಕ್ಷೇತ್ರಗಳನ್ನು ಕೇಂದ್ರೀಕರಿಸಿ ಅಲ್ಲಿ ಭಾರತದ ಪರ ಒಲವುಳ್ಳ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದವು. ಭಾರತ ಸರ್ಕಾರದ ವತಿಯಿಂದಲೇ ರಹಸ್ಯವಾಗಿ ಚುನಾವಣಾ ಪ್ರಚಾರಕ್ಕೆ ಹಣವನ್ನು ಒದಗಿಸಲಾಗಿತ್ತು ಎಂದು ವರದಿ ತಿಳಿಸಿದೆ. ಪಾಕಿಸ್ತಾನ ಸರ್ಕಾರವು ಈ ರೀತಿಯಲ್ಲಿ 2019ರ ಚುನಾವಣೆಯಲ್ಲಿ ತನ್ನ ರಾಷ್ಟ್ರದ ಪರ ಒಲವುಳ್ಳ ಅಭ್ಯರ್ಥಿಗಳಿಗೆ ಆರ್ಥಿಕ ಸಹಾಯ ಮಾಡಿದೆ ಎಂದು ವರದಿ ಆರೋಪಿಸಿದೆ.

ಇದೇ ರೀತಿ ಕೆನಡಾವು ಅದರ ಚುನಾವಣೆಯಲ್ಲಿ ರಷ್ಯಾ ಮತ್ತು ಚೀನಾ ರಾಷ್ಟ್ರಗಳ ಹಸ್ತಕ್ಷೇಪದ ಕುರಿತೂ ಕಳೆದ ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ತನಿಖೆಗೆ ಆದೇಶಿಸಿತ್ತು ಎಂಬುದು ಗಮನಾರ್ಹ.

ಭಾರತದ ನಕಾರ:

ಭಾರತವು ಮೊದಲಿನಿಂದಲೂ ಕೆನಡಾ ಅಧ್ಯಕ್ಷ ನಮ್ಮ ಕುರಿತು ಮಾಡುತ್ತಿರುವ ಆರೋಪಗಳನ್ನು ಆಧಾರರಹಿತ ಎಂದು ತಿಳಿಸುತ್ತಿದ್ದು, ಈಗಲೂ ಸಹ ಕೆನಡಾ ದೇಶದ ಆಂತರಿಕ ಚುನಾವಣೆಯಲ್ಲಿ ತಾವು ಯಾವುದೇ ಹಸ್ತಕ್ಷೇಪ ಮಾಡಿಲ್ಲ. ಬದಲಾಗಿ ಅವರೇ ನಮ್ಮ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.