ಸಾರಾಂಶ
ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಕೆನಡಾದ ಇಕಾಲುಯಿಟ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದ ಏರಿಂಡಿಯಾ ವಿಮಾನದಲ್ಲಿದ್ದ 191 ಪ್ರಯಾಣಿಕರು ಮತ್ತು 20 ಸಿಬ್ಬಂದಿಗಳನ್ನು, ಕೆನಡಾದ ವಾಯುಪಡೆಯ ವಿಶೇಷ ವಿಮಾನ ಅಮೆರಿಕದ ಷಿಕಾಗೋ ಕರೆತಂದು ಬಿಟ್ಟಿದೆ.
ನವದೆಹಲಿ: ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಕೆನಡಾದ ಇಕಾಲುಯಿಟ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದ ಏರಿಂಡಿಯಾ ವಿಮಾನದಲ್ಲಿದ್ದ 191 ಪ್ರಯಾಣಿಕರು ಮತ್ತು 20 ಸಿಬ್ಬಂದಿಗಳನ್ನು, ಕೆನಡಾದ ವಾಯುಪಡೆಯ ವಿಶೇಷ ವಿಮಾನ ಅಮೆರಿಕದ ಷಿಕಾಗೋ ಕರೆತಂದು ಬಿಟ್ಟಿದೆ. ಭಾರತ ಮತ್ತು ಕೆನಡಾ ನಡುವೆ ರಾಜತಾಂತ್ರಿಕ ಸಮರ ಮುಗಿಲು ಮುಟ್ಟಿರುವ ಹೊತ್ತಿನಲ್ಲೇ ಈ ಸೌಹಾರ್ದಯುತ ಬೆಳವಣಿಗೆ ನಡೆದಿದೆ.
ಮಂಗಳವಾರ ದೆಹಲಿಯಿಂದ ಷಿಕಾಗೋ ಕಡೆ ಹೊರಟಿದ್ದ ಏರಿಂಡಿಯಾದ ಬೋಯಿಂಗ್ 777-300 ಇಆರ್ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದ ಕಾರಣ ಅದನ್ನು ಕೆನಡಾದತ್ತ ತಿರುಗಿಸಲಾಗಿತ್ತು. ಆದರೆ ತಪಾಸಣೆಯಲ್ಲಿ ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿರಲಿಲ್ಲ.ಆದರೂ ಮುಂಜಾಗ್ರತಾ ಕ್ರಮವಾಗಿ ಕೆನಡಾದ ಸಚಿವರಾದ ಹರ್ಜಿತ್ ಸಜ್ಜನ್ ಮತ್ತು ಅನಿತಾ ಆನಂದ್ ಅವರ ನೆರವಿನ ಫಲವಾಗಿ, ಕೆನಡಾ ಏರ್‌ಪೋರ್ಸ್‌ನ ವಿಶೇಷ ವಿಮಾನವನ್ನು ಬಳಸಿಕೊಂಡು ಪ್ರಯಾಣಿಕರನ್ನು ಸುರಕ್ಷಿತವಾಗಿ ಷಿಕಾಗೋಗೆ ತಲುಪಿಸಲಾಗಿದೆ. ಇಂತಹ ಅನಿರೀಕ್ಷಿತ ಸಂದರ್ಭದಲ್ಲಿ ಬೆಂಬಲ ಹಾಗೂ ಸಹಕಾರ ನೀಡಿದ ಕೆನಡಾದ ಅಧಿಕಾರಿಗಳು ಹಾಗೂ ಇಕಾಲುಯಿಟ್ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಏರಿಂಡಿಯಾ ಕೃತಜ್ಞತೆ ಸಲ್ಲಿಸಿದೆ.