ಸಾರಾಂಶ
ವಿಶ್ವಸಂಸ್ಥೆ : ಭಾರತ ಹಾಗೂ ಚೀನಾ ವಿರುದ್ಧ ಮತ್ತೆ ಗುಡುಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ರಷ್ಯಾದಿಂದ ತೈಲ ಖರೀದಿಸುವ ಮೂಲಕ ಭಾರತ ಮತ್ತು ಚೀನಾ ದೇಶಗಳು, ಉಕ್ರೇನ್ ವಿರುದ್ಧದ ಯುದ್ಧಕ್ಕೆ ಸಾಕಷ್ಟು ಹಣದ ಕೊಡುಗೆ ನೀಡುತ್ತಿವೆ. ಈ ಎರಡೂ ದೇಶಗಳು ರಷ್ಯಾದ ದೇಣಿಗೆದಾರ (ಫಂಡ್ ರೈಸರ್) ಆಗಿ ಹೊರಹೊಮ್ಮಿವೆ’ ಎಂದು ಆರೋಪಿಸಿದ್ದಾರೆ. ಅಲ್ಲದೆ, ‘ಈ ಸಂಬಂಧ ಜಗತ್ತಿನ ದೇಶಗಳು ಕ್ರಮ ಜರುಗಿಸುವ ಅಗತ್ಯವಿದೆ’ ಎಂದು ವಿಶ್ವಕ್ಕೆ ಕರೆ ನೀಡಿದ್ದಾರೆ.
ವಿಶ್ವಸಂಸ್ಥೆಯ ಭದ್ರತಾ ಸಂಸ್ಥೆಯಲ್ಲಿ ಮಂಗಳವಾರ ರಾತ್ರಿ ಮಾತನಾಡಿದ ಟ್ರಂಪ್, ‘ರಷ್ಯಾದ ತೈಲ ಖರೀದಿಸುವುದನ್ನು ಮುಂದುವರಿಸುವ ಮೂಲಕ ಚೀನಾ ಮತ್ತು ಭಾರತಗಳು ಯುದ್ಧಕ್ಕೆ ಪ್ರಾಥಮಿಕ ಹಣಕಾಸು ನೆರವು ಒದಗಿಸುವ ಮೂಲ ದೇಶಗಳಾಗಿ ಹೊರಹೊಮ್ಮಿವೆ. ಈ 2 ದೇಶಗಳು ಮಾತ್ರವಲ್ಲ. ನ್ಯಾಟೋ ದೇಶಗಳು ಸಹ ರಷ್ಯಾದ ಇಂಧನ ಮತ್ತು ಇಂಧನ ಉತ್ಪನ್ನ ಆಮದನ್ನು ಹೆಚ್ಚು ಕಡಿತಗೊಳಿಸಿಲ್ಲ. ಇದು ಕ್ಷಮೆಗೆ ಅರ್ಹವಲ್ಲ. ನ್ಯಾಯಸಮ್ಮತವಲ್ಲದ ಮತ್ತು ಅಸಮಂಜಸ ನಡೆಯೂ ಹೌದು’ ಎಂದರು.
‘ರಷ್ಯಾ ಕೂಡ ಸಮರ ನಿಲ್ಲಿಸಲು ಯಾವುದೇ ಕ್ರಮ ಜರುಗಿಸುತ್ತಿಲ್ಲ. ಕದನವಿರಾಮಕ್ಕೆ ಸಿದ್ಧವಾಗುತ್ತಿಲ್ಲ. ಹೀಗಾಗಿಯೇ ಅಮೆರಿಕವು ಭಾರಿ ಪ್ರಮಾಣದ ತೆರಿಗೆ ಹಾಕಿ ಈ ರಕ್ತಪಾತ ನಿಲ್ಲಿಸಲು ಮುಂದಾಗಿದೆ. ಇದರಿಂದ ಯುದ್ಧ ಬೇಗ ನಿಲ್ಲುವ ವಿಶ್ವಾಸವಿದೆ’ ಎಂದರು.
ಅಲ್ಲದೆ, ‘ನೀವೆಲ್ಲರೂ (ವಿಶ್ವದ ವಿವಿಧ ದೇಶಗಳು) ಈಗ ಇಲ್ಲಿ ಒಟ್ಟುಗೂಡಿದ್ದೀರಿ. ರಷ್ಯಾದಿಂದ ಖರೀದಿ ನಿಲ್ಲಿಸುವ ಕ್ರಮಗಳನ್ನು ಅಳವಡಿಸಿಕೊಳ್ಳುವಲ್ಲಿ ನಮ್ಮ ಕೈಜೋಡಿಸಿ’ ಎಂದು ವಿಶ್ವಸಂಸ್ಥೆಯ ಸದಸ್ಯ ದೇಶಗಳಿಗೆ ಕರೆ ನೀಡಿದರು.
ಉಕ್ರೇನ್ ವಿರುದ್ಧ ರಷ್ಯಾ ಸಮರ ನಿಲ್ಲಿಸದ ಕಾರಣ, ಅದಕ್ಕೆ ಪ್ರತೀಕಾರವಾಗಿ ರಷ್ಯಾ ಜತೆ ಉತ್ತಮ ಸಂಬಂಧ ಹೊಂದಿರುವ ಭಾರತದ ಮೇಲೆ ಟ್ರಂಪ್ ಶೇ.50ರಷ್ಟು ತೆರಿಗೆ ವಿಧಿಸಿದ್ದಾರೆ. ಚೀನಾ ಮೇಲೂ ಭಾರಿ ತೆರಿಗೆ ಹೇರುವ ಮಾತುಗಳನ್ನು ಆಡಿದ್ದಾರೆ.
;Resize=(128,128))
;Resize=(128,128))
;Resize=(128,128))
;Resize=(128,128))