ಚೀನಾ ಶಸ್ತ್ರಾಸ್ತ್ರ ಬೇಡಿಕೆ ಕುಸಿತ? - ಪಾಕ್‌ ದಾಳಿಯಲ್ಲಿ ಚೀನಾ ನಿರ್ಮಿತ ಶಸ್ತ್ರಾಸ್ತ್ರ ಧ್ವಂಸ

| N/A | Published : May 13 2025, 06:07 AM IST

The Flag of China
ಚೀನಾ ಶಸ್ತ್ರಾಸ್ತ್ರ ಬೇಡಿಕೆ ಕುಸಿತ? - ಪಾಕ್‌ ದಾಳಿಯಲ್ಲಿ ಚೀನಾ ನಿರ್ಮಿತ ಶಸ್ತ್ರಾಸ್ತ್ರ ಧ್ವಂಸ
Share this Article
  • FB
  • TW
  • Linkdin
  • Email

ಸಾರಾಂಶ

ಪಾಕ್‌ ದಾಳಿಯಲ್ಲಿ ಚೀನಾ ನಿರ್ಮಿತ ಶಸ್ತ್ರಾಸ್ತ್ರ ಧ್ವಂಸ

- ಹೀಗಾಗಿ ಚೀನಾ ಶಸ್ತ್ರಾಸ್ತ್ರ ವ್ಯಾಪಾರಕ್ಕೆ ಏಟು ಭೀತಿ

ನವದೆಹಲಿ: ಭಾರತವನ್ನು ಕಟ್ಟಿಹಾಕಲು ಪಾಕಿಸ್ತಾನಕ್ಕೆ ತನ್ನ ಅತ್ಯಾಧುನಿಕ ಕ್ಷಿಪಣಿ, ವಿಮಾನಗಳನ್ನು ನೀಡಿದ್ದ ಕಮ್ಯುನಿಸ್ಟ್‌ ದೇಶ ಚೀನಾ ಇದೀಗ ಅದೇ ಕಾರಣದಿಂದಾಗಿ ಪೇಚಿಗೀಡಾಗಿದೆ. ಏಕೆಂದರೆ ಪಾಕಿಸ್ತಾನವು ಬಳಸಿದ ಚೀನಾನಿರ್ಮಿತ ಕ್ಷಿಪಣಿ ಹಾಗೂ ಕೆಲವು ಶಸ್ತ್ರಾಸ್ತ್ರಗಳನ್ನು ಭಾರತ ಹೊಡೆದುರುಳಿಸಿದೆ. ಹೀಗಾಗಿ ವಿಶ್ವದಲ್ಲಿ ಚೀನಾ ನಿರ್ಮಿತ ಶಸ್ತ್ರಾಸ್ತ್ರಗಳಿಗೆ ಬೇಡಿಕೆ ಕುಸಿತದ ಭೀತಿ ಉಂಟಾಗಿದೆ.

ತನ್ನ ಕ್ಷಿಪಣಿ, ವಿಮಾನ ಧ್ವಂಸ ಆಗಿದ್ದು ಮಾತ್ರವೇ ವಿಷಯವಾಗಿದ್ದರೆ ಚೀನಾ ಅಷ್ಟು ತಲೆಕೆಡಿಸಿಕೊಳ್ಳುತ್ತಿರಲಿಲ್ಲ, ಆದರೆ ಇದರಿಂದ ತನ್ನ ರಕ್ಷಣಾ ವ್ಯಾಪಾರಕ್ಕೆ ಭಾರೀ ಹೊಡೆತ ಬೀಳಬಹುದು ಎಂಬ ಆತಂಕ ಅದನ್ನು ಕಾಡುತ್ತಿದೆ. ಹೀಗಾಗಿಯೇ ಭಾರತದ ಮೇಲಿನ ದಾಳಿಗೆ ತನ್ನ ಶಸ್ತ್ರಾಸ್ತ್ರ ಬಳಸಬೇಡಿ ಎಂದು ಸೂಚಿಸಿದ್ದರೂ ಅದನ್ನು ಬಳಸಿದ್ದು ಏಕೆ ಎಂದು ಕಾರಣ ಕೇಳಿ ಪಾಕಿಸ್ತಾನದ ರಾಯಭಾರ ಸಿಬ್ಬಂದಿಗಳಿಗೆ ಚೀನಾ ಸಮನ್ಸ್‌ ಜಾರಿ ಮಾಡಿದೆ.

ಚೀನಾಗೆ ಮುಖಭಂಗ:

ಭಾರತದ ಮೇಲಿನ ದಾಳಿಗೆ ಪಾಕ್‌ ಬಳಸಿದ್ದ ಚೀನಾ ನಿರ್ಮಿತ ಪಿಎಸ್‌15 ಕ್ಷಿಪಣಿ, ಜೆ17 ಯುದ್ಧ ವಿಮಾನಗಳನ್ನು ಭಾರತ ಹೊಡೆದುರುಳಿಸಿದೆ. ಇದರಿಂದ ಪಾಕ್‌ಗೆ ನಷ್ಟವಾಗಿದೆಯಾದರೂ, ಅಲ್ಲಿ ಮುಖಭಂಗವಾಗಿರುವುದು ಮಾತ್ರ ಚೀನಾಗೆ. ಭಾರತದಿಂದ ಪೆಟ್ಟು ತಿಂದು, ಜಾಗತಿಕ ಮಟ್ಟದಲ್ಲಿ ಚೀನಾದ ಶಸ್ತ್ರಾಸ್ತ್ರಗಳ ಘನತೆಗೆ ಧಕ್ಕೆಯುಂಟಾಗಿದೆ.

ವಹಿವಾಟು ಆತಂಕ:

ಶಸ್ತ್ರಾಸ್ತ್ರ ಪೂರೈಕೆಯಲ್ಲಿ ಮುಂಚೂಣಿ ದೇಶಗಳ ಪೈಕಿ ಗುರುತಿಸಿಕೊಳ್ಳುವ ಚೀನಾಗೆ, ತನ್ನೊಂದಿಗೆ ಈಗಾಗಲೇ ಖರೀದಿ ಒಪ್ಪಂದ ಮಾಡಿಕೊಂಡಿರುವ ಆಫ್ರಿಕಾ ದೇಶಗಳು ಅದರಿಂದ ಹಿಂದೆ ಸರಿಯಬಹುದು ಎಂಬ ಆತಂಕ ಶುರುವಾಗಿದೆ. ಜೊತೆಗೆ ಭವಿಷ್ಯಲ್ಲಿ ತನ್ನ ರಕ್ಷಣಾ ಉತ್ಪನ್ನಗಳ ಬೇಡಿಕೆ ಕುಸಿಯಬಹುದು ಎಂಬ ಭೀತಿಯೂ ಆರಂಭವಾಗಿದೆ ಎನ್ನಲಾಗಿದೆ. ಚೀನಾದಿಂದ ಬಾಂಗ್ಲಾದೇಶ, ಮ್ಯಾನ್ಮಾರ್, ಅಲ್ಜೀರಿಯಾ ಮತ್ತು ಆಫ್ರಿಕಾದ ಹಲವು ದೇಶಗಳು ಶಸ್ತ್ರಾಸ್ತ್ರ ಆಮದು ಮಾಡಿಕೊಳ್ಳುತ್ತವೆ. ಇನ್ನೊಂದು ಕಡೆ, ಭಾರತದ ಸ್ವದೇಶಿ ಅಸ್ತ್ರಗಳಿಂದ ಪ್ರಭಾವಿತವಾಗಿರುವ ಕೆಲ ದೇಶಗಳು ಅವುಗಳನ್ನು ಕೊಳ್ಳುವ ಇಂಗಿತ ವ್ಯಕ್ತಪಡಿಸುತ್ತಿರುವುದು ಗಮನಾರ್ಹ.