ಎಲಾನ್‌ ಮಸ್ಕ್‌ರ ವಾರ್ಷಿಕ ₹4.6 ಲಕ್ಷ ಕೋಟಿ ಸಂಬಳ ಕೋರ್ಟಲ್ಲಿ ರದ್ದು!

| Published : Feb 01 2024, 02:01 AM IST / Updated: Feb 01 2024, 04:18 PM IST

Elon Musk

ಸಾರಾಂಶ

ಟೆಸ್ಲಾದಿಂದ ಭಾರಿ ಮೊತ್ತದ ಪ್ಯಾಕೇಜ್‌ ಪಡೆಯುತ್ತಿದ್ದ ಮಾಲಿಕ ಎಲಾನ್‌ ಮಸ್ಕ್‌ರ ಸಂಬಳವನ್ನು ನ್ಯಾಯಾಲಯ ರದ್ದುಮಾಡಿದೆ.

ವಾಷಿಂಗ್ಟನ್‌: ಜಗತ್ತಿನ ಅತಿದೊಡ್ಡ ಶ್ರೀಮಂತರ ಪೈಕಿ ಒಬ್ಬರಾದ ಅಮೆರಿಕದ ಉದ್ಯಮಿ ಎಲಾನ್‌ ಮಸ್ಕ್‌ ತಮ್ಮ ಮಾಲಿಕತ್ವದ ಟೆಸ್ಲಾ ಕಾರು ಉತ್ಪಾದಕ ಕಂಪನಿಯಿಂದ ಪಡೆದುಕೊಳ್ಳುತ್ತಿದ್ದ ವಾರ್ಷಿಕ 56 ಬಿಲಿಯನ್‌ ಡಾಲರ್‌ (ಸುಮಾರು 4.6 ಲಕ್ಷ ಕೋಟಿ ರು.) ವೇತನವನ್ನು ಕೋರ್ಟ್‌ ರದ್ದುಪಡಿಸಿದೆ.

ಎಲಾನ್‌ ಮಸ್ಕ್‌ ಕಾರ್ಪೊರೇಟ್‌ ಜಗತ್ತಿನ ನಿಯಮಗಳನ್ನು ಮೀರಿ ನ್ಯಾಯಸಮ್ಮತವಲ್ಲದ ವೇತನ ಪಡೆದುಕೊಳ್ಳುತ್ತಿದ್ದಾರೆ. ಇದಕ್ಕೆ ತಮ್ಮ ಕಂಪನಿಯ ಆಡಳಿತ ಮಂಡಳಿ ಮೇಲೆ ಒತ್ತಡ ಹೇರಿ ಒಪ್ಪಿಗೆ ಪಡೆದುಕೊಂಡಿದ್ದಾರೆ ಎಂದು 2018ರ ವೇತನ ಪ್ಯಾಕೇಜ್‌ ವಿರುದ್ಧ ಕಂಪನಿಯ ಷೇರುದಾರರೊಬ್ಬರು ಡೆಲವೇರ್‌ ಕೋರ್ಟ್‌ನಲ್ಲಿ ದಾವೆ ಹೂಡಿದ್ದರು. ಅದರ ವಿಚಾರಣೆ ನಡೆಸಿದ ನ್ಯಾಯಾಧೀಶರು ವೇತನ ಪ್ಯಾಕೇಜನ್ನು ರದ್ದುಪಡಿಸಿದ್ದಾರೆ.

ಈ ತೀರ್ಪನ್ನು ಉನ್ನತ ನ್ಯಾಯಾಲಯದಲ್ಲಿ ಪ್ರಶ್ನಿಸಲು ಎಲಾನ್‌ ಮಸ್ಕ್‌ ನಿರ್ಧರಿಸಿದ್ದಾರೆ. ತೀರ್ಪಿನ ಬೆನ್ನಲ್ಲೇ ಟ್ವೀಟ್‌ ಮಾಡಿರುವ ಅವರು, ‘ಯಾವತ್ತೂ ನಿಮ್ಮ ಕಂಪನಿಯನ್ನು ಡೆಲವೇರ್‌ ರಾಜ್ಯದಲ್ಲಿ ನೋಂದಣಿ ಮಾಡಬೇಡಿ. ಅದರ ಬದಲು ನೆವಾಡಾ ಅಥವಾ ಟೆಕ್ಸಾಸ್‌ನಲ್ಲಿ ನೋಂದಣಿ ಮಾಡಿ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಕಂಪನಿಯ ನೋಂದಣಿಯನ್ನು ಡೆಲವೇರ್‌ನಿಂದ ಟೆಕ್ಸಾಸ್‌ಗೆ ಸ್ಥಳಾಂತರ ಮಾಡಲೇ ಎಂದೂ ಜನರ ಅಭಿಪ್ರಾಯ ಕೇಳಿದ್ದಾರೆ.