ಸಾರಾಂಶ
ಪಿಟಿಐ ಢಾಕಾ: ಬಾಂಗ್ಲಾದೇಶದ ಕಂಡು ಕೇಳರಿಯದ ಹಿಂಸಾಚಾರದ ಕಾರಣ ಪ್ರಧಾನಿ ಶೇಖ್ ಹಸೀನಾ ಅವರು ರಾಜೀನಾಮೆ ನೀಡಿ ದೇಶದಿಂದ ಪಲಾಯನ ಮಾಡಿದ ಒಂದು ದಿನದ ನಂತರ, ಮಧ್ಯಂತರ ಆಡಳಿತ ರಚನೆಗೆ ದಾರಿ ಮಾಡಿಕೊಡಲು ಬಾಂಗ್ಲಾದೇಶ ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಮಂಗಳವಾರ ಸಂಸತ್ತನ್ನು ವಿಸರ್ಜಿಸಿದ್ದಾರೆ. ಇದರೊಂದಿಗೆ ಮಧ್ಯಂತರ ಸರ್ಕಾರ ರಚನೆಗೆ ಹಾದಿ ಸುಗಮವಾಗಿದೆ.ಇದರ ಬೆನ್ನಲ್ಲೇ 3 ಸಶಸ್ತ್ರ ಪಡೆಗಳ ಮುಖ್ಯಸ್ಥರು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ನಾಗರಿಕ ಸಮಾಜದ ಪ್ರತಿನಿಧಿಗಳು ಮತ್ತು ತಾರತಮ್ಯ ವಿರೋಧಿ ವಿದ್ಯಾರ್ಥಿ ಚಳವಳಿ ಮುಖಂಡರು ಮಧ್ಯಂತರ ಸರ್ಕಾರ ರಚನೆಗೆ ಚರ್ಚೆಗಳನ್ನು ಆರಂಭಿಸಿದ್ದಾರೆ. ‘ಮಧ್ಯಂತರ ಸರ್ಕಾರಕ್ಕೆ ಮಿಲಿಟರಿ ನೇತೃತ್ವ ಇರಬಾರದು. ನೊಬೆಲ್ ವಿಜೇತ ಮೊಹಮ್ಮದ್ ಯೂನುಸ್ ಅವರ ನೇತೃತ್ವ ಇರಬೇಕು’ ಎಂದು ವಿದ್ಯಾರ್ಥಿ ಮುಖಂಡರು ಆಗ್ರಹಿಸಿದ್ದು, ‘ಇದಕ್ಕೆ ಯೂನುಸ್ ಒಪ್ಪಿದ್ದಾರೆ’ ಎಂದೂ ಹೇಳಿಕೊಂಡಿದ್ದಾರೆ. ಆದರೆ ಯೂನುಸ್ ಯಾವುದೇ ಹೇಳಿಕೆ ನೀಡಿಲ್ಲ.
ಯೂನುಸ್ ಹರ್ಷ:ಈ ನಡುವೆ ಮಧ್ಯಂತರ ಸರ್ಕಾರದ ಮುಖ್ಯಸ್ಥ ಹುದ್ದೆಗೆ ಮುಂಚೂಣಿಯಲ್ಲಿರುವ ನೊಬೆಲ್ ವಿಜೇತ ಯೂನುಸ್ ಪ್ರತಿಕ್ರಿಯಿಸಿ, ‘ಹಸೀನಾ ನಿರ್ಗಮನ ವಿದ್ಯಮಾನ ಬಾಂಗ್ಲಾಗೆ ಸಿಕ್ಕ ಎರಡನೇ ವಿಮೋಚನೆ’ ಎಂದಿದ್ದಾರೆ.
ಅಲ್ಲದೆ, ’ವಿದ್ಯಾರ್ಥಿಗಳು ಅಷ್ಟು ತ್ಯಾಗ ಮಾಡಬಹುದಾದರೆ, ದೇಶದ ಜನರು ಇಷ್ಟು ತ್ಯಾಗ ಮಾಡಬಹುದಾದರೆ, ನನಗೂ ಕೆಲವು ಜವಾಬ್ದಾರಿ ಇದೆ. ನಾನೂ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇನೆ ಎಂದು ವಿದ್ಯಾರ್ಥಿಗಳಿಗೆ ಹೇಳಿದ್ದೇನೆ’ ಎಂದು ಯೂನಸ್ ಹೇಳಿದ್ದಾರೆ. ಸದ್ಯ ಅವರು ವಿದೇಶದಲ್ಲಿದ್ದಾರೆ.ಮೃತರ ಸಂಖ್ಯೆ440ಕ್ಕೆ- ಸ್ಥಿತಿ ಶಾಂತ:ಏತನ್ಮಧ್ಯೆ, ಮಂಗಳವಾರ ನಡೆದ ಸರ್ಕಾರಿ ವಿರೋಧಿ ಪ್ರತಿಭಟನೆಯಲ್ಲಿ ಮತ್ತೆ ಸುಮಾರು 100 ಜನ ಸಾವನ್ನಪ್ಪಿದ್ದು, ಈ ಗಲಭೆಯಲ್ಲಿ ಈವರೆಗೆ ಸತ್ತವರ ಸಂಖ್ಯೆ 440ಕ್ಕೆ ಏರಿದೆ. ಆಡಳಿತಾರೂಢ ಹಸೀನಾ ಪಕ್ಷದ ನಾಯಕರ ಮನೆ ಮೇಲೆ ದಂಗೆಕೋರರು ದಾಳಿ ಮಾಡಿದ್ದಾರೆ. ಆದರೂ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಸೇನೆಯು ಪ್ರಯತ್ನಗಳನ್ನು ನಡೆಸುತ್ತಿದೆ. ಮಂಗಳವಾರ ಢಾಕಾದಲ್ಲಿ ಪರಿಸ್ಥಿತಿ ಹೆಚ್ಚಾಗಿ ಶಾಂತವಾಗಿತ್ತು.
ಖಲೀದಾ ಬಂಧಮುಕ್ತಿ:ಈ ನಡುವೆ ರಾಷ್ಟ್ರಾಧ್ಯಕ್ಷರ ಆದೇಶದಂತೆ ಬಂಧಿತ ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ (ಬಿಎನ್‌ಪಿ) ಮುಖ್ಯಸ್ಥೆ ಮತ್ತು ಮಾಜಿ ಪ್ರಧಾನಿ ಖಲೀದಾ ಜಿಯಾ ಅವರನ್ನು ಮಂಗಳವಾರ ಗೃಹಬಂಧನದಿಂದ ಮುಕ್ತಗೊಳಿಸಲಾಗಿದೆ. ಇದರ ಬೆನ್ನಲ್ಲೇ ಹಿಂಸಾಚಾರ ಆರೋಪಿಗಳನ್ನೂ ಬಿಡುಗಡೆ ಮಾಡುವ ಪ್ರಕ್ರಿಯೆ ಪ್ರಾರಂಭವಾಗಿದೆ.