ಕಚತೀವು ದ್ವೀಪ ವಿವಾದ: ತಮಿಳ್ನಾಡು ಬೆಸ್ತರ ಹಿತ ಬಲಿ ಕೊಟ್ಟಿದ್ದು ಡಿಎಂಕೆ

| Published : Apr 02 2024, 01:03 AM IST / Updated: Apr 02 2024, 04:06 AM IST

ಕಚತೀವು ದ್ವೀಪ ವಿವಾದ: ತಮಿಳ್ನಾಡು ಬೆಸ್ತರ ಹಿತ ಬಲಿ ಕೊಟ್ಟಿದ್ದು ಡಿಎಂಕೆ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತ-ಶ್ರೀಲಂಕಾ ನಡುವಿನ ಕಚತೀವು ದ್ವೀಪವನ್ನು ನೆಹರು-ಇಂದಿರಾ ಗಾಂಧಿ ಕಾಲದಲ್ಲಿ ಲಂಕೆಗೆ ಬಿಟ್ಟುಕೊಟ್ಟ ವಿವಾದ ಸತತ 2ನೇ ದಿನವೂ ಬಿಜೆಪಿ ಹಾಗೂ ಕಾಂಗ್ರೆಸ್‌-ಡಿಎಂಕೆ ನಡುವೆ ವಾಕ್ಸಮರಕ್ಕೆ ವೇದಿಕೆಯಾಗಿದೆ.

ನವದೆಹಲಿ/ಚೆನ್ನೈ: ಭಾರತ-ಶ್ರೀಲಂಕಾ ನಡುವಿನ ಕಚತೀವು ದ್ವೀಪವನ್ನು ನೆಹರು-ಇಂದಿರಾ ಗಾಂಧಿ ಕಾಲದಲ್ಲಿ ಲಂಕೆಗೆ ಬಿಟ್ಟುಕೊಟ್ಟ ವಿವಾದ ಸತತ 2ನೇ ದಿನವೂ ಬಿಜೆಪಿ ಹಾಗೂ ಕಾಂಗ್ರೆಸ್‌-ಡಿಎಂಕೆ ನಡುವೆ ವಾಕ್ಸಮರಕ್ಕೆ ವೇದಿಕೆಯಾಗಿದೆ. 

ನೆಹರು-ಇಂದಿರಾ ನೇತೃತ್ವದ ಸರ್ಕಾರಗಳು ಹಾಗೂ ಡಿಎಂಕೆ, ಈ ದ್ವೀಪವನ್ನು ಲಂಕೆಗೆ ಕೊಟ್ಟು ಭಾರತದ ಮೀನುಗಾರರ ಹಿತ ಬಲಿ ಕೊಟ್ಟಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ವಿದೇಶಾಂಗ ಸಚಿವ ಎಸ್. ಜೈಶಂಕರ್‌ ಆರೋಪಿಸಿದ್ದಾರೆ.ಆದರೆ ಇದಕ್ಕೆ ಕಾಂಗ್ರೆಸ್‌ ಹಾಗೂ ಡಿಎಂಕೆ ತಿರುಗೇಟು ನೀಡಿದ್ದು, ಯಾವತ್ತೂ ಮೀನುಗಾರರ ಮೇಲೆ ಇಲ್ಲದ ಪ್ರೇಮ ಚುನಾವಣೆ ಸಮಯದಲ್ಲಿ ಏಕೆ ಬಿಜೆಪಿಯಲ್ಲಿ ಉಕ್ಕಿ ಹರಿಯತ್ತಿದೆ? ದ್ವೀಪವನ್ನು ಬಿಟ್ಟು ಕೊಟ್ಟ ಸಂದರ್ಭವನ್ನು ಮನಗಾಣದೇ ಬಿಜೆಪಿ ಸತ್ಯ ತಿರುಚಿ ಪ್ರಚಾರದಲ್ಲಿ ತೊಡಗಿದೆ ಎಂದು ಕಿಡಿಕಾರಿವೆ.

ಪ್ರಧಾನಿ ಮೋದಿ ಟ್ವೀಟ್‌ ಮಾಡಿ, ‘ಕಚತೀವನ್ನು ಲಂಕೆಗೆ ಬಿಟ್ಟು ಕೊಡುವ ಇಂದಿರಾ ಗಾಂಧಿ ಪ್ರಸ್ತಾವಕ್ಕೆ ಅಸ್ತು ಎಂದಿದ್ದು ಅಂದಿನ ತಮಿಳುನಾಡು ಮುಖ್ಯಮಂತ್ರಿ ಎಂ. ಕರುನಾನಿಧಿ. ತಮಿಳುನಾಡಿನ ಹಿತ ಕಾಯಲು ಡಿಎಂಕೆ ಏನೂ ಮಾಡಲಿಲ್ಲ ಎಂಬುದಕ್ಕೆ ಇದು ತಾಜಾ ನಿರ್ದರ್ಶನ’ ಎಂದಿದ್ದಾರೆ.

ಇನ್ನು ದಿಲ್ಲಿ ಬಿಜೆಪಿ ಕಚೇರಿಯಲ್ಲಿ ಬೆಳಗ್ಗೆ ಸುದ್ದಿಗಾರರ ಜತೆ ಮಾತನಾಡಿದ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ 1974ರಲ್ಲಿ ಒಪ್ಪಂದ ಏರ್ಪಟ್ಟು ಭಾರತೀಯ ಮೀನುಗಾರರಿಗೆ ಕಚತೀವು ಮೇಲೆ ಹಕ್ಕು ಸಿಕ್ಕಿತ್ತು. 1976ರ ಒಪ್ಪಂದವು ಈ ಹಕ್ಕಿಗೆ ಅಂತ್ಯ ಹಾಡಿತು. ಬದಲಾದ ಇಂದಿರಾ ಗಾಂಧಿ ನಿಲುವು, ಕಚತೀವುನಲ್ಲಿನ ಭಾರತೀಯ ಬೆಸ್ತರ ಹಿತ ಬಲಿಕೊಟ್ಟಿತು ಎಂದು ಕಿಡಿಕಾರಿದರು.

ಇದಕ್ಕೆ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ತಿರುಗೇಟು ನೀಡಿ,‘2015ರಲ್ಲಿ ಲಭಿಸಿದ ಆರ್‌ಟಿಐ ಉತ್ತರವು ಈ ದ್ವೀಪವನ್ನು ಭಾರತ ಏಕೆ ಬಿಟ್ಟುಕೊಟ್ಟಿತು ಎಂಬ ಸಕಾರಣ ತಿಳಿಸುತ್ತದೆ. ಆದರೆ ಈಗ ಮತ್ತೆ ಕೆ. ಅಣ್ಣಾಮಲೈ ಹಾಕಿದ್ದ ಇನ್ನೊಂದು ಆರ್‌ಟಿಐ ಮೂಲಕ ಇದನ್ನು ಕೆದಕಿ ತಿರುಚುವ ಯತ್ನಗಳು ನಡೆದಿವೆ. ಕಾಂಗ್ರೆಸ್‌ ಮೀನುಗಾರರ ಹಿತ ಬಲಿ ಕೊಟ್ಟಿದೆ ಎಂದು ಮೋದಿ ಸರ್ಕಾರ ಹೇಳುತ್ತಿದೆ. ಹಾಗಿದ್ದರೆ ಮೋದಿ ಹಾಗೂ ಅಟಲ್‌ ಸರ್ಕಾರದ ಅವಧಿಯಲ್ಲಿ ಹಿಂದೂ ಮಹಾಸಾಗರದಲ್ಲಿ ಒಬ್ಬ ಭಾರತೀಯ ಮೀನುಗಾರನ ಬಂಧನವೂ ಆಗಿಲ್ಲವೆ?’ ಎಂದು ಪ್ರಶ್ನಿಸಿದ್ದಾರೆ.

ಡಿಎಂಕೆ ನಾಯಕ ಹಾಗೂ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಮಾತನಾಡಿ, ‘ಯಾವತ್ತೂ ಬಿಜೆಪಿ ನೆನಪಿಗೆ ಬಾರದ ತಮಿಳುನಾಡು ಮೀನುಗಾರರು ಈಗ ನೆನಪಿಗೆ ಬಂದಿದ್ದೇಕೆ? ತಮಿಳುನಾಡು ಪ್ರವಾಹದಲ್ಲಿ ತತ್ತರಿಸಿ 37 ಸಾವಿರ ಕೋಟಿ ರು. ಪರಿಹಾರ ಬೇಡಿದರೂ ನಯಾಪೈಸೆ ನೀಡದ ಕೇಂದ್ರದಿಂದ ಈಗ ತಮಿಳರ ಹಿತ ಕಾಯುವ ಮಾತೇಕೆ?’ ಎಂದು ಪ್ರಶ್ನಿಸಿದ್ದಾರೆ.