ಸಾರಾಂಶ
ಗ್ರೀನ್ ಬೇ: ಅಮೆರಿಕ ಅಧ್ಯಕ್ಷೀಯ ಚುನಾವಣೆಯು ದಿನೇ ದಿನೇ ಕಾವೇರುತ್ತಿದೆ. ಈ ನಡುವೆ ತಮ್ಮ ಬೆಂಬಲಿಗರನ್ನು ‘ಕಸ’ ಎಂದು ಟೀಕಿಸಿದ್ದ ಹಾಲಿ ಅಧ್ಯಕ್ಷ ಜೋ ಬೈಡನ್ ಅವರಿಗೆ ಕಸದ ಲಾರಿಯನ್ನೇರುವ ಮೂಲಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿರುಗೇಟು ನೀಡಿದ್ದಾರೆ.
ಈ ಹಿಂದೆ 2014ರಲ್ಲಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕರು ತಮ್ಮನ್ನು ಚಾಯ್‌ವಾಲಾ ಎಂದಿದ್ದನ್ನೇ ತಮ್ಮ ಚುನಾವಣಾ ಸರಕನ್ನಾಗಿ ಬಳಸಿಕೊಂಡು ಎದುರಾಳಿಗಳಿಗೆ ಟಾಂಗ್ ನೀಡಿದ್ದರು. ಇದೀಗ ಟ್ರಂಪ್ ಕೂಡಾ ಅದೇ ಹಾದಿ ಅನುಸರಿಸಿದ್ದಾರೆ.
ಗುರುವಾರ ಪ್ರಚಾರ ಭಾಷಣ ಮುಗಿಸಿ ವಿಮಾನ ನಿಲ್ದಾಣದಲ್ಲಿ ವಿಮಾನ ಏರುವ ಮುನ್ನ ಅಲ್ಲೇ ಇದ್ದ ಕಸದ ಲಾರಿಯನ್ನು ಏರಿ ಓಡಿಸಿದ ಟ್ರಂಪ್, ‘ಹೇಗಿದೆ ನನ್ನ ಕಸದ ಲಾರಿ. ಇದು ಬೈಡನ್ ಮತ್ತು ಕಮಲಾ ಹ್ಯಾರಿಸ್ ಅವರ ಗೌರವಾರ್ಥವಾಗಿದೆ’ ಎಂದು ವ್ಯಂಗ್ಯವಾಡಿದ್ದಾರೆ. ಬಳಿಕ ಚುನಾವಣಾ ಪ್ರಚಾರ ರ್‍ಯಾಲಿಯಲ್ಲೂ ಸ್ವಚ್ಛತಾ ಸಿಬ್ಬಂದಿ ಧರಿಸುವ ಮೇಲುಡುಗೆ ತೊಟ್ಟು ಗಮನ ಸೆಳೆದರು.
ಕೆಲ ದಿನಗಳ ಹಿಂದಷ್ಟೇ ಟ್ರಂಪ್ ರ್‍ಯಾಲಿಯೊಂದರಲ್ಲಿ ಮಾತನಾಡಿದ್ದ ಟ್ರಂಪ್ ಬೆಂಬಲಿಗರೊಬ್ಬರು, ‘ಪೋರ್ಟೊರಿಕೋ ಒಂದು ಕಸದ ದ್ವೀಪ’ ಎಂದು ವ್ಯಂಗ್ಯವಾಡಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಬೈಡನ್, ನಾನು ಆಯ್ಕೆಯಾಗಿ ಬಂದ ಪೋರ್ಟೊರಿಕೋ ಕಸದ ದ್ವೀಪವಲ್ಲ. ಅಲ್ಲಿರುವ ಟ್ರಂಪ್ ಬೆಂಗಲಿಗರು ಕಸ ಎಂದು ಹೇಳಿದ್ದರು.
ಟ್ರಂಪ್ ಮತ್ತು ಕಮಲಾ ಹ್ಯಾರಿಸ್ ಸ್ಪರ್ಧಿಸಿರುವ ಅಧ್ಯಕ್ಷೀಯ ಚುನಾವಣೆ ನ.5ರಂದು ನಡೆಯಲಿದೆ.
ಟ್ರಂಪ್‌ಗಿಂತ ಕೇವಲ ಶೇ.1ರಷ್ಟು ಮುನ್ನಡೆ ಹೊಂದಿರುವ ಕಮಲಾ
ವಾಷಿಂಗ್ಟನ್: ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ಮತಕಣ ಬಿರುಸು ಪಡೆದುಕೊಂಡಿದ್ದು, ವಿಶ್ವದ ಕಣ್ಣು ಅಮೆರಿಕದತ್ತವೇ ನೆಟ್ಟಿದೆ. ಟ್ರಂಪ್ ಮತ್ತು ಕಮಲಾ ಹ್ಯಾರಿಸ್ ನಡುವೆ ಪೈಪೋಟಿ ಜೋರಾಗಿದೆ. ಈ ನಡುವೆ ಅನಿವಾಸಿ ಭಾರತೀಯ ಕಮಲಾ ಹ್ಯಾರಿಸ್, ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಸೋಲಿಸಬಹುದು ಎಂದು ರಾಯಿಟರ್ಸ್ ಸಮೀಕ್ಷೆಯೊಂದು ಹೇಳಿದೆ. ಆದರೆ ಹಿಂದಿನ ಸಮೀಕ್ಷೆಗಳಿಗೆ ಹೋಲಿಸಿದರೆ ಈ ಬಾರಿ ಅಂತರ ಇಳಿಕೆಯಾಗಿದೆ.
ಸಮೀಕ್ಷೆಯ ಪ್ರಕಾರ, ಡೆಮಾಕ್ರೆಟಿಕ್ ಪಕ್ಷವು ರಿಪಬ್ಲಿಕ್‌ಗಿಂತ ಶೇ.1ರಷ್ಟು ಅಧಿಕ ಮತ ಗಳಿಸಬಹುದು. ಡೆಮಾಕ್ರೆಟ್ ಪಕ್ಷ ಶೇ.44ರಷ್ಟು ಮತ ಪಡೆದರೆ ರಿಪಬ್ಲಿಕನ್ಸ್ ಶೇ.43ರಷ್ಟು ಮತ ಪಡೆಯಬಹುದು ಎಂದು ಸಮೀಕ್ಷೆ ಹೇಳಿದೆ. ಆರಂಭದಲ್ಲಿ ಟ್ರಂಪ್‌ಗಿಂತ ಭಾರೀ ಅಂತರದಲ್ಲಿ ಮುಂದಿದ್ದ ಕಮಲಾ ಹ್ಯಾರಿಸ್ ಗೆಲುವಿನ ಅಂತರ ಸೆಪ್ಟೆಂಬರ್ ಬಳಿಕ ಕುಗ್ಗಿತ್ತು. ಅಕ್ಟೋಬರ್ 16ರಿಂದ 21ರ ಸಮೀಕ್ಷೆಯಲ್ಲಿ ಕಮಲಾ ಹ್ಯಾರಿಸ್ ಟ್ರಂಪ್‌ಗಿಂತ ಶೇ.2ರಷ್ಟು ಮುನ್ನಡೆ ಸಾಧಿಸಿದ್ದರು. ಈಗ ಮತ್ತೆ ಆ ಪ್ರಮಾಣದಲ್ಲಿ ಇಳಿಕೆಯಾಗಿದೆ.