ಎಲಾನ್‌ ಮಸ್ಕ್‌ ಸಾಹಸ: ಮನುಷ್ಯನ ಮೆದುಳಿಗೇ ಚಿಪ್‌ ಅಳವಡಿಕೆ ಯಶಸ್ವಿ!

| Published : Jan 31 2024, 02:21 AM IST / Updated: Jan 31 2024, 09:23 AM IST

Elon Musk
ಎಲಾನ್‌ ಮಸ್ಕ್‌ ಸಾಹಸ: ಮನುಷ್ಯನ ಮೆದುಳಿಗೇ ಚಿಪ್‌ ಅಳವಡಿಕೆ ಯಶಸ್ವಿ!
Share this Article
  • FB
  • TW
  • Linkdin
  • Email

ಸಾರಾಂಶ

ವಿಶ್ವದ ನಂ.2 ಶ್ರೀಮಂತ ಎಲಾನ್‌ ಮಸ್ಕ್‌ ಒಡೆತನದ ನ್ಯೂರಾಲಿಂಕ್‌ ಕಂಪನಿಯು ವಿಶ್ವದಲ್ಲೇ ಮೊದಲ ಬಾರಿಗೆ ಮಾನವನ ಮೆದುಳಿಗೆ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಅದರೊಳಗೆ ಚಿಪ್‌ ಕೂರಿಸುವಲ್ಲಿ ಯಶಸ್ವಿಯಾಗಿದೆ.

ನ್ಯೂಯಾರ್ಕ್‌: ಮೊಬೈಲ್‌, ಕಂಪ್ಯೂಟರ್‌ ಸೇರಿದಂತೆ ಬಹುತೇಕ ಎಲ್ಲಾ ಎಲೆಕ್ಟ್ರಾನಿಕ್‌ ಉಪಕರಣಗಳಲ್ಲಿ ಮೆದುಳಿನ ರೀತಿಯಲ್ಲಿ ಕೆಲಸ ಮಾಡುವುದು ಕಂಪ್ಯೂಟರ್‌ ಚಿಪ್‌ಗಳು. 

ಗಾತ್ರದಲ್ಲಿ ಸಣ್ಣದಿದ್ದರೂ, ಇಡೀ ಎಲೆಕ್ಟ್ರಾನಿಕ್‌ ಉಪಕರಣಗಳ ಜೀವನಾಡಿಗಳಿವು. ಇಂಥದ್ದೇ ಚಿಪ್‌ಗಳನ್ನು ಮಾನವನ ಮೆದುಳಿಗೂ ಅಳವಡಿಸಿ ಅದನ್ನು ಸಂವನದ ಮಾಧ್ಯಮವಾಗಿ ಬಳಸುವ ಐತಿಹಾಸಿಕ ಪ್ರಯೋಗವೊಂದು ಯಶಸ್ವಿ ಆರಂಭ ಪಡೆದಿದೆ.

ವಿಶ್ವದ ನಂ.2 ಶ್ರೀಮಂತ ಎಲಾನ್‌ ಮಸ್ಕ್‌ ಒಡೆತನದ ನ್ಯೂರಾಲಿಂಕ್‌ ಕಂಪನಿಯು ವಿಶ್ವದಲ್ಲೇ ಮೊದಲ ಬಾರಿಗೆ ಮಾನವನ ಮೆದುಳಿಗೆ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಅದರೊಳಗೆ ಚಿಪ್‌ ಕೂರಿಸುವಲ್ಲಿ ಯಶಸ್ವಿಯಾಗಿದೆ. 

ಇದು ಸಂಪೂರ್ಣ ಯಶಸ್ವಿಯಾದರೆ ಪಾರ್ಶ್ವವಾಯು ಸೇರಿದಂತೆ ದೈಹಿಕವಾಗಿ ನ್ಯೂನತೆ ಹೊಂದಿರುವ ವ್ಯಕ್ತಿಗಳು ತಮ್ಮ ಹಲವು ಕೆಲಸಗಳನ್ನು ಯಾರ ಸಹಾಯವೂ ಇಲ್ಲದೇ ಕೇವಲ ತಲೆಯಲ್ಲಿ ಯೋಚಿಸುವ ಮೂಲಕವೇ ಮಾಡಬಹುದಾಗಿದೆ. ಹೀಗಾಗಿಯೇ ಈ ಪ್ರಯೋಗದ ಫಲಿತಾಂಶದ ಕುರಿತು ಇಡೀ ವಿಶ್ವವೇ ಕುತೂಹಲದ ಕಣ್ಣಿಟ್ಟಿದೆ.

ಏನಿದು ಪ್ರಯೋಗ?
ಮಸ್ಕ್‌ರ ನ್ಯೂರಾಲಿಂಕ್‌ ಕಂಪನಿ ಚಿಕ್ಕದಾದ ಹಲವು ದಾರದ ರೀತಿಯ ವೈರ್‌ಗಳನ್ನು ಒಳಗೊಂಡ ಅತ್ಯಂತ ಸಣ್ಣದಾದ ಚಿಪ್‌ ಒಂದನ್ನು ಅಭಿವೃದ್ಧಿಪಡಿಸಿದೆ. ಇದಕ್ಕೆ ಟೆಲಿಪಥಿ ಎಂದು ಹೆಸರಿಡಲಾಗಿದೆ. 

ಇದನ್ನು ಅಳವಡಿಸಿಕೊಂಡ ವ್ಯಕ್ತಿಯು ಮಾಡುವ ಚಿಂತನೆಗಳನ್ನು ಈ ಚಿಪ್‌ ಗ್ರಹಿಸಿ ದೇಹದ ಹೊರಗೆ ಇರುವ ಮೊಬೈಲ್‌ ಅಥವಾ ಕಂಪ್ಯೂಟರ್‌ನಂಥ ಯಾವುದೇ ಎಲೆಕ್ಟ್ರಾನಿಕ್‌ ಉಪಕರಣಗಳಿಗೆ ಸಂದೇಶ ರವಾನಿಸುತ್ತದೆ. 

ಅಂದರೆ ಮೊಬೈಲ್‌ ಆನ್‌ ಮಾಡುವುದು, ಯಾರಿಗಾದರೂ ಕರೆ ಮಾಡುವುದು, ಕಂಪ್ಯೂಟರ್‌ನಲ್ಲಿ ಯಾವುದೇ ಕೆಲಸ ಮಾಡುವ ಕುರಿತ ಮಾನವನ ಚಿಂತನೆಗಳನ್ನು ಕಾರ್ಯರೂಪಕ್ಕೆ ತರುವ ಕೆಲಸವನ್ನು ಈ ಚಿಪ್‌ ಮಾಡುತ್ತದೆ.

ಪ್ರಾಣಿಗಳ ಮೇಲೆ ನಡೆಸಿದ ಇಂಥ ಪ್ರಯೋಗ ಯಶಸ್ವಿಯಾದ ಹಿನ್ನೆಲೆಯಲ್ಲಿ ಮಾನವರ ಮೇಲೂ ಚಿಪ್‌ ಪ್ರಯೋಗಕ್ಕೆ ಅಮೆರಿಕ ಸರ್ಕಾರ ಕಳೆದ ವರ್ಷ ಅನುಮತಿ ನೀಡಿತ್ತು. 

ಅದರಂತೆ ಇದೀಗ ದೈಹಿಕ ನ್ಯೂನತೆ ಇರುವ ಅನಾಮಿಕ ವ್ಯಕ್ತಿಯೊಬ್ಬರಿಗೆ ರೋಬೋಟ್‌ ಮೂಲಕ ಶಸ್ತ್ರಚಿಕಿತ್ಸೆ ನಡೆಸಿ ಅವರ ತಲೆಯೊಳಗೆ ಚಿಪ್‌ ಅಳವಡಿಸಲಾಗಿದೆ. 

ಚಿಪ್‌ ಅಳವಡಿಕೆ ಬಳಿಕದ ಫಲಿತಾಂಶ ಆಶಾದಾಯಕವಾಗಿದೆ ಎಂದು ಎಲಾನ್‌ ಮಸ್ಕ್‌ ಹರ್ಷ ವ್ಯಕ್ತಪಡಿಸಿದ್ದಾರೆ.

ಕಾರ್ಯಾಚರಣೆ ಹೇಗೆ?
ಮೆದುಳಿನಲ್ಲಿ ಅಳವಡಿಸಿರುವ ಚಿಪ್‌, ವ್ಯಕ್ತಿಯ ಯೋಚನೆಯಿಂದ ಹೊರಡುವ ನ್ಯೂರಾನ್‌ ಸಂದೇಶಗಳನ್ನು ಗ್ರಹಿಸಿ ಅದನ್ನು ಮೊಬೈಲ್‌ ಅಥವಾ ಕಂಪ್ಯೂಟರ್‌ಗೆ ವರ್ಗಾಯಿಸುತ್ತದೆ. 

ಈ ಮೂಲಕ ವ್ಯಕ್ತಿಯ ಚಿಂತನೆ ಕಾರ್ಯರೂಪಕ್ಕೆ ಬರುತ್ತದೆ. ಇದೀಗ ವ್ಯಕ್ತಿಯ ಮೆದುಳಿನಲ್ಲಿ ಅಳವಡಿಸಿರುವ ಚಿಪ್‌, ವ್ಯಕ್ತಿಯ ಮೆದುಳಿನಿಂದ ರವಾನೆಯಾದ ನ್ಯೂರಾನ್‌ ಸಂದೇಶಗಳನ್ನು ಗ್ರಹಿಸುವಲ್ಲಿ ಯಶಸ್ವಿಯಾಗಿದೆ ಎಂದು ಮಸ್ಕ್‌ ಮಾಹಿತಿ ನೀಡಿದ್ದಾರೆ.

ಅಪಾಯವೂ ಇದೆ: ದೈಹಿಕವಾಗಿ ನ್ಯೂನತೆ ಹೊಂದಿರುವವರ ಪಾಲಿಗೆ ಈ ಯೋಜನೆ ಆಶಾಕಿರಣವಾಗಿದೆಯಾದರೂ, ಚಿಪ್‌ನಂಥ ಎಲೆಕ್ಟ್ರಾನಿಕ್‌ ಉಪಕರಣಗಳನ್ನು ಸುಲಭವಾಗಿ ಹ್ಯಾಕ್‌ ಮಾಡಬಹುದಾದ ಕಾರಣ, ಅಂಥ ಘಟನೆಗಳ ವೇಳೆ ಅಪಾಯಗಳೂ ಎದುರಾಗಬಹುದು ಎಂಬ ಆತಂಕವಿದೆ.