ಸಾರಾಂಶ
ನಾಗಪುರ: ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐಗೆ ಭಾರತೀಯ ಸೇನೆಯ ರಹಸ್ಯ ಮಾಹಿತಿಯನ್ನು ಸೋರಿಕೆ ಮಾಡುತ್ತಿದ್ದ ಆರೋಪದ ಮೇಲೆ ಬಂಧಿತನಾಗಿದ್ದ ಮಾಜಿ ಬ್ರಹ್ಮೋಸ್ ವಾಯುಸೇನಾ ಎಂಜಿನಿಯರ್ ನಿಶಾಂತ್ ಅಗರ್‌ವಾಲ್‌ಗೆ ನಾಗಪುರ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಎಂ.ವಿ. ದೇಶಪಾಂಡೆ ಸೋಮವಾರ ತೀರ್ಪು ನೀಡಿ, ‘ರಾಷ್ಟ್ರದ ಭದ್ರತೆಗೆ ಕಂಟಕ ತರಬಲ್ಲ ಅಪರಾಧ ಮಾಡಿದ ನಿಶಾಂಕ್ ದೋಷಿ ಎಂದು ಸಾಬೀತಾದ ಹಿನ್ನೆಲೆಯಲ್ಲಿ 14 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು 3 ಸಾವಿರ ರು. ದಂಡ ವಿಧಿಸಲಾಗಿದೆ’ ಎಂದು ಆದೇಶಿಸಿದರು.
ಏನಿದು ಪ್ರಕರಣ?:
ನಿಶಾಂಕ್ ಅಗರ್‌ವಾಲ್ ನಾಗಪುರದಲ್ಲಿರುವ ಬ್ರಹ್ಮೋಸ್ ಕ್ಷಿಪಣಿ ತಯಾರಿಕಾ ಸಂಸ್ಥೆಯ ತಾಂತ್ರಿಕ ವಿಭಾಗದ ಉದ್ಯೋಗಿಯಾಗಿದ್ದ. ಆತ ಭಾರತೀಯ ಸೇನೆಯ ರಹಸ್ಯ ಮಾಹಿತಿಯನ್ನು ಪಾಕ್ ಗುಪ್ತಚರ ಸಂಸ್ಥೆಗೆ ರಹಸ್ಯವಾಗಿ ಸೋರಿಕೆ ಮಾಡುತ್ತಿದ್ದ ಆರೋಪ ಕೇಳಿಬಂದಿತ್ತು. ಹೀಗಾಗಿ ಭಯೋತ್ಪಾದನಾ ನಿಗ್ರಹ ದಳ ಮತ್ತು ಸೇನಾ ಗುಪ್ತಚರ ಸಂಸ್ಥೆಗಳ ಜಂಟಿ ಸಹಭಾಗಿತ್ವದಲ್ಲಿ 2018ರಲ್ಲಿ ಉತ್ತರಪ್ರದೇಶದಲ್ಲಿ ಆತನನ್ನು ಬಂಧಿಸಲಾಗಿತ್ತು. ಬಳಿಕ ಆತನ ಮೇಲೆ ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಅಧಿಕೃತ ರಹಸ್ಯ ಕಾಯ್ದೆಯಡಿ (ಒಎಸ್‌ಎ) ಪ್ರಕರಣ ದಾಖಲಿಸಲಾಗಿತ್ತು.