ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ ಢಾಕಾಗೆ ಭೇಟಿ : ಚರ್ಚೆ ವೇಳೆ ಜಟಾಪಟಿ

| Published : Dec 10 2024, 12:32 AM IST / Updated: Dec 10 2024, 04:08 AM IST

ಸಾರಾಂಶ

ಬಾಂಗ್ಲಾದೇಶದಲ್ಲಿ ಹಿಂದೂಗಳು ಹಾಗೂ ಹಿಂದೂ ದೇಗುಲಗಳ ಮೇಲೆ ಅವ್ಯಾಹತ ದಾಳಿ/ದೌರ್ಜನ್ಯ ನಡೆದಿರುವ ನಡುವೆಯೇ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ ಢಾಕಾಗೆ ಭೇಟಿ ನೀಡಿದ್ದು ಹಿಂದೂಗಳ ಮೇಲಿನ ದೌರ್ಜನ್ಯನವನ್ನು ತೀವ್ರವಾಗಿ ಖಂಡಿಸಿದ್ದಾರೆ.

  ಢಾಕಾ  : ಬಾಂಗ್ಲಾದೇಶದಲ್ಲಿ ಹಿಂದೂಗಳು ಹಾಗೂ ಹಿಂದೂ ದೇಗುಲಗಳ ಮೇಲೆ ಅವ್ಯಾಹತ ದಾಳಿ/ದೌರ್ಜನ್ಯ ನಡೆದಿರುವ ನಡುವೆಯೇ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ ಢಾಕಾಗೆ ಭೇಟಿ ನೀಡಿದ್ದು ಹಿಂದೂಗಳ ಮೇಲಿನ ದೌರ್ಜನ್ಯನವನ್ನು ತೀವ್ರವಾಗಿ ಖಂಡಿಸಿದ್ದಾರೆ. 

ಆದರೆ ಇದಕ್ಕೆ ಬಾಂಗ್ಲಾದೇಶ ಕೂಡ ತಿರುಗೇಟು ನೀಡಿದ್ದು, ‘ಭಾರತದ ಮಾಧ್ಯಮಗಳಲ್ಲಿ ಬಾಂಗ್ಲಾ ಬಗ್ಗೆ ತಪ್ಪು ವರದಿಗಾರಿಕೆ ನಡೆಯುತ್ತಿದೆ. ನಮ್ಮ ದೇಶದ ವ್ಯವಹಾರದಲ್ಲಿ ಇನ್ನೊಬ್ಬರು ಮೂಗು ತೂರಿಸಬಾರದು’ ಎಂದಿದೆ.1 ದಿನದ ಭೇಟಿಗಾಗಿ ಸೋಮವಾರ ಮಿಸ್ರಿ ಢಾಕಾಗೆ ಆಗಮಿಸಿದ್ದು, ಬಾಂಗ್ಲಾ ವಿದೇಶಾಂಗ ಕಾರ್ಯದರ್ಶಿ ಮೊಹಮ್ಮದ್‌ ತೌಷಿದ್‌ ಹೌಸೇನ್‌ ಅವರೊಂದಿಗೆ ಮಾತುಕತೆ ನಡೆಸಿದರು. ಬಳಿಕ ಹಂಗಾಮಿ ಸರ್ಕಾರದ ಮುಖ್ಯಸ್ಥ ಮುಹಮ್ಮದ್‌ ಯೂನಸ್‌ ಅವರನ್ನೂ ಭೇಟಿಯಾದರು.

ಬಳಿಕ ಸುದ್ದಿಗಾರರ ಜತೆ ಮಾತನಾಡಿ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದಾಳಿ ಬಗ್ಗೆ ಕಳವಳ ವ್ಯಕ್ತಪಡಿಸಿದ ಮಿಸ್ರಿ, ‘ಧಾರ್ಮಿಕ ಕೇಂದ್ರಗಳ ಮೇಲಿನ ದಾಳಿಗಳು ವಿಷಾದನೀಯ. ದೇಶದಲ್ಲಿನ ಅಲ್ಪಸಂಖ್ಯಾತರ ಸುರಕ್ಷತೆ ಮತ್ತು ಕಲ್ಯಾಣ ಕುರಿತಂತೆ ನಮ್ಮ ಕಳವಳಗಳನ್ನು ನಾನು ತಿಳಿಸಿದ್ದೇನೆ. ಸಾಂಸ್ಕೃತಿಕ, ಧಾರ್ಮಿಕ ಮತ್ತು ರಾಜತಾಂತ್ರಿಕ ಆಸ್ತಿಗಳ ಮೇಲಿನ ದಾಳಿಯ ಕೆಲವು ವಿಷಾದನೀಯ ಘಟನೆಗಳನ್ನು ನಾವು ಚರ್ಚಿಸಿದ್ದೇವೆ’ ಎಂದರು.

‘ಬಾಂಗ್ಲಾದೇಶದೊಂದಿಗೆ ಸಕಾರಾತ್ಮಕ, ರಚನಾತ್ಮಕ ಮತ್ತು ಪರಸ್ಪರ ಲಾಭದಾಯಕ ಸಂಬಂಧ ಹೊಂದಿ, ಅಲ್ಲಿನ ಮಧ್ಯಂತರ ಸರ್ಕಾರದ ಅಧಿಕಾರಿಗಳೊಂದಿಗೆ ಕೆಲಸ ಮಾಡುವ ಭಾರತದ ಇಚ್ಛೆಯನ್ನು ತಿಳಿಸಿದ್ದೇನೆ. ಬಾಂಗ್ಲಾದೇಶದೊಂದಿಗೆ ಉತ್ತಮ ಸಂಬಂಧವನ್ನು ಹಿಂದೆಯೂ ಹೊಂದಿದ್ದೆವು. ಮುಂದೆಯೂ ಭಾರತವು ಬಾಂಗ್ಲಾದೇಶದೊಂದಿಗೆ ಧನಾತ್ಮಕ, ರಚನಾತ್ಮಕ ಮತ್ತು ಪರಸ್ಪರ ಪ್ರಯೋಜನಕಾರಿ ಸಂಬಂಧವನ್ನು ಬಯಸುತ್ತದೆ’ ಎಂದರು.

ಆದರ ಇದಕ್ಕೆ ಬಾಂಗ್ಲಾ ವಿದೇಶಾಂಗ ಕಾರ್ಯದರ್ಶಿ ಜಶೀಮ್ ಉದ್ದೀನ್‌ ತಿರುಉಗೇಟು ನೀಡಿ, ‘ದೇಶದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಇದೆ. 3ನೇಯವರ ಮಧ್ಯಸ್ಥಿಕೆ ಅಗತ್ಯವಿಲ್ಲ’ ಎಂದರು.

 ಬಾಂಗ್ಲಾ ಪ್ರಧಾನಿಯಾಗಿದ್ದ ಶೇಖ್‌ ಹಸೀನಾ ದೇಶ ತೊರೆದು ಭಾರತದಲ್ಲಿ ಆಶ್ರಯ ಪಡೆದ ಬಳಿಕ ಉಭಯದೇಶಗಳ ನಡುವೆ ನಡೆದ ಮೊದಲ ಉನ್ನತ ಮಟ್ಟದ ಸಭೆ ಇದಾಗಿದೆ.ಬಾಂಗ್ಲಾದಲ್ಲಿ ಹಸೀನಾ ಸರ್ಕಾರದ ಪದಚ್ಯುತಿ ನಂತರ ಹಿಂದೂಗಳು ಹಾಗೂ ಹಿಂದೂ ದೇವಾಲಯಗಳ ಮೇಲೆ ದಾಳಿ ಹೆಚ್ಚಿವೆ. ಹಿಂದೂಗಳ ಪರ ದನಿ ಎತ್ತಿದ್ದ ಇಸ್ಕಾನ್ ಸಂತ ಚಿನ್ಮಯ ಕೃಷ್ಣ ದಾಸ್‌ ಅವರನ್ನು ಬಂಧಿಸಿದ ನಂತರ ಭಾರತದಲ್ಲಿ ತೀವ್ರ ಪ್ರತಿಭಟನೆಗಳು ಆರಂಭವಾಗಿದ್ದು. ಭಾರತ-ಬಾಂಗ್ಲಾ ಸಂಬಂಧ ತೀರಾ ಹದಗೆಟ್ಟಿದೆ.