ಮರುಭೂಮಿ ದೇಶಗಳಲ್ಲಿ ಭಾರಿ ಮಳೆ, ಪ್ರವಾಹ!

| Published : Apr 17 2024, 01:19 AM IST / Updated: Apr 17 2024, 06:48 AM IST

ಸಾರಾಂಶ

ಮರಳುಗಾಡಿನ ದೇಶಗಳಾದ ಯುಎಇ, ಒಮಾನ್‌ ಸೇರಿದಂತೆ ಕೊಲ್ಲಿ ರಾಷ್ಟ್ರಗಳ ಹಲವು ಪ್ರದೇಶಗಳಲ್ಲಿ ಕಳೆದ 2 ದಿನಗಳಲ್ಲಿ ಭಾರೀ ಪ್ರಮಾಣದ ಮಳೆ ಸುರಿದ ಕಾರಣ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು 18 ಜನರು ಸಾವನ್ನಪ್ಪಿದ್ದಾರೆ.

ದುಬೈ: ಮರಳುಗಾಡಿನ ದೇಶಗಳಾದ ಯುಎಇ, ಒಮಾನ್‌ ಸೇರಿದಂತೆ ಕೊಲ್ಲಿ ರಾಷ್ಟ್ರಗಳ ಹಲವು ಪ್ರದೇಶಗಳಲ್ಲಿ ಕಳೆದ 2 ದಿನಗಳಲ್ಲಿ ಭಾರೀ ಪ್ರಮಾಣದ ಮಳೆ ಸುರಿದ ಕಾರಣ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು 18 ಜನರು ಸಾವನ್ನಪ್ಪಿದ್ದಾರೆ. 

ಭಾರೀ ಮಳೆಯಲ್ಲಿ ಸಿಕ್ಕಿಬಿದ್ದ ಹಲವರನ್ನು ರಕ್ಷಿಸಲಾಗಿದೆ. ಆದರೆ ಇನ್ನೂ ಹಲವಾರು ಜನರು ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ಏರುವ ಭೀತಿ ಇದೆ. ಏಕಾಏಕಿ ಸುರಿದ ಭಾರೀ ಮಳೆಯಿಂದಾಗಿ ಸಾಮಾನ್ಯ ಜನಜೀವನ ಅಸ್ತವ್ಯಸ್ತವಾಗಿದೆ.ಯುಎಇ ರಾಜಧಾನಿ ದುಬೈನಾದ್ಯಂತ ಭಾರೀ ಮಳೆಯ ಪರಿಣಾಮ ಹೆದ್ದಾರಿಗಳಲ್ಲಿ ಭಾರೀ ನೀರು ನಿಂತಿದ್ದು ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಹಲವು ಕಡೆ ಮನೆಗಳಿಗೂ ನೀರು ನುಗ್ಗಿ ನಾಗರಿಕರು ಸಂಕಷ್ಟ ಎದುರಿಸುವಂತಾಗಿದೆ. ವಿಮಾನ ನಿಲ್ದಾಣ ಮತ್ತು ಮೆಟ್ರೋ ರೈಲು ನಿಲ್ದಾಣದೊಳಗೆ ನೀರು ನುಗ್ಗಿದ ಕಾರಣ ವಿಮಾನ ಹಾಗೂ ರೈಲು ಸೇವೆಯಲ್ಲಿ ವ್ಯತ್ಯಯವಾಗಿದೆ. ಬುಧವಾರ ನಗರದಾದ್ಯಂತ ಮಳೆ ಮುಂದುವರೆಯುವ ಸಾಧ್ಯತೆ ಇದ್ದು, ರೆಡ್‌ ಅಲರ್ಟ್‌ ಘೋಷಿಸಲಾಗಿದೆ.

ಗಾಳಿ ಜೋರಾಗಿ ಬೀಸಿದ ಪರಿಣಾಮ ವಿಮಾನಗಳ ಹಾರಾಟಕ್ಕೂ ಅಡ್ಡಿಯುಂಟಾಗಿದೆ. ಅಧಿಕ ವರ್ಷಧಾರೆಯಿಂದಾಗಿ ಯುಎಇಯ ಕೆಲವು ಕಡೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಸರ್ಕಾರಿ ಉದ್ಯೋಗಿಗಳಿಗೆ ಸಾಧ್ಯವಾದರೆ ಮನೆಯಿಂದಲೇ ಕೆಲಸ ಮಾಡಿ ಎನ್ನುವ ಸೂಚನೆ ನೀಡಲಾಗಿದೆ.

ಇನ್ನೊಂದೆಡೆ ನೆರೆಯ ಒಮಾನ್‌ನಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹದ ಪರಿಸ್ಥಿತಿ ಉಂಟಾಗಿದ್ದು, ಮಳೆ ಸಂಬಂಧಿ ಘಟನೆಗಳಿಗೆ 18 ಮಂದಿ ಬಲಿಯಾಗಿದ್ದಾರೆ. ಒಮಾನ್‌, ಯುಎಇ ಜೊತೆಗೆ ಬಹ್ರೇನ್, ಕತಾರ್, ಸೌದಿ ಅರೇಬಿಯಾದಲ್ಲಿಯೂ ಭಾರೀ ಮಳೆಯಾಗಿದೆ. ಬಹುತೇಕ ಕೊಲ್ಲಿ ದೇಶಗಳಲ್ಲಿ ಬುಧವಾರವೂ ಭಾರೀ ಮಳೆ ಮುಂದುವರೆಯುವ ಎಚ್ಚರಿಕೆ ನೀಡಲಾಗಿದೆ.ಮರಳುಗಾಡಿನ ಕೊಲ್ಲಿ ರಾಷ್ಟ್ರಗಳಲ್ಲಿ ಮಳೆ ವಿರಳ. ಆದರೆ ಶುಷ್ಕ ವಾತಾವರಣವಿರುವ ಸಂದರ್ಭದಲ್ಲಿ ಇಲ್ಲಿ ಮಳೆ ಬೀಳುತ್ತದೆ. ಭಾರೀ ಮಳೆ ನಿರ್ವಹಿಸುವ ವ್ಯವಸ್ಥೆ ಇಲ್ಲದ ಕಾರಣ ಏಕಾಏಕಿ ಮಳೆ ಸುರಿದಾಗ ಇಡೀ ನಗರವೇ ನದಿಯಂತೆ ಭಾಸವಾಗುತ್ತದೆ.