ಭೀಕರ ಕಾಡ್ಗಿಚ್ಚಿಗೆ ಹಾಲಿವುಡ್‌ ಧಗಧಗ

| Published : Jan 10 2025, 01:45 AM IST

ಸಾರಾಂಶ

ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ಲಾಸ್‌ ಏಂಜಲೀಸ್‌ನಲ್ಲಿ ಕಾಣಿಸಿಕೊಡಿರುವ ಕಾಡ್ಗಿಚ್ಚು ಹಾಲಿವುಡ್‌ ಚಿತ್ರರಂಗದ ಹೃದಯ ಭಾಗವಾಗಿರುವ ಹಾಲಿವುಡ್‌ ಹಿಲ್ಸ್‌ನಲ್ಲೂ ರಣಾರ್ಭಟ ತೋರುತ್ತಿದೆ.

- ಲಾಸ್‌ ಏಂಜಲೀಸಲ್ಲಿ 2000 ಮನೆ ಭಸ್ಮ । 1.4 ಲಕ್ಷ ಜನ ತೆರವು । 26000 ಎಕರೆಯಲ್ಲಿ ಬೆಂಕಿ- ಸನ್‌ಸೆಟ್‌ ಫೈರ್‌ನಿಂದಾಗಿ ಆಸ್ಕರ್‌ ಪ್ರಶಸ್ತಿ ಘೋಷಣೆಗೂ ಅಡ್ಡಿ । 4.8 ಲಕ್ಷ ಕೋಟಿ ರು. ನಷ್ಟ?

--

ನೋರಾ ಫತೇಹಿ, ಬೈಡೆನ್‌ ಮಗನ ಮನೆಗೂ ಬೆಂಕಿ

ಅಧ್ಯಕ್ಷ ಜೋ ಬೈಡೆನ್‌ ಪುತ್ರ ಹಂಟರ್‌ ಬೈಡೆನ್‌ ಹಾಗೂ ಬಾಲಿವುಡ್‌ ನಟಿ ನೋರಾ ಫತೇಹಿ ಮನೆ ಕೂಡ ಅಮೆರಿಕದ ಲಾಸ್‌ ಏಂಜಲೀಸ್‌ ಕಾಡ್ಗಿಚ್ಚಿನಿಂದ ಹಾನಿಗೆ ಒಳಗಾಗಿವೆ.

--ಲಾಸ್‌ ಏಂಜಲೀಸ್‌: ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ಲಾಸ್‌ ಏಂಜಲೀಸ್‌ನಲ್ಲಿ ಕಾಣಿಸಿಕೊಡಿರುವ ಕಾಡ್ಗಿಚ್ಚು ಹಾಲಿವುಡ್‌ ಚಿತ್ರರಂಗದ ಹೃದಯ ಭಾಗವಾಗಿರುವ ಹಾಲಿವುಡ್‌ ಹಿಲ್ಸ್‌ನಲ್ಲೂ ರಣಾರ್ಭಟ ತೋರುತ್ತಿದೆ. ಈ ಭೀಕರ ಕಾಡ್ಗಿಚ್ಚಿಗೆ ಬಲಿಯಾದವರ ಸಂಖ್ಯೆ ಗುರುವಾರ 5ಕ್ಕೇರಿದೆ. 1.40 ಲಕ್ಷ ಜನರನ್ನು ತೆರವುಗೊಳಿಸಲಾಗಿದ್ದು, ತುರ್ತುಸ್ಥಿತಿ ಸಾರಲಾಗಿದೆ. 2000 ಮನೆಗಳು ಭಸ್ಮವಾಗಿವೆ. ಭೌತಿಕ ಹಾಗೂ ಪರಿಸರದ ಮೇಲಾದ ಒಟ್ಟಾರೆ ಹಾನಿಯ ಪ್ರಮಾಣ ಸುಮಾರು 4.8 ಲಕ್ಷ ಕೋಟಿ ರು. ಎಂದು ಅಂದಾಜಿಸಲಾಗಿದ್ದು, ಬೆಂಕಿ ನಿಯಂತ್ರಿಸಲು ನಿವೃತ್ತ ಅಗ್ನಿಶಾಮಕ ಸಿಬ್ಬಂದಿಯನ್ನೂ ಕರೆಸಿಕೊಳ್ಳಲಾಗಿದೆ.

ಕಾಡ್ಗಿಚ್ಚು 26 ಸಾವಿರ ಎಕರೆ ಪ್ರದೇಶಕ್ಕೆ ವಿಸ್ತರಿಸಿದ್ದು, 6 ಕಡೆಗಳಲ್ಲಿ ನಿರಂತರವಾಗಿ ಉರಿಯುತ್ತಿದೆ. ದಕ್ಷಿಣ ಕ್ಯಾಲಿಫೋರ್ನಿಯಾದ 1.7 ಕೋಟಿ ಜನ ಇನ್ನೂ ಬೆಂಕಿ ಹಾಗೂ ಹೊಗೆಯ ಸಮಸ್ಯೆಗೆ ತುತ್ತಾಗಿದ್ದಾರೆ.

ಇದರ ನಡುವೆ ಸುಮಾರು 2000ಕ್ಕೂ ಹೆಚ್ಚು ಕಟ್ಟಡಗಳು ಹಾನಿಗೊಳಗಾಗಿವೆ. ಇನ್ನೂ ಸಾವಿರಾರು ಕಟ್ಟಡಗಳು ಅಪಾಯದಲ್ಲಿವೆ. ಈವರೆಗೆ ಒಟ್ಟಾರೆ ಪರಿಸರದ ಮೇಲೆ ಹಾಗೂ ಆಸ್ತಿಗಳಿಗೆ 52 ಶತಕೋಟಿ ಡಾಲರ್‌ನಿಂದ 57 ಶತಕೋಟಿ ಡಾಲರ್‌ವರೆಗೆ (4.4 ಲಕ್ಷ ಕೋಟಿ ರು.ನಿಂದ 4.8 ಲಕ್ಷ ಕೋಟಿ ರು.ವರೆಗೆ) ಹಾನಿ ಆಗಿರಬಹುದು ಎಂದು ಹೇಳಲಾಗಿದೆ.

ಅಮೆರಿಕದಲ್ಲಿ 2005ರಲ್ಲಿ ಬೀಸಿದ್ದ ಕ್ಯಾಟ್ರಿನಾ ಚಂಡಮಾರುತ 200 ಶತಕೋಟಿ ಡಾಲರ್‌ (17 ಲಕ್ಷ ಕೋಟಿ ರು.) ಹಾನಿ ಮಾಡಿತ್ತು.

ತುರ್ತುಸ್ಥಿತಿ ಘೋಷಣೆ:

ಬೆಂಕಿ ಹಿನ್ನೆಲೆಯಲ್ಲಿ ಕ್ಯಾಲಿಫೋರ್ನಿಯಾದ ಗವರ್ನರ್‌ ಗೆವಿನ್‌ ನ್ಯೂಸನ್‌ ತುರ್ತುಸ್ಥಿತಿ ಘೋಷಿಸಿದ್ದಾರೆ. ಅತ್ತ ಇದ್ದಕ್ಕಿದ್ದಂತೆ ಕಾಣಿಸಿಕೊಂಡ ಬೆಂಕಿಯನ್ನು ನಂದಿಸಲು ನೀರು ಹಾಗೂ ಪರಿಸ್ಥಿತಿಯನ್ನು ನಿಭಾಯಿಸಲು ಅಗ್ನಿಶಾಮಕ ಸಿಬ್ಬಂದಿಯ ಕೊರತೆ ಎದುರಾಗಿದೆ. ಪರಿಣಾಮವಾಗಿ ಕಾಡ್ಗಿಚ್ಚು ಆರಿಸಲು ನಿವೃತ್ತ ಅಗ್ನಿಶಾಮಕ ಸಿಬ್ಬಂದಿಗಳನ್ನು ಕೆಲಸಕ್ಕೆ ಮರಳಿ ಕರೆಯಲಾಗಿದೆ. ಹೆಲಿಕಾಪ್ಟರ್‌ಗಳ ಮೂಲಕ ಕೂಡ ನೀರು ಸುರಿಯಲಾಗುತ್ತಿದೆ.

ಬೆಂಕಿ ನಂದಿಸಲು ನೀರಿನ ಕೊರತೆ ಎದುರಾಗಿದ್ದು, ಲಾಸ್‌ ಏಂಜಲೀಸ್‌ನ ನೀರು ಮತ್ತು ವಿದ್ಯುತ್ ಮುಖ್ಯ ಕಾರ್ಯನಿರ್ವಾಹಕಿ ಜಾನಿಸ್ ಕ್ವಿನೋನ್ಸ್ ಸಾಧ್ಯವಾದಷ್ಟು ನೀರನ್ನು ಉಳಿಸುವಂತೆ ಜನರಲ್ಲಿ ಮನವಿ ಮಾಡಿದ್ದಾರೆ.

ಸನ್‌ಸೆಟ್‌ ಫೈರ್‌ ಎಂಬ ಹೆಸರು:

ಈ ನಡುವೆ, ಸಂರಕ್ಷಿತ ಪ್ರದೇಶವೊಂದರಲ್ಲಿ ಕಾಣಿಸಿಕೊಂಡ ಬೆಂಕಿಗೆ ‘ಸನ್‌ಸೆಟ್‌ ಫೈರ್‌’ ಎಂದು ಹೆಸರಿಡಲಾಗಿದೆ.ಹಾಲಿವುಡ್‌ ಅಪಾಯದಲ್ಲಿ:

ಹಾಲಿವುಡ್‌ ಚಿತ್ರರಂಗದ ಹೃದಯಭಾಗ ಹಾಲಿವುಡ್‌ ಹಿಲ್ಸ್ ಪ್ರದೇಶವಾಗಿದೆ. ಇಲ್ಲಿ ಅನೇಕ ಹಾಲಿವುಡ್ ಸ್ಟುಡಿಯೋಗಳು, ಚಿತ್ರನಟರ ಮನೆಗಳು ಇವೆ. ಅವು ಅಪಾಯಕ್ಕೆ ಸಿಲುಕಿವೆ. ಆಸ್ಕರ್‌ ಪ್ರಶಸ್ತಿ ವಿತರಣೆ ಸಮಾರಂಭ ನಡೆವ ಡಾಲ್ಬಿ ಥಿಯೇಟರ್‌ಗೂ ಭೀತಿ ಎದುರಾಗಿದೆ. ಹೀಗಾಗಿ ಪ್ರಶಸ್ತಿ ಘೋಷಣೆಗೂ ತೊಡಕಾಗಿದೆ.ಹಾಲಿವುಡ್‌ ನಟರು ಸೇರಿದಂತೆ ಖ್ಯಾತನಾಮರು ವಾಸವಿರುವ ಹಾಲಿವುಡ್‌ ಹಿಲ್‌ಗೂ ಹಬ್ಬಿರುವ ಕಾಡ್ಗಿಚ್ಚಿನಿಂದಾಗಿ ಬಿಲ್ಲಿ ಕ್ರಿಸ್ಟಲ್‌, ಮ್ಯಾಂಡಿ ಮೋರ್‌, ಜೇಮೀ ಲೀ ಕರ್ಟಿಸ್ ಸೇರಿದಂತೆ ಹಲವರು ಮನೆ ಕಳೆದುಕೊಂಡಿದ್ದಾರೆ. ಅಧ್ಯಕ್ಷ ಜೋ ಬೈಡೆನ್‌ ಪುತ್ರ ಹಂಟರ್‌ ಬೈಡೆನ್‌ ಹಾಗೂ ಬಾಲಿವುಡ್‌ ನಟಿ ನೋರಾ ಫತೇಹಿ ಮನೆ ಬೆಂಕಿಗೀಡಾಗಿವೆ.