ಕೆಂಪು ಸಮುದ್ರದಲ್ಲಿ ನಡೆದ ದಾಳಿಯಿಂದಾಗಿ ರಷ್ಯಾದಿಂದ ಭಾರತಕ್ಕೆ ಬರುತ್ತಿದ್ದ ತೈಲ ಹಡಗಿಗೆ ಹಾನಿಯಾಗಿದೆ.
ನವದೆಹಲಿ: ಮಧ್ಯಪ್ರಾಚ್ಯದ ಸಮುದ್ರಗಳಲ್ಲಿ ಹೌತಿಗಳ ಅಟ್ಟಹಾಸ ಮುಂದುವರೆದಿದ್ದು, ರಷ್ಯಾದಿಂದ ಭಾರತಕ್ಕೆ ಬರುತ್ತಿದ್ದ ತೈಲ ಸಾಗಾಣೆ ಹಡಗಿನ ಮೇಲೆ ಯೆಮೆನ್ ಬೆಂಬಲಿತ ಹೌತಿ ಉಗ್ರರು ಕೆಂಪು ಸಮುದ್ರದಲ್ಲಿ ಕ್ಷಿಪಣಿ ದಾಳಿ ಮಾಡಿದ್ದಾರೆ.
ರಷ್ಯಾದಿಂದ ಪ್ರಿಮೋರ್ಸ್ಕ್‌ನಿಂದ ಭಾರತದ ವದಿನಾರ್‌ಗೆ ಬರುತ್ತಿದ್ದ ಆ್ಯಂಡ್ರೊಮೆಡಾ ಸ್ಟಾರ್ ಎಂಬ ತೈಲ ಸಾಗಾಣೆ ಹಡಗಿಗೆ ದಾಳಿ ಮಾಡಿರುವುದಾಗಿ ಹೌದಿ ವಕ್ತಾರರಾದ ಯಾಹ್ಯಾ ಸಹ್ಯೇನ್ ಹೇಳಿದ್ದಾರೆ. ಬಳಿಕ ಈ ದಾಳಿಯನ್ನು ಅಮೆರಿಕ, ಬ್ರಿಟನ್ ಸೇರಿದಂತೆ ಹಲವು ರಾಷ್ಟ್ರಗಳು ದೃಢೀಕರಿಸಿವೆ. ಈ ಹಡಗು ಪನಾಮಾ ಒಡೆತನಕ್ಕೆ ಸೇರಿದ್ದು ಎಂದು ಹೌತಿ ಹೇಳುತ್ತಿದ್ದರೂ ಇತ್ತೀಚೆಗೆ ಸೀಷೆಲ್ಸ್ ಮೂಲದ ವ್ಯಕ್ತಿಯೊಬ್ಬರಿಗೆ ಮಾರಾಟವಾಗಿದೆ ಎಂಬುದಾಗಿ ರಷ್ಯಾ ಪ್ರತಿಪಾದಿಸಿದೆ.
ಗಾಜಾ ಪಟ್ಟಿಯಲ್ಲಿ ನಡೆಯುತ್ತಿರುವ ಪ್ಯಾಲೆಸ್ತೀನ್ ಮತ್ತು ಇಸ್ರೇಲ್ ನಡುವಿನ ಯುದ್ಧದಲ್ಲಿ ಪ್ಯಾಲೆಸ್ತೀನ್‌ಗೆ ತಮ್ಮ ಬೆಂಬಲ ವ್ಯಕ್ತಪಡಿಸುವ ಸಲುವಾಗಿ ಮಧ್ಯಪ್ರಾಚ್ಯದ ಏಡೆನ್ ಕೊಲ್ಲಿ, ಕೆಂಪು ಸಮುದ್ರ, ಸೂಯೆಜ಼್ ಕಾಲುವೆ ಸೇರಿದಂತೆ ಹಲವು ಜಲಮಾರ್ಗಗಳಲ್ಲಿ ಸಂಚರಿಸುವ ಸರಕು ಸಾಗಾಣೆ ಹಡಗುಗಳಿಗೆ ಇರಾನ್ ಮೂಲದ ಹೌತಿ ಉಗ್ರರು ದಾಳಿ ಮಾಡುತ್ತಿದ್ದಾರೆ. ಭಾರತೀಯ ನೌಕಾಪಡೆ ಬಹುತೇಕ ಬಾರಿ ವಿಶೇಷ ಕಾರ್ಯಾಚರಣೆ ನಡೆಸಿ ಹೌತಿಗಳು ವಶಪಡಿಸಿಕೊಂಡ ಹಡಗುಗಳನ್ನು ರಕ್ಷಿಸಿದೆ.