ಸಾರಾಂಶ
ದಾವೋಸ್: ಕಳೆದ 3 ವರ್ಷಗಳ ಅವಧಿಯಲ್ಲಿ ವಿಶ್ವದ ಟಾಪ್ 5 ಶ್ರೀಮಂತರ ಆಸ್ತಿ ದ್ವಿಗುಣವಾಗಿದ್ದರೆ, ಇದೇ ಅವಧಿಯಲ್ಲಿ ವಿಶ್ವದ 500 ಕೋಟಿ ಜನರ ಆಸ್ತಿಯಲ್ಲಿ ಇಳಿಕೆಯಾಗಲಿದೆ. ಈಗಿನ ಪ್ರಮಾಣದಲ್ಲೇ ಸಾಗಿದರೆ ವಿಶ್ವದ ಬಡತನ ನಿವಾರಣೆಗೆ ಇನ್ನೂ ಕನಿಷ್ಠ 229 ವರ್ಷ ಬೇಕು.
ಇದು ಜಗತ್ತಿನ ಸಂಪತ್ತಿನ ಅಸಮಾನ ಹಂಚಿಕೆಯನ್ನು ತೋರಿಸುತ್ತಿದೆ ಎಂದು ಮಾನವ ಹಕ್ಕುಗಳ ಕುರಿತಾದ ಸ್ವಿಜರ್ಲೆಂಡ್ ಮೂಲದ ಸಂಸ್ಥೆಯಾದ ಆಕ್ಸ್‌ಫಾಮ್ ತನ್ನ ವಾರ್ಷಿಕ ವರದಿಯಲ್ಲಿ ತಿಳಿಸಿದೆ.
ದಾವೋಸ್‌ನಲ್ಲಿ ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಮ್ಮೇಳನಕ್ಕೂ ಮುನ್ನ ಈ ಕುರಿತು ವರದಿ ಬಿಡುಗಡೆ ಮಾಡಿರುವ ಆಕ್ಸ್‌ಫಾಮ್, ‘ಇನ್ನು ಕೇವಲ ಒಂದು ದಶಕದ ಅವಧಿಯಲ್ಲಿ ಪ್ರಪಂಚದಲ್ಲಿ ಯಾರಾದರೂ ಶ್ರೀಮಂತ ವ್ಯಕ್ತಿಯೊಬ್ಬ ಮೊದಲ ಟ್ರಿಲಿಯನೇರ್ ಆಸ್ತಿ ಹೊಂದಿದ ವ್ಯಕ್ತಿಯಾಗಲಿದ್ದಾರೆ.
ವಿಶ್ವದ 10 ದೊಡ್ಡ ಸಂಸ್ಥೆಗಳ ಪೈಕಿ ಏಳರಲ್ಲಿ ಸಿಇಒ ಅಥವಾ ಪ್ರಧಾನ ಷೇರುದಾರರು ಬಿಲಿಯನೇರ್‌ಗಳಾಗಿದ್ದಾರೆ’ ಎಂದಿದೆ. ಅಲ್ಲದೇ ‘148 ಟಾಪ್ ಕಾರ್ಪೊರೇಟ್ ಸಂಸ್ಥೆಗಳು 1.8 ಟ್ರಿಲಿಯನ್ ಡಾಲರ್ ಲಾಭ ಗಳಿಸಿದೆ.
3 ವರ್ಷ ಅವಧಿಯಲ್ಲಿ ಶೇ.52ರಷ್ಟು ಹೆಚ್ಚು ಲಾಭ ಕಂಡಿವೆ. 2020ರ ಬಳಿಕ ವಿಶ್ವದ ಟಾಪ್ 5 ಶ್ರೀಮಂತರ ಸರಾಸರಿ ಆಸ್ತಿ 405 ಶತಕೋಟಿಯಿಂದ ಡಾಲರ್‌ನಿಂದ 869 ಶತಕೋಟಿ ಡಾಲರ್‌ಗೆ ಏರಿದೆ. ಆದರೆ ಕೋಟ್ಯಂತರ ಜನರು, ಸಾಂಕ್ರಾಮಿಕ ರೋಗ, ಯುದ್ಧದಿಂದ ಹಾನಿ, ಬಡತನ ಸೇರಿದಂತೆ ಅನೇಕ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂದಿದೆ.