ದುಬೈ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ‘ಕದನ ವಿರಾಮ ವಿಸ್ತರಣೆ ಆಗಲಿದೆ. ಆದರೆ ಹೋರ್ಮುಜ್ ಜಲಸಂಧಿ ಮೇಲಿನ ಅಮೆರಿಕದ ದಿಗ್ಬಂಧನ ಮುಂದುವರಿಯಲಿದೆ’ ಎಂದು ಘೋಷಿದ ಬೆನ್ನಲ್ಲೇ ಹೋರ್ಮುಜ್ ಉದ್ವಿಗ್ನಗೊಂಡಿದೆ. ಬುಧವಾರ ಜಲಸಂಧಿ ದಾಟುತ್ತಿದ್ದ 3 ಹಡಗುಗಳ ಮೇಲೆ ಇರಾನ್ ದಾಳಿ ನಡೆಸಿದೆ. ಇವುಗಳಲ್ಲಿ 2 ಲೈಬೀರಿಯಾ ಹಾಗೂ ಪನಾಮಾ ಧ್ವಜ ಹೊಂದಿವೆ. 1 ಹಡಗು ಭಾರತದ ಗುಜರಾತ್‌ನತ್ತ ತೆರಳುತ್ತಿತ್ತು ಎಂದು ತಿಳಿದುಬಂದಿದೆ.
ಈ ಮೂರು ಹಡಗುಗಳಲ್ಲಿ 2 ಇರಾನ್ ವಶದಲ್ಲಿದ್ದು, ಮತ್ತೊಂದು ಹಡಗು ಸಮುದ್ರದಲ್ಲೇ ಉಳಿದುಕೊಂಡಿದೆ.
ಭಾರತೀಯ ಹಡಗೊಂದರ ಮೇಲೆ ಇರಾನ್ ದಾಳಿ
ಏ.18ರಂದು ಹೋರ್ಮುಜ್ ಜಲಸಂಧಿ ದಾಟುತ್ತಿದ್ದ ಭಾರತೀಯ ಹಡಗೊಂದರ ಮೇಲೆ ಇರಾನ್ ದಾಳಿ ನಡೆಸಿತ್ತು. ದಾಳಿಗೆ ಭಾರತ ತೀವ್ರ ಆಕ್ಷೇಪವನ್ನೂ ಸಲ್ಲಿಸಿತ್ತು. ಇದರ ಬೆನ್ನಲ್ಲೇ ಇದೀಗ ಮತ್ತೆ ದಾಳಿ ನಡೆದಿರುವುದು ಆತಂಕ ಮೂಡಿಸಿದೆ.
ಇರಾನ್ ಸುದ್ದಿವಾಹಿನಿಗಳ ಪ್ರಕಾರ ಎಂಎಸ್‌ಸಿ ಫ್ರಾಸ್ಸೆಸ್ಕಾ ಮತ್ತು ಇಫಾಮಿನೋಡ್ಸ್ ಹೆಸರಿನ ಹಡಗುಗಳನ್ನು ಇರಾನ್ ವಶಕ್ಕೆ ಪಡೆದಿದೆ. ಇವುಗಳಲ್ಲಿ ಒಂದು ಗುಜರಾತ್‌ಗೆ ತೆರಳುತ್ತಿದ್ದರೆ, ಇನ್ನೊಂದು ಹಡಗು ಶ್ರೀಲಂಕಾಗೆ ತೆರಳುತ್ತಿತ್ತು. ಈ ಹಡಗುಗಳು ಅಗತ್ಯ ಪರವಾನಗಿ ಹೊಂದಿಲ್ಲದ ಕಾರಣ ವಶಕ್ಕೆ ಪಡೆಯಲಾಗಿದೆ ಎಂದು ಇರಾನ್ ಹೇಳಿಕೊಂಡಿದೆ.
ಒಂದು ಹಡಗಿಗೆ ಹಾನಿ:
ಇರಾನ್ ದಾಳಿಯಲ್ಲಿ ಲೈಬೀರಿಯಾದ ಧ್ವಜ ಹೊಂದಿದ್ದ ಸರಕು ಸಾಗಣೆ ಹಡಗಿಗೆ ಹಾನಿಯಾಗಿದೆ. ಇನ್ನು ಎರಡನೇ ಹಡಗು ಪನಾಮ ಧ್ವಜ ಹೊಂದಿದೆ. ಮೂರನೇ ಹಡಗು ಲಿಬಿಯಾದ ಧ್ವಜ ಹೊಂದಿತ್ತು. ಈ ಹಡಗು ಹೋರ್ಮುಜ್ ಜಲಸಂಧಿ ದಾಟುವಾಗ ದಾಳಿ ನಡೆದಿದೆ. ಈ ಹಡಗು ಸಮುದ್ರದಲ್ಲೇ ಉಳಿದುಕೊಂಡಿದೆ.
ಮಧ್ಯಪ್ರಾಚ್ಯ ಸಂಘರ್ಷ ಆರಂಭವಾದ ಬಳಿಕ ಹೋರ್ಮುಜ್ ಜಲಸಂಧಿಯಲ್ಲಿ ಸುಮಾರು 30 ಹಡಗುಗಳ ಮೇಲೆ ದಾಳಿ ನಡೆಸಲಾಗಿದೆ.
