ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸತತ ಸುಳಿವುಗಳನ್ನು ನೀಡುತ್ತಿರುವ ಬೆನ್ನಲ್ಲೇ ಇರಾನ್ ಸಮರಾಭ್ಯಾಸ ಆರಂಭಿಸಿದೆ. ಇದೇ ವೇಳೆ, ‘ಅಮೆರಿಕವು ನಮ್ಮ ಮೇಲೆ ದಾಳಿ ಮಾಡಿದರೆ ಮಧ್ಯಪ್ರಾಚ್ಯದಲ್ಲಿ ಅಮೆರಿಕ ಹೊಂದಿರುವ 3 ಸೇನಾ ನೆಲೆಗಳ ಮೇಲೆ ದಾಳಿ ಮಾಡಬೇಕಾಗುತ್ತದೆ ಎಂದು ಇರಾನ್  ಎಚ್ಚರಿಸಿದೆ.

 ಟೆಹ್ರಾನ್: ತನ್ನ ಮೇಲೆ ದಾಳಿ ಮಾಡುವ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸತತ ಸುಳಿವುಗಳನ್ನು ನೀಡುತ್ತಿರುವ ಬೆನ್ನಲ್ಲೇ ಇರಾನ್ ಸಮರಾಭ್ಯಾಸ ಆರಂಭಿಸಿದೆ. ಇದೇ ವೇಳೆ, ‘ಅಮೆರಿಕವು ನಮ್ಮ ಮೇಲೆ ದಾಳಿ ಮಾಡಿದರೆ ಮಧ್ಯಪ್ರಾಚ್ಯದಲ್ಲಿ ಅಮೆರಿಕ ಹೊಂದಿರುವ 3 ಸೇನಾ ನೆಲೆಗಳ ಮೇಲೆ ದಾಳಿ ಮಾಡಬೇಕಾಗುತ್ತದೆ ಎಂದು ಇರಾನ್ ಬುಧವಾರ ಎಚ್ಚರಿಸಿದೆ.

ಇರಾನ್‌ 3 ರಾಜತಾಂತ್ರಿಕರು ರಾಯಿಟರ್ಸ್‌ ಸುದ್ದಿ ಸಂಸ್ಥೆ ಜತೆ ಮಾತನಾಡಿ, ‘ನಾವು ಎಲ್ಲ ಶಸ್ತ್ರಾಸ್ತ್ರ, ಸೇನೆಯನ್ನು ಸಿದ್ಧ ಮಾಡಿಕೊಳ್ಳುತ್ತಿದ್ದೇವೆ. ಅಮೆರಿಕ ನಮ್ಮ ಮೇಲೆ ದಾಳಿ ಮಾಡಿದರೆ ಕತಾರ್‌ನಲ್ಲಿನ ಅಮೆರಿಕದ ಸೇನಾನೆಲೆ ಸೇರಿ ಮಧ್ಯಪ್ರಾಚ್ಯದಲ್ಲಿನ 3 ಅಮೆರಿಕ ನೆಲೆಗಳ ಮೇಲೆ ದಾಳಿ ಮಾಡಲಿದ್ದೇವೆ’ ಎಂದಿದ್ದಾರೆ.

ಇದರ ಬೆನ್ನಲ್ಲೇ ಕತಾರ್‌ನಲ್ಲಿರುವ ಅಮೆರಿಕದ ‘ಅಲ್ ಉದೈದ್’ ವಾಯುನೆಲೆಯಿಂದ ಹೊರಹೋಗುವಂತೆ ಕೆಲವು ಸಿಬ್ಬಂದಿಗೆ ಆ ದೇಶ ಸೂಚಿಸಿದೆ ಎಂದು ಮೂವರು ರಾಜತಾಂತ್ರಿಕರು ತಿಳಿಸಿದ್ದಾರೆ.

ಇರಾನ್‌ ಸಮರಾಭ್ಯಾಸ:

ರಾಷ್ಟ್ರವ್ಯಾಪಿ ಸರ್ಕಾರಿ ವಿರೋಧಿ ಪ್ರತಿಭಟನೆಗಳು ಮತ್ತು ಅಮೆರಿಕದ ದಾಳಿ ಮುನ್ಸೂಚನೆ ಹಿನ್ನೆಲೆಯಲ್ಲಿ ಇರಾನ್ ತನ್ನ ಪರ್ಷಿಯನ್ ಕೊಲ್ಲಿ ಕರಾವಳಿಯಲ್ಲಿ ಮತ್ತು ಇರಾಕ್ ಮತ್ತು ಅಜೆರ್ಬೈಜಾನ್ ಗಡಿಯಲ್ಲಿರುವ ಪ್ರದೇಶಗಳಲ್ಲಿ ನೇರ ಗುಂಡಿನ ಕವಾಯತು (ಗನ್‌ಫೈರ್‌ ಡ್ರಿಲ್‌) ನಡೆಸುತ್ತಿದೆ.

ರಕ್ಷಣಾ ವಿಶ್ಲೇಷಕರ ಪ್ರಕಾರ, ಈ ಸಮರಾಭ್ಯಾಸಗಳು ಶತ್ರು ವಿಮಾನಗಳನ್ನು ಹೊಡೆದುರುಳಿಸಲು ವಿನ್ಯಾಸಗೊಳಿಸಲಾದ ವಿಮಾನ ನಿಗ್ರಹ ಗನ್‌ಗಳನ್ನು ಒಳಗೊಂಡಿರುವ ಸಾಧ್ಯತೆಯಿದೆ.

3-4 ದಿನದಲ್ಲಿ ಕನಿಷ್ಠ 20 ಸೂಚನೆ

ಹೀಗಾಗಿಯೇ ಇರಾನಿ ವಾಯುಯಾನ ಅಧಿಕಾರಿಗಳು ವಾಯುಪಡೆಯವರಿಗೆ 3-4 ದಿನದಲ್ಲಿ ಕನಿಷ್ಠ 20 ಸೂಚನೆಗಳನ್ನು (NOTAMs) ನೀಡಿದ್ದು, ನಾಗರಿಕ ವಿಮಾನಗಳು ಸಾಗುವ ದಕ್ಷಿಣ ಮತ್ತು ವಾಯವ್ಯ ಇರಾನ್‌ನ ಅಪಾಯದ ವಲಯಗಳಲ್ಲಿ ಸಮರಾಭ್ಯಾಸ ನಡೆಸದಂತೆ ಎಚ್ಚರಿಕೆ ನೀಡಿದ್ದಾರೆ.