ಇಸ್ರೇಲ್‌ ಮೇಲೆ ಇರಾನ್‌ ಯುದ್ಧ 1 ದಿನಕ್ಕೇ ಅಂತ್ಯ?

| Published : Apr 15 2024, 01:20 AM IST / Updated: Apr 15 2024, 04:10 AM IST

ಸಾರಾಂಶ

300 ಕ್ಷಿಪಣಿ, ಡ್ರೋನ್‌ ದಾಳಿ ನಡೆಸಿದ ಇರಾನ್‌, ಎಲ್ಲವನ್ನೂ ಹೊಡೆದುರುಳಿಸಿದ ಇಸ್ರೇಲ್‌, ಬಳಿಕ ನಮ್ಮ ದಾಳಿ ಮುಗಿದಿದೆ ಎಂದು ಇರಾನ್‌ ಸ್ಪಷ್ಟನೆ ನೀಡಿದೆ. ಈ ಕೃತ್ಯಕ್ಕೆ ಅಮೆರಿಕ, ಭಾರತ ಸೇರಿ ಹಲವು ದೇಶಗಳ ಖಂಡನೆ ವ್ಯಕ್ತವಾಗಿದೆ.

ಟೆಹ್ರಾನ್‌/ಟೆಲ್‌ ಅವೀವ್‌: ಕಳೆದ ಎರಡು ವಾರಗಳಿಂದ ವಿಕೋಪಕ್ಕೆ ಹೋಗಿದ್ದ ಇರಾನ್‌- ಇಸ್ರೇಲ್‌  ದ್ವೇಷ ‘ಒಂದು ದಿನದ ಸಮರ’ದೊಂದಿಗೆ ಹೊಸ ಮಜಲು ತಲುಪಿದೆ. ‘ಆಪರೇಷನ್‌ ಹಾನೆಸ್ಟ್ ಪ್ರಾಮಿಸ್‌’ ಹೆಸರಲ್ಲಿ ಇಸ್ರೇಲ್‌ ಮೇಲೆ 300ಕ್ಕೂ ಅಧಿಕ ಡ್ರೋನ್‌ಗಳು ಹಾಗೂ ಕ್ಷಿಪಣಿಗಳನ್ನು ಬಳಸಿ ಇರಾನ್‌ ದಾಳಿ ನಡೆಸಿದೆ. ಇದಕ್ಕೆ ತಿರುಗೇಟು ಕೊಟ್ಟಿರುವ ಇಸ್ರೇಲ್‌, ತನ್ನ ದೇಶದತ್ತ ನುಗ್ಗಿಬಂದ ಕ್ಷಿಪಣಿ, ಡ್ರೋನ್‌ಗಳ ಪೈಕಿ ಶೇ.99ರಷ್ಟನ್ನು ಹೊಡೆದುರುಳಿಸಿದೆ. ಇದರಿಂದ ಹೆಚ್ಚಿನ ಅನಾಹುತವಾಗಿಲ್ಲ.

ಇರಾನ್‌ ಡ್ರೋನ್‌ಗಳನ್ನು ಇಸ್ರೇಲ್‌ ಹೊಡೆದುರುಳಿಸಿದ್ದರ ಹಿಂದೆ ತನ್ನ ಸಹಾಯವೂ ಇದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಘೋಷಿಸಿಕೊಂಡಿದ್ದಾರೆ. ಈ ನಡುವೆ, ಇರಾನ್‌ ವರ್ತನೆಗೆ ಐರೋಪ್ಯ ಒಕ್ಕೂಟ, ಬ್ರಿಟನ್‌, ಫ್ರಾನ್ಸ್‌, ಮೆಕ್ಸಿಕೋ, ಚೆಕ್‌, ಡೆನ್ಮಾರ್ಕ್‌, ನಾರ್ವೆ ಹಾಗೂ ನೆದರ್ಲೆಂಡ್‌ ದೇಶಗಳು ಖಂಡನೆ ವ್ಯಕ್ತಪಡಿಸಿವೆ. ಮಧ್ಯಪ್ರಾಚ್ಯದ ತ್ವೇಷಮಯ ಸ್ಥಿತಿಗೆ ಕಳವಳ ವ್ಯಕ್ತಪಡಿಸಿರುವ ಭಾರತ, ಶಾಂತಿ ಕಾಪಾಡಿಕೊಳ್ಳಬೇಕು ಎಂದು ಸಲಹೆ ಮಾಡಿದೆ.

ಇಸ್ರೇಲ್‌- ಪ್ಯಾಲೆಸ್ತೀನ್‌ ನಡುವೆ ಕಳೆದ 7 ತಿಂಗಳಿನಿಂದ ಸಮರ ನಡೆಯುತ್ತಿರುವಾಗಲೇ, ಬಲಾಢ್ಯ ಇರಾನ್‌ ಕೂಡ ಇಸ್ರೇಲ್‌ ಮೇಲೆ ಸಮರ ಸಾರಿದ್ದರಿಂದ ಮಧ್ಯಪ್ರಾಚ್ಯದಲ್ಲಿ ಅಲ್ಲೋಲ- ಕಲ್ಲೋಲವಾಗಬಹುದು ಎಂಬ ನಿರೀಕ್ಷೆ ಸದ್ಯಕ್ಕೆ ಸುಳ್ಳಾಗಿದೆ. ಏಕೆಂದರೆ, ‘ಇಸ್ರೇಲ್‌ ಮೇಲಿನ ದಾಳಿಯಿಂದ ತನ್ನ ಎಲ್ಲ ಉದ್ದೇಶಗಳೂ ಈಡೇರಿವೆ. ಆತ್ಮರಕ್ಷಣೆ ಉದ್ದೇಶದಿಂದ ಇಸ್ರೇಲ್‌ ಮೇಲೆ ಕಾರ್ಯಾಚರಣೆ ನಡೆಸಲಾಗಿತ್ತು. ಇದು ಈಗ ಮುಗಿದಿದೆ’ ಎಂದು ಇರಾನ್‌ ಸ್ಪಷ್ಟನೆ ನೀಡಿದೆ.

ಈಗ ಇಸ್ರೇಲ್‌ ಪ್ರತೀಕಾರಕ್ಕೆ ಇಳಿಯುತ್ತಾ ಎಂಬುದನ್ನು ಕಾದು ನೋಡಬೇಕಾಗಿದೆ. ಏಕೆಂದರೆ ದಾಳಿಗೆ, ‘ಇರಾನ್ ದಾಳಿ ಮಾಡಿದರೆ ದಿಟ್ಟ ಉತ್ತರ ನೀಡಬೇಕು ಎಂದು ವರ್ಷದಿಂದ ಕಾಯುತ್ತಿದ್ದೇವೆ. ನಮ್ಮ ಮೇಲೆ ಯಾರು ದಾಳಿ ಮಾಡುತ್ತಾರೋ ಅವರ ಮೇಲೆ ನಾವು ಪ್ರತಿದಾಳಿ ಮಾಡಿ ಪ್ರತೀಕಾರ ತೀರಿಸಿಕೊಳ್ಳುತ್ತೇವೆ. ಏಕೆಂದರೆ ನಮ್ಮ ಸೈನಿಕರು, ಜನತೆ ಬಲಶಾಲಿಗಳು’ ಎಂದು ಇಸ್ರೇಲ್‌ ಅಧ್ಯಕ್ಷ ಬೆಂಜಮಿನ್‌ ನೆತನ್ಯಾಹು ಗುಡುಗಿದ್ದಾರೆ.

ಆದರೆ ಇಸ್ರೇಲ್‌ ಮಿತ್ರದೇಶ ಅಮೆರಿಕ ತಣ್ಣಗಾಗಿದ್ದು, ‘ನಾವು ಯುದ್ಧದಲ್ಲಿ ಭಾಗಿ ಆಗಲ್ಲ. ಏನಿದ್ದರೂ ರಾಜತಾಂತ್ರಿಕ ಮಾರ್ಗದ ಮೂಲಕ ನಮ್ಮ ಪ್ರತೀಕಾರ ಇರಲಿದೆ’ ಎಂದು ಅಮೆರಿಕ ರಕ್ಷಣಾ ವಕ್ತಾರ ಜಾನ್‌ ಕಿರ್ಬಿ ಹೇಳಿದ್ದಾರೆ.

ಸಂಘರ್ಷ ಏಕೆ?:

1979ರಿಂದಲೂ ಇಸ್ರೇಲ್‌ ಹಾಗೂ ಇರಾನ್‌ ನಡುವೆ ಹಾವು-ಮುಂಗುಸಿ ರೀತಿಯ ಸಂಬಂಧವಿದೆ. ಆದರೆ ಎಂದೂ ಪರಸ್ಪರ ನೇರವಾಗಿ ದಾಳಿಗೆ ಇಳಿದಿರಲಿಲ್ಲ. ಏ.1ರಂದು ಸಿರಿಯಾದ ಡಮಾಸ್ಕಸ್‌ನ ಇರಾನ್‌ ದೂತಾವಾಸದ ಮೇಲೆ ಮೇಲೆ ಇಸ್ರೇಲ್‌ ನಡೆಸಿದ ದಾಳಿಯಲ್ಲಿ ಇಬ್ಬರು ಇರಾನ್‌ನ ಜನರಲ್‌ಗಳು ಹತರಾಗಿದ್ದರು. ಅದಾದ ಬಳಿಕ ಇಸ್ರೇಲ್‌ ಮೇಲಿನ ಇರಾನ್‌ ಆಕ್ರೋಶ ವಿಕೋಪಕ್ಕೆ ಹೋಗಿತ್ತು. ಇಸ್ರೇಲ್‌ ಮೇಲೆ ಇರಾನ್‌ ದಾಳಿ ನಡೆಸಬಹುದು ಎಂದು ಅಮೆರಿಕ ಹೇಳುತ್ತಲೇ ಬಂದಿತ್ತು.

ಅದರಂತೆ 170 ಡ್ರೋನ್‌, 30 ಕ್ರೂಸ್‌ ಕ್ಷಿಪಣಿ ಹಾಗೂ 120 ಬ್ಯಾಲಿಸ್ಟಿಕ್‌ ಕ್ಷಿಪಣಿಗಳನ್ನು ಬಳಸಿ ಇರಾನ್‌ ದಾಳಿ ಮಾಡಿದೆ. ಇಸ್ರೇಲ್‌ ರಕ್ಷಣಾ ಪಡೆಗಳ ವಕ್ತಾರ ಡೇನಿಯಲ್‌ ಹಗರಿ ಶೇ.99ರಷ್ಟನ್ನು ಹೊಡೆದುರುಳಿಸಿರುವುದಾಗಿ ಹೇಳಿಕೊಂಡಿದ್ದಾರೆ. ಹೀಗಾಗಿ ಅನಾಹುತವಾಗಿಲ್ಲ.‘ನಿನ್ನೆ ರಾತ್ರಿಯಿಂದ ಇಂದು ಬೆಳಗಿನವರೆಗೆ ನಡೆದ ‘ಆಪರೇಷನ್‌ ಹಾನೆಸ್ಟ್ ಪ್ರಾಮಿಸ್‌’ ಯಶಸ್ವಿಯಾಗಿ ಪೂರ್ಣಗೊಂಡಿದೆ ಮತ್ತು ಕಾರ್ಯಾಚರಣೆಯ ಎಲ್ಲಾ ಉದ್ದೇಶಗಳನ್ನು ಸಾಧಿಸಿದ್ದೇವೆ. ನಮ್ಮ ಸೇನಾ ಅಧಿಕಾರಿಗಳ ಮೇಲೆ ಏ.1ರಂದು ಸಿರಿಯಾದಲ್ಲಿ ಇಸ್ರೇಲ್‌ ದಾಳಿ ಮಾಡಿತ್ತು. ಹೀಗಾಗಿ ಆತ್ಮರಕ್ಷಣೆ ಉದ್ದೇಶದಿಂದ ಇಸ್ರೇಲ್‌ ಮೇಲೆ ಕಾರ್ಯಾಚರಣೆ ನಡೆಸಲಾಗಿತ್ತು. ಇದು ಈಗ ಮುಗಿದಿದೆ.- ಮೊಹಮ್ಮದ್‌ ಬಘೇರಿ, ಇರಾನ್‌ ಸೇನಾಪಡೆ ಮುಖ್ಯಸ್ಥ--‘ಇರಾನ್ ದಾಳಿ ಮಾಡಿದರೆ ದಿಟ್ಟ ಉತ್ತರ ನೀಡಬೇಕು ಎಂದು ವರ್ಷದಿಂದ ಕಾಯುತ್ತಿದ್ದೇವೆ. ನಮ್ಮ ಮೇಲೆ ಯಾರು ದಾಳಿ ಮಾಡುತ್ತಾರೋ ಅವರ ಮೇಲೆ ನಾವು ಪ್ರತಿದಾಳಿ ಮಾಡಿ ಪ್ರತೀಕಾರ ತೀರಿಸಿಕೊಳ್ಳುತ್ತೇವೆ. ಏಕೆಂದರೆ ನಮ್ಮ ದೇಶ ಬಲಶಾಲಿ. ನಮ್ಮ ಸೈನಿಕರು, ಜನತೆ ಬಲಶಾಲಿಗಳು.- ಬೆಂಜಮಿನ್‌ ನೆತನ್ಯಾಹು, ಇಸ್ರೇಲ್‌ ಅಧ್ಯಕ್ಷ

‘ನಿನ್ನೆ ರಾತ್ರಿಯಿಂದ ಇಂದು ಬೆಳಗಿನವರೆಗೆ ನಡೆದ ‘ಆಪರೇಷನ್‌ ಹಾನೆಸ್ಟ್ ಪ್ರಾಮಿಸ್‌’ ಯಶಸ್ವಿಯಾಗಿ ಪೂರ್ಣಗೊಂಡಿದೆ ಮತ್ತು ಕಾರ್ಯಾಚರಣೆಯ ಎಲ್ಲಾ ಉದ್ದೇಶಗಳನ್ನು ಸಾಧಿಸಿದ್ದೇವೆ. ನಮ್ಮ ಸೇನಾ ಅಧಿಕಾರಿಗಳ ಮೇಲೆ ಏ.1ರಂದು ಸಿರಿಯಾದಲ್ಲಿ ಇಸ್ರೇಲ್‌ ದಾಳಿ ಮಾಡಿತ್ತು. ಹೀಗಾಗಿ ಆತ್ಮರಕ್ಷಣೆ ಉದ್ದೇಶದಿಂದ ಇಸ್ರೇಲ್‌ ಮೇಲೆ ಕಾರ್ಯಾಚರಣೆ ನಡೆಸಲಾಗಿತ್ತು. ಇದು ಈಗ ಮುಗಿದಿದೆ.- ಮೊಹಮ್ಮದ್‌ ಬಘೇರಿ, ಇರಾನ್‌ ಸೇನಾಪಡೆ ಮುಖ್ಯಸ್ಥ--‘ಇರಾನ್ ದಾಳಿ ಮಾಡಿದರೆ ದಿಟ್ಟ ಉತ್ತರ ನೀಡಬೇಕು ಎಂದು ವರ್ಷದಿಂದ ಕಾಯುತ್ತಿದ್ದೇವೆ. ನಮ್ಮ ಮೇಲೆ ಯಾರು ದಾಳಿ ಮಾಡುತ್ತಾರೋ ಅವರ ಮೇಲೆ ನಾವು ಪ್ರತಿದಾಳಿ ಮಾಡಿ ಪ್ರತೀಕಾರ ತೀರಿಸಿಕೊಳ್ಳುತ್ತೇವೆ. ಏಕೆಂದರೆ ನಮ್ಮ ದೇಶ ಬಲಶಾಲಿ. ನಮ್ಮ ಸೈನಿಕರು, ಜನತೆ ಬಲಶಾಲಿಗಳು.- ಬೆಂಜಮಿನ್‌ ನೆತನ್ಯಾಹು, ಇಸ್ರೇಲ್‌ ಅಧ್ಯಕ್ಷ