ಕಾಪ್ಟರ್‌ ಪತನ: ಇರಾನ್‌ ಅಧ್ಯಕ್ಷ ದುರ್ಮರಣ

| Published : May 21 2024, 12:39 AM IST / Updated: May 21 2024, 04:19 AM IST

ಸಾರಾಂಶ

ಕಾಪ್ಟರ್‌ನಲ್ಲಿದ್ದ ವಿದೇಶಾಂಗ ಸಚಿವ ಕೂಡ ಬಲಿಯಾಗಿದ್ದು, ಭಾನುವಾರ ಸಂಜೆ ಸಂಭವಿಸಿದ್ದ ಹೆಲಿಕಾಪ್ಟರ್‌ ಅಪಘಾತದಲ್ಲಿ ದುರ್ಘಟನೆ ಸಂಭವಿಸಿರುವುದಾಗಿ ಕೊನೆಗೂ ಇರಾನ್‌ ಪ್ರಕಟಿಸಿದೆ. ಇಸ್ರೇಲ್‌ ಮೇಲೆ ದಾಳಿ ಮಾಡಿದ ಬೆನ್ನಲ್ಲೇ ನಡೆದ ಘಟನೆಯಾದ ಕಾರಣ ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

ದುಬೈ: ಭಾನುವಾರ ಸಂಜೆ ದಿಢೀರನೆ ನಾಪತ್ತೆಯಾಗಿ ಪತನಗೊಂಡಿದೆ ಎಂದು ಶಂಕಿಸಲಾಗಿದ್ದ ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ (63) ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ನ ಅವಶೇಷ ಸೋಮವಾರ ಪತ್ತೆಯಾಗಿದೆ. ದುರದೃಷ್ಟವಶಾತ್‌, ಕಾಪ್ಟರ್‌ನಲ್ಲಿದ್ದ ಅಧ್ಯಕ್ಷ ರೈಸಿ, ವಿದೇಶಾಂಗ ಸಚಿವ ಹೊಸ್ಸೇನ್‌ ಅಮೀರಬ್ದದೊಲ್ಲಾಹಿಯಾನ್‌, ಕೆಲ ಅಧಿಕಾರಗಳು ಮತ್ತು ಅಂಗರಕ್ಷಕರು  8 ಮಂದಿ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

ಇದರೊಂದಿಗೆ ಇಬ್ರಾಹಿಂ ಸೇರಿದಂತೆ ಕಾಪ್ಟರ್‌ನಲ್ಲಿದ್ದವರೆಲ್ಲಾ ಜೀವಂತವಾಗಿ ಮರಳಿಬರಲಿ ಎಂಬ ಕೋಟ್ಯಂತರ ಇರಾನಿಗಳ ಹಾರೈಕೆ ಈಡೇರದೇ ಹೋಗಿದೆ. ಅದರ ಬೆನ್ನಲ್ಲೇ ಕಾನೂನಿನ ಅನ್ವಯ, ಹಾಲಿ ಇರಾನ್‌ ಉಪಾಧ್ಯಕ್ಷ ಮೊಹಮ್ಮದ್‌ ಮೊಖಾಬೇರ್‌ ಅವರಿಗೆ ಹಂಗಾಮಿ ಅಧ್ಯಕ್ಷ ಪಟ್ಟಕಟ್ಟಲು ವೇದಿಕೆ ಸಿದ್ದವಾಗಿದ್ದು, ಮುಂದಿನ 50 ದಿನದಲ್ಲಿ ಹೊಸ ಅಧ್ಯಕ್ಷರ ಆಯ್ಕೆ ನಡೆಸಲಾಗುವುದು.

ಕಾಪ್ಟರ್‌ ಪತನಕ್ಕೆ ಕಾರಣ ಏನು ಎಂಬುದು ತಿಳಿದುಬಂದಿಲ್ಲ. ಪ್ರತಿಕೂಲ ಹವಾಮಾನ ಎಂದಷ್ಟೇ ಪ್ರಾಥಮಿಕವಾಗಿ ಹೇಳಲಾಗುತ್ತಿದೆ. ಆದರೆ ಇಸ್ರೇಲ್‌- ಹಮಾಸ್‌ ನಡುವಿನ ಯುದ್ಧದಲ್ಲಿ ಹಮಾಸ್ ಪರವಾಗಿದ್ದ ಇರಾನ್‌ ಇತ್ತೀಚೆಗಷ್ಟೇ ಇಸ್ರೇಲ್‌ ಮೇಲೆ ಸರಣಿ ಡ್ರೋನ್‌ ದಾಳಿ ನಡೆಸಿತ್ತು. ಜೊತೆಗೆ ಉಕ್ರೇನ್‌ ವಿರುದ್ಧದ ಯುದ್ಧದಲ್ಲಿ ರಷ್ಯಾಕ್ಕೆ ಸಾಕಷ್ಟು ಶಸ್ತ್ರಾಸ್ತ್ರ ಪೂರೈಸಿತ್ತು. ಜೊತೆಗೆ ಹಾಲಿ ಅಧ್ಯಕ್ಷ ರೈಸಿ ಅವಧಿಯಲ್ಲೇ ಇರಾನ್‌ ಪರಮಾಣು ಅಸ್ತ್ರಗಳಿಗೆ ಬೇಕಾದ ಗುಣಮಟ್ಟದ ಯುರೇನಿಯಂ ಸಂಸ್ಕರಣೆ ಮಾಡುವಲ್ಲಿ ಯಶಸ್ವಿಯಾಗಿತ್ತು. ಅದರ ಬೆನ್ನಲ್ಲೇ ಈ ಬೆಳವಣಿಗೆ ನಡೆದಿರುವುದು ಸಾಕಷ್ಟು ಚರ್ಚೆಯ ವಿಷಯವಾಗಿ ಹೊರಹೊಮ್ಮಿದೆ.

ಕಾಪ್ಟರ್‌ ಪತನ:

ಭಾನುವಾರ ಅಜರ್‌ಬೈಜಾನ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಅಧ್ಯಕ್ಷ ರೈಸಿ, ವಿದೇಶಾಂಗ ಸಚಿವರು ಸೇರಿದಂತೆ ಹಲವು ಅಧಿಕಾರಿಗಳು 3 ಹೆಲಿಕಾಪ್ಟರ್‌ನಲ್ಲಿ ರಾಜಧಾನಿಯತ್ತ ಪ್ರಯಾಣ ಬೆಳೆಸಿದ್ದರು. ಆದರೆ ಹಾರಾಟ ಆರಂಭಿಸಿದ ಕೆಲ ಹೊತ್ತಿನಲ್ಲೇ ರೈಸಿ ಇದ್ದ ವಿಮಾನ ಕ್ರಾ಼ಷ್‌ಲ್ಯಾಂಡಿಂಗ್‌ ಆಗಿತ್ತು. ಇದನ್ನು ಉಳಿದ ಎರಡು ಕಾಪ್ಟರ್‌ನಲ್ಲಿದ್ದವರು ನೋಡಿ ರಾಜಧಾನಿಗೆ ಮಾಹಿತಿ ರವಾನಿಸಿದ್ದರು.

ಈ ಹಿನ್ನೆಲೆಯಲ್ಲಿ ದೊಡ್ಡ ಸಂಖ್ಯೆಯ ರಕ್ಷಣಾ ಸಿಬ್ಬಂದಿಯನ್ನು ಸ್ಥಳಕ್ಕೆ ರವಾನಿಸಲಾಗಿತ್ತು. ಆದರೆ ಘಟನೆ ನಡೆದ ಇರಾನ್‌ನ ಪೂರ್ವ ಅಜರ್‌ಬೈಜಾನ್ ಪ್ರಾಂತ್ಯ ಅತ್ಯಂತ ಗುಡ್ಡಗಾಡು ಪ್ರದೇಶವಾಗಿದ್ದು, ಭಾನುವಾರ ಮಂಜುಕವಿದ ವಾತಾವರಣ ಇದ್ದ ಕಾರಣ ಹುಡುಕಾಟಕ್ಕೆ ಅಡ್ಡಿಯಾಗಿತ್ತು.

ಈ ನಡುವೆ ಸೋಮವಾರ ಬೆಳಗ್ಗೆ ನೆರೆಯ ಟರ್ಕಿ ದೇಶದ ಅಧಿಕಾರಿಗಳು ಡ್ರೋನ್‌ ಮೂಲಕ ಪತನಗೊಂಡ ಕಾಪ್ಟರ್‌ನ ಅವಶೇಷ ಪತ್ತೆ ಮಾಡಿದ ಬಳಿಕ ಸ್ಥಳಕ್ಕೆ ರಕ್ಷಣಾ ಸಿಬ್ಬಂದಿ ಧಾವಿಸಿದ್ದರು. ಆದರೆ ಈ ವೇಳೆಗಾಗಲೇ ರೈಸಿ ಸೇರಿದಂತೆ ಕಾಪ್ಟರ್‌ನಲ್ಲಿದ್ದ ಎಲ್ಲ ಪ್ರಯಾಣಿಕರು ಸಾವನ್ನಪ್ಪಿದ್ದು ಕಂಡುಬಂತು.

ಸರ್ವೋನ್ನತ ನಾಯಕ ಆಗಲಿದ್ದ ರೈಸಿ:

ಇರಾನ್‌ನಲ್ಲಿ ಚುನಾಯಿತ ಅಧ್ಯಕ್ಷರಿದ್ದರೂ, ಸಂಪೂರ್ಣ ಅಧಿಕಾರ ಇರುವುದು ಧಾರ್ಮಿಕ ನಾಯಕರಾದ ಆಯತೊಲ್ಲಾ ಖೊಮೇನಿ ಅವರಿಗೆ. ರೈಸಿ, ಖೊಮೇನಿಗೆ ಅತ್ಯಂತ ಆಪ್ತರಾಗಿದ್ದರು. ಖೊಮೇನಿ ಸಾವಿನ ಬಳಿಕ ಇಲ್ಲವೇ ಅವರ ರಾಜೀನಾಮೆ ಬಳಿಕ ಸ್ವತಃ ರೈಸಿ ಅವರೇ ಈ ಹುದ್ದೆ ಏರಲಿದ್ದಾರೆ ಎಂದು ಹೇಳಲಾಗಿತ್ತು.

2021ರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ರೈಸಿ, 1988 ಇರಾನ್‌- ಇರಾಕ್‌ ಯುದ್ಧ ಮುಗಿದ ಬಳಿಕ ಸಾವಿರಾರು ಯುದ್ಧ ಕೈದಿಗಳನ್ನು ಸಾಮೂಹಿಕವಾಗಿ ಹತ್ಯೆ ಮಾಡಿದ ಪ್ರಕರಣದಲ್ಲಿ ಅಮೆರಿಕದಿಂದ ನಿರ್ಬಂಧಕ್ಕೆ ಒಳಗಾಗಿದ್ದರು.