ವಾಷಿಂಗ್ಟನ್‌: ಮೂರೂವರೆ ತಿಂಗಳು ಪೂರೈಸಿರುವ, ಜಾಗತಿಕ ಆರ್ಥಿಕತೆಗೆ ಭಾರೀ ಪೆಟ್ಟು ನೀಡಿರುವ ಅಮೆರಿಕ- ಇರಾನ್‌ ನಡುವಿನ ಯುದ್ಧ ಕೊನೆಗೂ ಸ್ಥಗಿತಗೊಳ್ಳುವ ಕುರಿತು ಅಮೆರಿಕ ಸುಳಿವು ನೀಡಿದೆ. ಯುದ್ಧ ಸ್ಥಗಿತ ಸಂಬಂಧ ಉಭಯ ದೇಶಗಳ ನಡುವೆ ಮಹತ್ವದ ಬೆಳವಣಿಗೆ ಸಂಭವಿಸಿದ್ದು, ವಾರಾಂತ್ಯದಲ್ಲಿ ಈ ಕುರಿತು ಒಪ್ಪಂದ ಏರ್ಪಡಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಘೋಷಿಸಿದ್ದಾರೆ.

ಜೂ.15ರಿಂದ 17ರ ವರೆಗೆ ಫ್ರಾನ್ಸ್‌ನಲ್ಲಿ ನಡೆಯಲಿರುವ ಜಿ7 ಶೃಂಗಸಭೆಯ ವೇಳೆ ಅಥವಾ ಭಾನುವಾರವೇ ಜಿನೆವಾದಲ್ಲಿ ಉಭಯ ದೇಶಗಳ ಸಹಿ ಬೀಳುವ ಸಂಭವವಿದೆ ಎಂದು ವರದಿಗಳು ತಿಳಿಸಿವೆ. ಟ್ರಂಪ್‌ ಘೋಷಣೆ ಬೆನ್ನಲ್ಲೇ ಕಚ್ಚಾತೈಲ ಬೆಲೆ ಭಾರೀ ಕುಸಿತ ಕಂಡಿದೆ. ಜೊತೆಗೆ ಜಾಗತಿಕ ಷೇರುಪೇಟೆ ಕೂಡಾ ಚೇತರಿಕೆ ಕಂಡಿದೆ.

ಆದರೆ ಒಪ್ಪಂದ ಅಂತಿಮ ಅಂತಿಮ ಹಂತಕ್ಕೆ ತಲುಪಲು ಇನ್ನೂ ಸಾಕಷ್ಟು ದೂರಸಾಗಬೇಕಿದೆ ಎಂದು ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್‌ ಅರಾಗ್ಚಿ ಹೇಳಿಕೆ ನೀಡಿದ್ದು, ಶೀಘ್ರವೇ ಒಪ್ಪಂದ ಆಗುವ ಬಗ್ಗೆ ಅನುಮಾನಗಳನ್ನೂ ಮೂಡಿಸಿದೆ. ಈ ನಡುವೆ ಒಪ್ಪಂದದ ಅಂಶಗಳ ಕುರಿತು ಇರಾನ್‌ನ ಮಾಧ್ಯಮವೊಂದು ಪ್ರಕಟಿಸಿರುವ ವರದಿ ಸತ್ಯಕ್ಕೆ ದೂರವಾಗಿದೆ ಎಂದು ಟ್ರಂಪ್‌ ಕಿಡಿಕಾರಿದ್ದಾರೆ.


ಶುಭ ಸುದ್ದಿ:

ಶುಕ್ರವಾರ ಓವಲ್‌ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಟ್ರಂಪ್‌, ‘ನಿಮಗೆ ವಿಷಯ ತಿಳಿಯಿತೋ ಇಲ್ಲವೋ ಗೊತ್ತಿಲ್ಲ, ನಾವು ಇರಾನ್‌ ಮೇಲಿನ ದಾಳಿ ನಿಲ್ಲಿಸಿದ್ದೇವೆ. ನಮ್ಮ ಆಗ್ರಹದಂತೆ ಅಣ್ವಸ್ತ್ರ ಹೊಂದುವ ಯತ್ನವನ್ನು ಶಾಶ್ವತವಾಗಿ ಕೈಬಿಡಲು ಇರಾನ್‌ ಒಪ್ಪಿದೆ. ಜತೆಗೆ ಅದನ್ನು ಯಾವುದೇ ರೂಪದಲ್ಲಿ ಅದನ್ನು ಖರೀದಿಸುವುದಿಲ್ಲ ಎಂದು ಭರವಸೆ ನೀಡಿದೆ. ನಮ್ಮ ಉದ್ದೇಶವೇ ಅದಾಗಿತ್ತು. ಈಗಾಗಲೇ ಭಾರೀ ಪೆಟ್ಟು ತಿಂದಿರುವ ಅವರು, ನಾನಗಿಂತ ಹೆಚ್ಚಾಗಿ ಅವರಿಗೆ ಒಪ್ಪಂದದ ಅಗತ್ಯವಿದೆ’ ಎಂದರು.

ಜೊತೆಗೆ, ‘ಒಪ್ಪಂದದ ಬಗ್ಗೆ ಕತಾರ್‌, ಯುಎಇ, ಸೌದಿ, ಬಹ್ರೇನ್‌, ಕುವೈತ್‌ ಮತ್ತು ಪಾಕಿಸ್ತಾನದ ನಾಯಕರ ಜತೆ ಮಾತುಕತೆ ನಡೆಸಿದ್ದೇನೆ. ವಾರಾಂತ್ಯದಲ್ಲಿ ಯುರೋಪ್‌ನಲ್ಲಿ ಒಪ್ಪಂದಕ್ಕೆ ಸಹಿ ಬೀಳಲಿದ್ದು, ಈ ಕೆಲಸವನ್ನು ಉಪಾಧ್ಯಕ್ಷ ಜೆಡಿ ವ್ಯಾನ್ಸ್‌ ಮಾಡುತ್ತಾರೆ’ ಎಂದರು. ಜತೆಗೆ, ಒಪ್ಪಂದವಾಗುತ್ತಿದ್ದಂತೆ ಹೋರ್ಮುಜ್‌ ಜಲಸಂಧಿ ಸಂಚಾರಕ್ಕೆ ಮುಕ್ತವಾಗುತ್ತದೆ ಎಂದೂ ಹೇಳಿದರು.

ಇರಾನ್‌ ಮೇಲೆ ಭೀಕರ ದಾಳಿ ಮಾಡಿ, ಅವರ ಅತಿದೊಡ್ಡ ತೈಲ ನಿಕ್ಷೇಪವಾಗಿರುವ ಖಾರ್ಗ್‌ ದ್ವೀಪವನ್ನು ವಶಕ್ಕೆ ಪಡೆಯುವುದಾಗಿ ಗುರುವಾರ ಬೆಳಗ್ಗೆ ಘೋಷಿಸಿದ್ದ ಟ್ರಂಪ್‌, ಆ ಕಾಲ ಸನ್ನಿಹಿತವಾಗುತ್ತಿದ್ದಂತೆ ದಾಳಿಯನ್ನೇ ನಿಲ್ಲಿಸುವ ನಿರ್ಧಾರ ಕೈಗೊಂಡಿದ್ದರು. ಇದೀಗ ಒಪ್ಪಂದದ ಬಗ್ಗೆ ಸಕಾರಾತ್ಮಕ ಮಾತುಗಳನ್ನಾಡಿದ್ದಾರೆ.

ಒಪ್ಪಂದದಲ್ಲಿ ಏನಿದೆ?:

ಇರಾನ್‌ ಮೇಲಿನ ನಿರ್ಬಂಧ ಪೂರ್ಣ ತೆರವು, ವಿದೇಶಿ ಬ್ಯಾಂಕ್‌ಗಳಿಂದ ಜಪ್ತಿ ಮಾಡಲಾದ ಇರಾನ್‌ನ ಹಣ ಬಿಡುಗಡೆ, ಹೋರ್ಮಜ್‌ನಲ್ಲಿ ಇರಾನ್‌ ಹಡಗುಗಳ ಸಂಚಾರಕ್ಕೆ ಹೇರಿದ್ದ ತಡೆ ತೆರವು ಮತ್ತು ಇರಾನ್‌ ಸುತ್ತಮುತ್ತಲೇ ಇರುವ ಅಮೆರಿಕದ ಸೇನಾ ಪಡೆ ತೆರವಿಗೆ ಅಮೆರಿಕ ಒಪ್ಪಿಕೊಂಡಿದೆ. ಮತ್ತೊಂದೆಡೆ ಹೋರ್ಮಜ್‌ ಜಲಸಂಧಿಯನ್ನು ಎಲ್ಲರಿಗೂ ಮುಕ್ತ ಮಾಡಲು, ಪರಮಾಣು ಸಂಸ್ಕರಣೆ ಕೈಬಿಡಲು, ಈಗಾಗಲೇ ಸಂಸ್ಕರಣೆ ಮಾಡಿರುವ ಯುರೇನಿಯಂ ಅನ್ನು ಮೂರನೇ ದೇಶವೊಂದಕ್ಕೆ ಹಸ್ತಾಂತರ ಮಾಡಲು, ಇತರೆ ದೇಶಗಳಲ್ಲಿನ ಹೆಜ್ಬುಲ್ಲಾ ರೀತಿಯ ಬಂಡುಕೋರ ಸಂಘಟನೆಗೆ ನೆರವು ಸ್ಥಗಿತಕ್ಕೆ ಇರಾನ್‌ ಒಪ್ಪಿದೆ ಎನ್ನಲಾಗಿದೆ.

ಭಾರತ ಹಡಗಿನ ಮೇಲೆ ದಾಳಿ ಮಾಡಿದ್ದು ನಾವಲ್ಲ, ಇರಾನ್‌: ಟ್ರಂಪ್‌ ವರಸೆ

ವಾಷಿಂಗ್ಟನ್‌: ಇತ್ತೀಚೆಗೆ ಹೋರ್ಮುಜ್‌ ಹಾಗೂ ಒಮಾನ್‌ ಕರಾವಳಿಗಳಲ್ಲಿ ಭಾರತದ ಹಡಗುಗಳ ಮೇಲೆ ದಾಳಿ ಮಾಡಿದ್ದು ಅಮೆರಿಕ ಎಂಬ ಭಾರತ ಮತ್ತು ಇರಾನ್‌ ಹೇಳಿಕೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಿರಸ್ಕರಿಸಿದ್ದು, ದಾಳಿ ಮಾಡಿದ್ದು ಇರಾನ್‌ ಎಂದಿದ್ದಾರೆ.