ದುಬೈ: ತನ್ನ ಷರತ್ತುಗಳ ಅನ್ವಯ ಸಂಧಾನಕ್ಕೆ ಮುಂದೆ ಬರದ ಇರಾನ್‌ ವಿರುದ್ಧ ಮತ್ತೆ ಗುಡುಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಇರಾನ್‌ ಮೇಲೆ ಮತ್ತಷ್ಟು ಕಠೋರ ದಾಳಿ ನಡೆಸುವುದಾಗಿ ಹೇಳಿದ್ದಾರೆ. ಅಲ್ಲದೆ ಕೆಲ ತಿಂಗಳ ಹಿಂದೆ ವೆನಿಜುವೆಲಾದ ಮೇಲೆ ದಾಳಿ ಮಾಡಿ ಅಲ್ಲಿನ ತೈಲ ವಲಯವನ್ನು ಹಿಡಿತಕ್ಕೆ ಪಡೆದಂತೆ ಇರಾನ್‌ನ ಖಾರ್ಗ್‌ ದ್ವೀಪ ಸೇರಿದಂತೆ ಆಯಕಟ್ಟಿನ ತೈಲ ಮತ್ತು ಅನಿಲ ನಿಕ್ಷೇಪಗಳನ್ನು ವಶಕ್ಕೆ ಪಡೆಯುವ ಎಚ್ಚರಿಕೆ ನೀಡಿದ್ದಾರೆ.

ಟ್ರಂಪ್‌ ಎಚ್ಚರಿಕೆಗೆ ಇರಾನ್‌ ಕೂಡ ತಿರುಗೇಟು

ಈ ನಡುವೆ ಟ್ರಂಪ್‌ ಎಚ್ಚರಿಕೆಗೆ ಇರಾನ್‌ ಕೂಡ ತಿರುಗೇಟು ನೀಡುತ್ತಲೇ ತಮ್ಮ ಹೇಳಿಕೆಯಿಂದ ಉಲ್ಟಾ ಹೊಡೆದಿರುವ ಟ್ರಂಪ್‌, ‘ಇರಾನ್‌ ಉನ್ನತ ನಾಯಕತ್ವದ ಜೊತೆಗಿನ ಮಾತುಕತೆಯನ್ನು ಪರಿಗಣಿಸಿ ಇರಾನ್‌ ಮೇಲಿನ ದಾಳಿಯಿಂದ ಹಿಂದೆ ಸರಿದಿದ್ದಾಗಿ ಘೋಷಿಸಿದ್ದಾರೆ. ಈ ಮೂಲಕ ಉಭಯ ದೇಶಗಳ ಮಾತುಕತೆ ಅಂತಿಮ ಹಂತಕ್ಕೆ ತಲುಪಿರಬಹುದು ಎಂಬ ಸುಳಿವು ನೀಡಿದ್ದಾರೆ.

ಇದಕ್ಕೂ ಮುನ್ನ ಟ್ರುತ್‌ ಸೋಶಿಯಲ್‌ನಲ್ಲಿ ಈ ಕುರಿತು ಪೋಸ್ಟ್‌ ಮಾಡಿದ್ದ ಟ್ರಂಪ್‌, ‘ಗುರುವಾರ ರಾತ್ರಿ ಅಮೆರಿಕ ಇರಾನ್‌ ಮೇಲೆ ಕಠಿಣ ದಾಳಿ ಮಾಡಲಿದೆ. ಅದು ನೌಕಾಪಡೆ, ವಾಯುಪಡೆ, ರಾಡಾರ್ ಮತ್ತು ಇತರ ಎಲ್ಲಾ ರೀತಿಯ ರಕ್ಷಣಾ ವ್ಯವಸ್ಥೆಗಳ ಮೇಲೆ ನಡೆಯಲಿದೆ. ಅವೆಲ್ಲ ಕಣ್ಮರೆಯಾಗಲಿವೆ. ಇದು ಸದ್ಯದ ಭವಿಷ್ಯದಲ್ಲೇ ನಡೆಯಲಿದೆ. ನಾವು ಖಾರ್ಗ್‌ ದ್ವೀಪ ಮತ್ತು ಇತರ ತೈಲ ಮೂಲಸೌಕರ್ಯಗಳನ್ನು ವಶಪಡಿಸಿಕೊಳ್ಳುತ್ತೇವೆ. ವೆನಿಜುವೆಲಾ ಮತ್ತು ಅಮೆರಿಕ ಎರಡಕ್ಕೂ ಉಪಯುಕ್ತವಾಗುವ ರೀತಿಯಲ್ಲಿ ವೆನಿಜುವೆಲಾಕ್ಕೆ ಮಾಡಿದಂತೆಯೇ, ಇರಾನ್‌ನ ಎಲ್ಲ ತೈಲ ಮತ್ತು ಅನಿಲ ಮಾರುಕಟ್ಟೆಗಳ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸುತ್ತೇವೆ’ ಎಂದು ಬರೆದುಕೊಂಡಿದ್ದರು.


ವೆನಿಜುವೆಲಾ ಮೇಲೆ ದಾಳಿ ಹೇಗಿತ್ತು?:

2026ರ ಜ.3ರಂದು ರಾತ್ರಿ ವೆನಿಜುವೆಲಾದ ಮೇಲೆ ರಹಸ್ಯ ದಾಳಿ ನಡೆಸಿದ್ದ ಅಮೆರಿಕದ ಯೋಧರು, ವೆನಿಜುವೆಲಾದ ಅಧ್ಯಕ್ಷ ಮಡುರೋ, ಅವರ ಪತ್ನಿಯನ್ನು ಬಂಧಿಸಿ ಅಮೆರಿಕಕ್ಕೆ ಕರೆದೊಯ್ದಿದ್ದರು. ಜೊತೆಗೆ ಅಲ್ಲಿನ ತೈಲ ಸಂಪನ್ಮೂಲಗಳನ್ನು ಅಮೆರಿಕ ಪರೋಕ್ಷವಾಗಿ ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು.