ಸಾರಾಂಶ
ಮಾನವ ಹಕ್ಕುಗಳ ರಕ್ಷಕಿಗೆ ಒಲಿದ ಅತ್ಯುಚ್ಚ ಗೌರವ ಜೈಲಲ್ಲಿರುವ ವ್ಯಕ್ತಿಗೆ ನೀಡಿದ 5ನೇ ಶಾಂತಿ ನೊಬೆಲ್ .
ಯಾರು ಈ ನರ್ಗೆಸ್? ಪ್ರಜಾಪ್ರಭುತ್ವ, ಮಹಿಳೆಯರ ಹಕ್ಕುಗಳಿಗಾಗಿ ಹಾಗೂ ಮರಣದಂಡನೆ ವಿರುದ್ಧ 3 ದಶಕಗಳಿಂದ ಹೋರಾಡುತ್ತಿರುವ ಇರಾನ್‌ನ ಮಾನವ ಹಕ್ಕುಗಳ ಹೋರಾಟಗಾರ್ತಿ.
ಎಂಜಿನಿಯರ್ ಹಾಗೂ ಪತ್ರಕರ್ತೆಯೂ ಹೌದು. ಯಾರೂ ಗುಲಾಮರಂತೆ ಬದುಕಬಾರದು ಎಂದು ಶ್ರಮಿಸುತ್ತಿದ್ದಾರೆ. ಇರಾನ್ ಸರ್ಕಾರ ಇವರನ್ನು ಜೈಲಿನಲ್ಲಿರಿಸಿದೆ
ಓಸ್ಲೋ: ಪ್ರಜಾಪ್ರಭುತ್ವ, ಮಹಿಳೆಯರ ಹಕ್ಕುಗಳು ಮತ್ತು ಮರಣದಂಡನೆ ವಿರುದ್ಧ 3 ದಶಕಗಳಿಂದ ಹೋರಾಡುತ್ತಿರುವ ಇರಾನ್‌ನ ಮಾನವ ಹಕ್ಕು ಹೋರಾಟಗಾರ್ತಿ ನರ್ಗೆಸ್ ಮೊಹಮ್ಮದಿ (51) ಗೆ ಪ್ರಸಕ್ತ ಸಾಲಿನ ಪ್ರತಿಷ್ಠಿತ ನೊಬೆಲ್ ಶಾಂತಿ ಪುರಸ್ಕಾರಗೆ ಆಯ್ಕೆಯಾಗಿದ್ದಾರೆ. ವಿಶೇಷವೆಂದರೆ ನರ್ಗೆಸ್ ಉಪಾಧ್ಯಕ್ಷೆಯಾಗಿರುವ ಮತ್ತು ಅವರ ಹೋರಾಟಗಳಿಗೆ ವೇದಿಕೆಯಾಗಿರುವ ‘ಡಿಫೆಂಡರ್ಸ್ ಆಫ್ ಹ್ಯೂಮನ್ ರೈಟ್ಸ್ ಸೆಂಟರ್’ನ ಮುಖ್ಯಸ್ಥೆ ಶಿರಿನ್ ಎಬ್ದಿ ಕೂಡಾ 2013ರಲ್ಲಿ ನೊಬೆಲ್ ಶಾಂತಿ ಪುರಸ್ಕಾರಕ್ಕೆ ಪಾತ್ರರಾಗಿದ್ದರು. ‘ಇರಾನ್‌ನಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧದ ಹೋರಾಟ, ಮಾನವ ಹಕ್ಕು ಮತ್ತು ಎಲ್ಲರಿಗೂ ಸ್ವಾತಂತ್ರ್ಯ ದೊರಕಿಸುವ ಸಲುವಾಗಿ ನಡೆಸಿರುವ ಹೋರಾಟಕ್ಕಾಗಿ ನರ್ಗೆಸ್ ಮೊಹಮ್ಮದಿ ಅವರಿಗೆ 2023ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಲು ನಿರ್ಧರಿಸಲಾಗಿದೆ.
ಇದು ಅವರ ಧೈರ್ಯಶಾಲಿ ಹೋರಾಟಕ್ಕೆ ಉತ್ತೇಜನವಾಗಿದೆ’ ಎಂದು ನೊಬೆಲ್ ಪ್ರಶಸ್ತಿ ಆಯ್ಕೆ ಸಮಿತಿ ಪ್ರಕಟಿಸಿದೆ. ನರ್ಗೆಸ್, ನೊಬೆಲ್ ಶಾಂತಿ ಪ್ರಶಸ್ತಿಗೆ ಆಯ್ಕೆಯಾದ ವಿಶ್ವದ 19ನೇ ಹಾಗೂ ಇರಾನಿನ 2ನೇ ಮಹಿಳೆಯಾಗಿದ್ದಾರೆ. ಅಲ್ಲದೇ 122 ವರ್ಷಗಳ ಇತಿಹಾಸದಲ್ಲೇ, ಗೃಹಬಂಧನ ಅಥವಾ ಜೈಲಿನಲ್ಲಿದ್ದುಕೊಂಡೇ ನೊಬೆಲ್ ಶಾಂತಿ ಪ್ರಶಸ್ತಿಗೆ ಭಾಜನರಾದ ಐದನೇ ವ್ಯಕ್ತಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಹೋರಾಟಕ್ಕೆ ಗೌರವ: ವಿವಿಧ ಪ್ರಕರಣ ಸಂಬಂಧ ಜೈಲು ಶಿಕ್ಷೆಗೆ ಗುರಿಯಾಗಿ ಪ್ರಸ್ತುತ, ಇರಾನ್‌ನ ಕುಖ್ಯಾತ ಎವಿನ್ ಜೈಲಿನಲ್ಲಿ ಬಂಧಿಯಾಗಿರುವ ನರ್ಗೆಸ್, ಕಳೆದ 3 ದಶಕಗಳ ಅವಧಿಯಲ್ಲಿ ಎಂಜಿನಿಯರ್, ಪತ್ರಕರ್ತೆ, ಮಾನವ ಹಕ್ಕು ಹೋರಾಟಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ. ‘ಡಿಫೆಂಡರ್ಸ್ ಆಫ್ ಹ್ಯೂಮನ್ ರೈಟ್ಸ್ ಸೆಂಟರ್’ನ ಉಪಾಧ್ಯಕ್ಷೆಯಾಗಿರುವ ನರ್ಗೆಸ್, ವಿವಿಧ ಹೋರಾಟಗಳಿಗೆ ಸಂಬಂಧಿಸಿದಂತೆ 13 ಬಾರಿ ಬಂಧನಕ್ಕೆ ಒಳಪಟ್ಟು 5 ವಿವಿಧ ಪ್ರಕರಣಗಳಲ್ಲಿ ಒಟ್ಟು 31 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಜೊತೆಗೆ 145 ಛಡಿ ಏಟಿನ ಶಿಕ್ಷೆಗೂ ಗುರಿಯಾಗಿದ್ದಾರೆ. ಇನ್ನೂ ಹಲವು ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. ಯಾವುದೇ ನಾಗರಿಕರು, ಯಾವುದೇ ಸಂಕೋಲೆಗಳಲ್ಲಿ ಅಥವಾ ಸರ್ವಾಧಿಕಾರದಡಿ ಗುಲಾಮರಂತೆ ಬದುಕಬಾರದು ಎಂದು ಪ್ರತಿಪಾದನೆಯ ಜೊತೆಜೊತೆಗೆ, ಮಹಿಳೆ ಸಮಾಜದಲ್ಲಿ ತನ್ನ ಜೀವನವನ್ನು ತನ್ನಿಷ್ಟದಂತೆ ನಡೆಸುವ ಎಲ್ಲ ಹಕ್ಕುಗಳನ್ನು ಹೊಂದಿದ್ದಾಳೆ ಹಾಗೂ ಅವುಗಳನ್ನು ಕಿತ್ತುಕೊಳ್ಳುವ ಅಧಿಕಾರ ಯಾರಿಗೂ ಇಲ್ಲ ಎಂದು ಮಹಿಳೆಯರ ಹಕ್ಕುಗಳ ಪರ ಹೋರಾಡಿದ್ದಾರೆ.
ಇಡೀ ಪ್ರಪಂಚ ನಮ್ಮ ಹೋರಾಟವನ್ನು ಗುರುತಿಸಿದೆ. ಆದರೆ ನಮ್ಮದೇ ದೇಶ ಜೈಲಿನಲ್ಲಿಟ್ಟಿದೆ. ನನ್ನ ಹೋರಾಟಗಳಿಗ ಜಯ ಸಿಗುವ ಕಾಲ ಹತ್ತಿರದಲ್ಲೇ ಇದೆ. ನರ್ಗೆಸ್ ಮೊಹಮ್ಮದಿ, ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ