‘ಭಾರತದ ವಿರುದ್ಧ ಒಬ್ಬರಲ್ಲ, ನೂರಲ್ಲ 1000ಕ್ಕೂ ಹೆಚ್ಚು ಸಂಖ್ಯೆಯ ಆತ್ಮಾಹುತಿ ದಾಳಿಕೋರರು ಸಿದ್ಧರಿದ್ದಾರೆ’ ಎಂದು ಪಾಕ್‌ನ ಜೈಷ್ ಎ ಮೊಹಮ್ಮದ್‌ ಉಗ್ರಗಾಮಿ ಸಂಘಟನೆ ಸಂಸ್ಥಾಪಕ ಮೌಲಾನಾ ಮಸೂದ್‌ ಅಜರ್‌ ಎಚ್ಚರಿಕೆ ನೀಡಿದ್ದಾನೆ.

- ನಿಜ ಸಂಖ್ಯೆ ಹೇಳಿದರೆ ವಿಶ್ವ ಬೆಚ್ಚಿ ಬೀಳುತ್ತೆ- ಜೈಷ್‌ ಉಗ್ರ ಅಜರ್‌ನ ಆಡಿಯೋ ಬಹಿರಂಗ

---

ಆಪರೇಷನ್‌ ಸಿಂದೂರದ ವೇಳೆ ಜೈಷ್‌ ಉಗ್ರರ ಹಲ ನೆಲೆ ಧ್ವಂಸ

ದಾಳಿಯಲ್ಲಿ ಮಸೂದ್‌ನ ಕುಟುಂಬದ ಹಲವು ಸದಸ್ಯರ ಸಾವು

ಅದಾದ ಬಳಿಕ ಭಾರತದ ಮೇಲೆ ಮುಗಿಬೀಳಲು ಉಗ್ರರ ಹವಣಿಕೆ

ಅದರ ಬೆನ್ನಲ್ಲೇ ಭಾರತದ ಮೇಲೆ ದಾಳಿಗೆ ಉಗ್ರರು ಸಜ್ಜು ಹೇಳಿಕೆ

ಭಾರತದ ಮೋಸ್ಟ್‌ ವಾಂಟೆಡ್‌ ಉಗ್ರರ ಪಟ್ಟಿಯಲ್ಲಿರುವ ಅಜರ್‌

ಈತ 2001ರ ಸಂಸತ್‌, 2008ರ ಮುಂಬೈ ದಾಳಿ ಸಂಚುಕೋರ

=

ಇಸ್ಲಾಮಾಬಾದ್‌: ‘ಭಾರತದ ವಿರುದ್ಧ ಒಬ್ಬರಲ್ಲ, ನೂರಲ್ಲ 1000ಕ್ಕೂ ಹೆಚ್ಚು ಸಂಖ್ಯೆಯ ಆತ್ಮಾಹುತಿ ದಾಳಿಕೋರರು ಸಿದ್ಧರಿದ್ದಾರೆ’ ಎಂದು ಪಾಕ್‌ನ ಜೈಷ್ ಎ ಮೊಹಮ್ಮದ್‌ ಉಗ್ರಗಾಮಿ ಸಂಘಟನೆ ಸಂಸ್ಥಾಪಕ ಮೌಲಾನಾ ಮಸೂದ್‌ ಅಜರ್‌ ಎಚ್ಚರಿಕೆ ನೀಡಿದ್ದಾನೆ. ಈ ಎಚ್ಚರಿಕೆ ಕುರಿತ ಆತನ ಆಡಿಯೋವೊಂದು ಬಹಿರಂಗವಾಗಿದ್ದು, ಸಂಚಲನ ಮೂಡಿಸಿದೆ. ‘ದಾಳಿಕೋರರು ನನ್ನ ಅನುಮತಿಗಾಗಿ ಕಾಯುತ್ತಿದ್ದಾರೆ’ ಎಂದೂ ಹೇಳಿದ್ದಾನೆ.

ಆದರೆ ಜೈಷ್‌ ಎ ಮೊಹಮ್ಮದ್‌ ಉಗ್ರನ ವಿಡಿಯೋವಿನ ಸಮಯ ಮತ್ತು ಸನ್ನಿವೇಶದ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ.

‘ಭಾರತದ ವಿರುದ್ಧ ದಾಳಿಗೆ ಒಂದಲ್ಲ, ಎರಡಲ್ಲ, 100 ಅಲ್ಲ, 1000ಕ್ಕೂ ಹೆಚ್ಚು ಆತ್ಮಾಹುತಿ ದಾಳಿಕೋರರು ಸಿದ್ಧರಿದ್ದಾರೆ. ನಿಜವಾದ ಸಂಖ್ಯೆಯನ್ನು ಹೇಳಿದರೆ, ನಾಳೆ ವಿಶ್ವಾದ್ಯಂತ ಮಾಧ್ಯಮಗಳಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗುತ್ತದೆ’ ಎಂದಿದ್ದಾನೆ.

ಮಸೂದ್‌ ಅಜರ್‌ ಭಾರತಕ್ಕೆ ಬೇಕಿರುವ ಉಗ್ರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾನೆ. ಕಳೆದ ವರ್ಷ ಭಾರತ ನಡೆಸಿದ ಆಪರೇಷನ್‌ ಸಿಂದೂರದ ವೇಳೆ ಜೈಷ್‌ ಸಂಘಟನೆಯ ಕೇಂದ್ರ ಕಚೇರಿ ಬಹಾವಲ್ಪುರದ ಮೇಲೆ ಭಾರತ ದಾಳಿ ಮಾಡಿತ್ತು. ಈ ವೇಳೆ ಮಸೂದ್‌ನ ಆಪ್ತ ವಲಯವೆಲ್ಲವೂ ಬಲಿಯಾಗಿತ್ತು. ಆದರೆ ಮಸೂದ್‌ ಮಾತ್ರ ಬಚಾವ್‌ ಆಗಿದ್ದ. ಈತ 2001ರ ಸಂಸತ್‌ ದಾಳಿ, 2008ರ ಮುಂಬೈ ದಾಳಿಯ ಮಾಸ್ಟರ್‌ಮೈಂಡ್‌ ಕೂಡ ಹೌದು.