ಸಾರಾಂಶ
ಒಟ್ಟಾವ: ಕೆನಡಾ ದೇಶ ವಿಸರ್ಜನೆಗೊಂಡು ಅಮೆರಿಕದ 51ನೇ ರಾಜ್ಯವಾಗಬೇಕು ಎನ್ನುವ ಅಮೆರಿಕದ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಸ್ತಾಪವನ್ನು ಕೆನಡಾ ಪ್ರಧಾನಿ ಜಸ್ಟೀನ್ ಟ್ರುಡೋ ಮತ್ತೊಮ್ಮೆ ತಿರಸ್ಕರಿಸಿದ್ದಾರೆ. ‘ಕೆನಡಾವನ್ನು ಅಮೆರಿಕದ ಭಾಗವನ್ನಾಗಿ ಮಾಡಲು ಅವಕಾಶ ನೀಡುವುದಿಲ್ಲ. ನಮ್ಮ ದೇಶದ ಜನರಿಗೆ ತಾವು ಕೆನಡಾದವರು ಎಂದು ಹೇಳಿಕೊಳ್ಳಲು ಬಹಳ ಹೆಮ್ಮೆ ಇದೆ’ ಎಂದಿದ್ದಾರೆ.
ಅಲ್ಲದೆ, ಇದಕ್ಕೆ ಪ್ರತಿಯಾಗಿ, ‘ನಮಗೆ ಕ್ಯಾಲಿಫೋರ್ನಿಯಾದ ಭಾಗಗಳು ಅಥವಾ ಪ್ಯಾರಾಮೌಂಟನ್ ಅನ್ನು ಕೊಡಿ’ ಟ್ರಂಪ್‌ಗೆ ವ್ಯಂಗ್ಯದ ಧಾಟಿಯಲ್ಲಿ ಸವಾಲೆಸೆದಿದ್ದಾರೆ.
ಸಿಎನ್‌ಎನ್ ಸಂದರ್ಶನದಲ್ಲಿ ಮಾತನಾಡಿದ ಟ್ರುಡೋ,‘ಕೆನಡಾ ಅಮೆರಿಕದ ಭಾಗವಾಗುವುದಿಲ್ಲ. ಕೆನಡಾದವರಿಗೆ ತಾವು ಕೆನಡಿಯನ್ನರು ಎಂದು ಕರೆಸಿಕೊಳ್ಳಲು ತುಂಬಾ ಹೆಮ್ಮೆಯಿದೆ. ನಾವು ನಮ್ಮನ್ನು ಸುಲಭವಾಗಿ ವ್ಯಾಖ್ಯಾನಿಸುವ ವಿಧಾನವೆಂದರೆ ನಾವು ಅಮೆರಿಕನ್ ಅಲ್ಲ ಎನ್ನುವುದು. ಜನರ ಗಮನವನ್ನು ಬೇರೆಡೆ ಸೆಳೆಯಲು ಟ್ರಂಪ್ ಈ ರೀತಿ ಹೇಳುತ್ತಿದ್ದಾರೆ’ ಎಂದರು.
ಸುಂಕದಿಂದ ಅಮೆರಿಕಕ್ಕೇ ನಷ್ಟ: ಗಡಿ ಭದ್ರತೆಯನ್ನು ಹೆಚ್ಚಿಸದ ಹೊರತು ಕೆನಡಾದ ಎಲ್ಲ ಅಮದುಗಳ ಮೇಲೆ ಶೇ.25ರಷ್ಟು ಸುಂಕವನ್ನು ಹೆಚ್ಚಿಸಲು ಟ್ರಂಪ್ ಇತ್ತೀಚೆಗೆ ಸಲಹೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಟ್ರುಡೋ, ‘ಅಧಿಕ ಸುಂಕದಿಂದ ಅಮೆರಿಕದ ಜನರು ಬೆಲೆ ಏರಿಕೆಯನ್ನು ಅನುಭವಿಸಲಿದ್ದಾರೆ. ತೈಲ, ಅನಿಲ, ವಿದ್ಯುತ್, ಉಕ್ಕು, ಅಲ್ಯೂಮಿನಿಯಂ, ಮರದ ದಿಮ್ಮಿ, ಕಾಂಕ್ರೀಟ್ ಮತ್ತು ಕೆನಡಾದಿಂದ ಅಮೆರಿಕದ ಗ್ರಾಹಕರು ಖರೀದಿಸುವ ಎಲ್ಲ ಉತ್ಪನ್ನಗಳು, ಸುಂಕ ಹೆಚ್ಚಿಸಿದರೆ ದುಬಾರಿ ಆಗುತ್ತವೆ’ ಎಂದು ಹೇಳಿದರು.
ಕೆನಡಾ: ಮಾ.9ಕ್ಕೆ ಲಿಬರಲ್ ಪಕ್ಷದ ಹೊಸ ಪ್ರಧಾನಿ ಘೋಷಣೆ
ಟೊರಂಟೋ: ಕೆನಡಾದಲ್ಲಿ ಖಲಿಸ್ತಾನಿ ಬೆಂಬಲಿಗ ಪ್ರಧಾನಿ ಜಸ್ಟಿನ್ ಟ್ರುಡೋ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ ಬೆನ್ನಲ್ಲೇ ಅವರ ಸ್ಥಾನಕ್ಕೆ ಹೊಸ ಪ್ರಧಾನಿಯನ್ನು ಮಾ.9ಕ್ಕೆ ಆಯ್ಕೆ ಮಾಡಲಾಗುತ್ತದೆ ಎಂದು ಕೆನಡಾದ ಲಿಬರಲ್ ಪಕ್ಷ ಹೇಳಿದೆ.ಈ ಬಗ್ಗೆ ಪಕ್ಷದ ಅಧ್ಯಕ್ಷ ಸಚಿತ್ ಮಿಶ್ರಾ ಮಾತನಾಡಿ, ‘ಮಾ.9ಕ್ಕೆ ದೇಶದ ಹೊಸ ಪ್ರಧಾನಿಯನ್ನು ಆಯ್ಕೆ ಮಾಡಲಾಗುತ್ತದೆ. 2025ರ ಚುನಾವಣೆಯನ್ನು ಸಮರ್ಥವಾಗಿ ನಿಭಾಯಿಸಿ, ಗೆಲ್ಲುತ್ತೇವೆ’ ಎಂದಿದ್ದಾರೆ.
ಸೋಮವಾರ ಜಸ್ಟಿನ್ ಟ್ರುಡೋ ಅವರು ಪಕ್ಷದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುತ್ತಿರುವುದಾಗಿ ಜತೆಗೆ ಹೊಸ ಪ್ರಧಾನಿ ಆಯ್ಕೆ ಬಳಿಕ ರಾಜೀನಾಮೆ ಕೊಡುವುದಾಗಿ ಘೋಷಿಸಿದ್ದರು. ಇವರ ಸ್ಥಾನಕ್ಕೆ ಕನ್ನಡಿಗ ಚಂದ್ರ ಆರ್ಯ, ಭಾರತ ಮೂಲದ ಅನಿತಾ ಆನಂದ್, ಬ್ಯಾಂಕ್ ಆಫ್ ಕೆನಡಾದ ಮಾಜಿ ಅಧ್ಯಕ್ಷ ಕ್ರಿಸ್ಟಿಯಾ ಫ್ರೀಲೆಂಡ್ ರೇಸ್‌ನಲ್ಲಿದ್ದಾರೆ.