ಸಾರಾಂಶ
ಲಾಸ್ ಏಂಜಲೀಸ್: ಅಮೆರಿಕದ ಲಾಸ್ ಏಂಜಲೀಸ್ ಹಾಗೂ ಹಾಲಿವುಡ್ ಹಿಲ್ಸ್ ಸುತ್ತಮುತ್ತ ಹರಡಿರುವ ಕಾಡ್ಗಿಚ್ಚು ಯಾವ ಮಟ್ಟಿಗೆ ವ್ಯಾಪಿಸುತ್ತಿದೆ ಎಂದರೆ ಅನೇಕ ಊರುಗಳನ್ನೇ ಆಹುತಿ ಮಾಡಿಕೊಳ್ಳುತ್ತಿದೆ. ಅಂಥದ್ದರಲ್ಲಿ ಪೆಸಿಫಿಕ್ ಪಾಲಿಸೇಡ್ಸ್ ಎಂಬಲ್ಲಿನ $125 ದಶಲಕ್ಷ ಮೌಲ್ಯದ ಅತ್ಯಂತ ದುಬಾರಿ ಮನೆ (ಅಂದಾಜು ₹ 10,770 ಕೋಟಿ) ಕಾಡ್ಗಿಚ್ಚಿನಲ್ಲಿ ನಾಶವಾಗಿದೆ.
ಲುಮಿನಾರ್ ಟೆಕ್ನಾಲಜೀಸ್ ಕಂಪನಿ ಸಿಇಒ ಆಸ್ಟಿನ್ ರಸ್ಸೆಲ್ ಒಡೆತನದ, 18 ಬೆಡ್‌ರೂಂ ಇರುವ ಈ ಬಂಗಲೆ ಈಗ ಅಗ್ನಿಗೆ ಆಹುತಿಯಾಗಿ ಸಂಪೂರ್ಣ ಧರೆಗುರುಳಿದೆ, ಕೇವಲ ಹೊಗೆಯಾಡಿಸುವ ಅವಶೇಷಗಳನ್ನು ಮಾತ್ರ ಉಳಿಸಿದೆ ಎಂದು ಮಾಧ್ಯಮವೊಂದು ಫೋಟೋ ಸಮೇತ ವರದಿ ಮಾಡಿದೆ.
ತಿಂಗಳಿಗೆ $450,000 (ಅಂದಾಜು ₹ 3.74 ಕೋಟಿ) ಬಾಡಿಗೆಗೆ ಲಭ್ಯವಿದ್ದ ಈ ಬಂಗಲೆ 2023ರಲ್ಲಿ ಅಮೆರಿಕದ ಎಚ್‌ಬಿಒ ಟೀವಿ ಚಾನೆಲ್‌ನಲ್ಲಿ ನಡೆದ ಸಕ್ಸೆಶನ್ ಎಂಬ ಶೋನಲ್ಲಿ ಕಾಣಿಸಿಕೊಂಡು ಖ್ಯಾತಿ ಪಡೆದಿತ್ತು.ಬಂಗಲೆಯಲ್ಲಿ ವಿಷ್ಟ ವಿನ್ಯಾಸದ ಅಡುಗೆ ಮನೆ, 20 ಆಸನಗಳ ಥಿಯೇಟರ್, ತಾಪಮಾನ-ನಿಯಂತ್ರಿತ ವೈನ್ ಸೆಲ್ಲಾರ್ ಮತ್ತು ನಕ್ಷತ್ರ ವೀಕ್ಷಣೆಗಾಗಿ ವಿಶೇಷ ಛಾವಣಿ, ಕಾರ್ ಗ್ಯಾಲರಿ ಸೇರಿದಂತೆ ಅತಿರಂಜಿತ ವೈಶಿಷ್ಟ್ಯಗಳಿದ್ದವು. ಇವೆಲ್ಲ ಬಹುತೇಕ ದಹಿಸಿ ಹೋಗಿವೆ.