ಕ್ಸಿ ಭೇಟಿಯಾಯ್ತು, ಇಂದು ಪುಟಿನ್‌, ಮೋದಿ ಮಾತುಕತೆ ಕುತೂಹಲ

| N/A | Published : Sep 01 2025, 01:04 AM IST / Updated: Sep 01 2025, 05:53 AM IST

ಕ್ಸಿ ಭೇಟಿಯಾಯ್ತು, ಇಂದು ಪುಟಿನ್‌, ಮೋದಿ ಮಾತುಕತೆ ಕುತೂಹಲ
Share this Article
  • FB
  • TW
  • Linkdin
  • Email

ಸಾರಾಂಶ

ಶಾಂಘೈ ಸಹಕಾರ ಶೃಂಗಸಭೆಯಲ್ಲಿ ಭಾಗಿಯಾಗಲು ಚೀನಾಕ್ಕೆ ಆಗಮಿಸಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ, ಸೋಮವಾರ ಇಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರನ್ನು ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.

ಟಿಯಾನ್‌ಜಿನ್‌: ಶಾಂಘೈ ಸಹಕಾರ ಶೃಂಗಸಭೆಯಲ್ಲಿ ಭಾಗಿಯಾಗಲು ಚೀನಾಕ್ಕೆ ಆಗಮಿಸಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ, ಸೋಮವಾರ ಇಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರನ್ನು ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.

ಭಾನುವಾರವಷ್ಟೇ ಮೋದಿ ಅವರು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಭೇಟಿಯಾಗಿ ದ್ವಿಪಕ್ಷೀಯ, ಜಾಗತಿಕ ವಿದ್ಯಮಾನಗಳ ಕುರಿತು ಸಮಾಲೋಚನೆ ನಡೆಸಿದ್ದರು. ಅದರ ಬೆನ್ನಲ್ಲೇ ಮತ್ತೊಂದು ಹೈವೋಲ್ಟೇಜ್‌ ಸಭೆ ನಿಗದಿಯಾಗಿದೆ. ಸಭೆಯಲ್ಲಿ ಟ್ರಂಪ್‌ ಹೇರಿರುವ ತೆರಿಗೆ ಹಾಗೂ ಉಕ್ರೇನ್-ರಷ್ಯಾ ಕದನದ ಬಗ್ಗೆ ಚರ್ಚೆ ನಡೆಯುವ ನಿರೀಕ್ಷೆ ಇದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಕಳೆದ ಕೆಲ ತಿಂಗಳಿನಿಂದ ಭಾರತ, ಚೀನಾ, ರಷ್ಯಾ ಸೇರಿ ವಿಶ್ವದ ಹಲವು ಅಭಿವೃದ್ಧಿ ಹೊಂದಿದ, ಅಭಿವೃದ್ಧಿ ಹೊಂದುತ್ತಿರುವ ದೇಶಗಳ ವಿರುದ್ಧ ತೆರಿಗೆ ಯುದ್ಧ ಆರಂಭಿಸಿದ್ದಾರೆ. ಅದರ ಬೆನ್ನಲ್ಲೇ ನಡೆಯುತ್ತಿರುವ ಶಾಂಘೈ ಶೃಂಗಸಭೆಯನ್ನು ಗ್ಲೋಬಲ್‌ ಸೌತ್‌ ದೇಶಗಳು ತಮ್ಮ ಶಕ್ತಿ ಪ್ರದರ್ಶನದ ವೇದಿಕೆಯಾಗಿ ಬಳಸಿಕೊಂಡಿವೆ. ಅದರ ನಡುವೆಯೇ ತೆರಿಗೆ ದಾಳಿಗೆ ಒಳಗಾದ ಎರಡು ದೇಶಗಳ ನಾಯಕರಾದ ಮೋದಿ ಮತ್ತು ಕ್ಸಿ ಭಾನುವಾರ ಜಾಗತಿಕ ವಿದ್ಯಮಾನಗಳ ಕುರಿತು ಚರ್ಚೆ ನಡೆಸಿದ್ದಾರೆ.

ಅದರ ಬೆನ್ನಲ್ಲೇ ಸೋಮವಾರ ಮೋದಿ - ಪುಟಿನ್‌ ಭೇಟಿ ನಿಗದಿಯಾಗಿದೆ. ರಷ್ಯಾದಿಂದ ಭಾರತದ ತೈಲ ಖರೀದಿ ಮುಂದಿಟ್ಟಿಕೊಂಡೇ ಭಾರತದ ಮೇಲೆ ಟ್ರಂಪ್‌ ಶೇ.25ರಷ್ಟು ಹೆಚ್ಚುವರಿ ತೆರಿಗೆ ಘೋಷಿಸಿದ್ದಾರೆ. ಅದರ ಬೆನ್ನಲ್ಲೇ ಉಭಯ ನಾಯಕರ ನಡುವಿನ ಭೇಟಿ ನಿಗದಿಯಾಗಿದ್ದು, ಈ ವಿಷಯ ಸೋಮವಾರದ ಸಭೆಯಲ್ಲಿ ಪ್ರಮುಖವಾಗಿ ಚರ್ಚೆಯಾಗುವ ನಿರೀಕ್ಷೆ ಇದೆ. ಜೊತೆಗೆ ಈ ಭೇಟಿ ಅಮೆರಿಕ ಅಧ್ಯಕ್ಷ ಟ್ರಂಪ್‌ಗೆ ನೇರ ಸಂದೇಶ ರವಾನಿಸುವ ಯತ್ನವಾಗಿರಲಿದೆ ಎಂದು ಬಣ್ಣಿಸಲಾಗಿದೆ.

ಇನ್ನೊಂದೆಡೆ ಶನಿವಾರವಷ್ಟೇ ಪ್ರಧಾನಿ ಮೋದಿ ಅವರೊಂದಿಗೆ ಉಕ್ರೇನ್‌ ಅಧ್ಯಕ್ಷ ವೊಲೊದಿಮಿರ್‌ ಜೆಲೆನ್ಸ್ಕಿ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದರು. ಈ ವೇಳೆ ಶಾಂತಿಗೆ ಮಧ್ಯಸ್ಥಿಕೆ ವಹಿಸುವಂತೆ ಮನವಿ ಮಾಡಿದ್ದರು. ಹೀಗಾಗಿ ಇಂಥದ್ದೊಂದು ಶಾಂತಿಯ ಸಂದೇಶವನ್ನು ಮೋದಿ, ಪುಟಿನ್‌ ಮುಂದಿಡಲಿದ್ದಾರೆ ಎನ್ನಲಾಗಿದೆ. ಹೀಗಾಗಿ ಬಹು ಆಯಾಮದಲ್ಲಿ ಸೋಮವಾರ ನಡೆಯಲಿರುವ ಉಭಯ ನಾಯಕರ ಭೇಟಿ ಸಾಕಷ್ಟು ಕುತೂಹಲ ಮೂಡಿಸಿದೆ.

 ಗಡೀಲಿ ಶಾಂತಿ ಸ್ಥಾಪನೆ: ಭಾರತ-ಚೀನಾ ಸಹಮತಿ 

 ಟಿಯಾನ್‌ಜಿನ್‌ (ಚೀನಾ): ಅಮೆರಿಕದ ತೆರಿಗೆ ಹೇರಿಕೆಗೆ ತಿರುಗೇಟು ನೀಡುವ ನಿಟ್ಟಿನಲ್ಲಿ ಹಾಗೂ ಹದಗೆಟ್ಟಿದ್ದ ಉಭಯ ದೇಶಗಳ ಸಂಬಂಧ ಸುಧಾರಿಸಿ ಶಾಂತಿ ಸ್ಥಾಪನೆ ದಿಕ್ಕಿನಲ್ಲಿ, ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ನಡುವೆ ಭಾನುವಾರ ಚೀನಾದ ಶಾಂಘೈ ಶೃಂಗಸಭೆ ವೇಳೆ ನಡೆದ ದ್ವಿಪಕ್ಷೀಯ ಮಾತುಕತೆ ಫಲಪ್ರದವಾಗಿದೆ.ಈ ವೇಳೆ ಉಭಯ ನಾಯಕರು ಗಡಿ ಬಿಕ್ಕಟ್ಟಿನ ಸಂಬಂಧ ನ್ಯಾಯಸಮ್ಮತ, ಸಮಂಜಸ ಮತ್ತು ಇಬ್ಬರಿಗೂ ಸ್ವೀಕಾರ್ಹವಾದ ಪರಿಹಾರ ಕಂಡುಕೊಳ್ಳಲು ನಿರ್ಧರಿಸಿದ್ದಾರೆ. ಜೊತೆಗೆ ವ್ಯಾಪಾರ ಹಾಗೂ ಹೂಡಿಕೆ ಒಪ್ಪಂದ ವಿಸ್ತರಣೆಯ ನಿಟ್ಟಿನಲ್ಲಿ ಕೆಲಸ ಮಾಡುವ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ.

ಭಾರತ ಮತ್ತು ಚೀನಾ ಎರಡೂ ದೇಶಗಳು ಅಭಿವೃದ್ಧಿಯ ಸಹಭಾಗಿಗಳೇ ಹೊರತು ಪರಸ್ಪರ ವಿರೋಧಿಗಳಲ್ಲ. ಎರಡೂ ದೇಶಗಳ ನಡುವಿನ ಭಿನ್ನಮತವು ವಿವಾದವಾಗಿ ಪರಿಣಮಿಸಬಾರದು ಎಂದು ಇದೇ ವೇಳೆ ಉಭಯ ನಾಯಕರು ಪುನರುಚ್ಚರಿಸಿದರು. ಜತೆಗೆ, ಎರಡೂ ದೇಶಗಳ ನಡುವೆ ನೇರ ವಿಮಾನಯಾನ ಸೇವೆ, ಕೈಲಾಸ ಮಾನಸ ಸರೋವರ ಯಾತ್ರೆ ಪುನರ್‌ ಆರಂಭಕ್ಕೂ ನಿರ್ಧರಿಸಿದರು.ಶಾಂಘೈ ಕೋಆಪರೇಷನ್‌ ಆರ್ಗನೈಸೇಷನ್‌ (ಎಸ್‌ಸಿಒ) ಶೃಂಗದ ಹಿನ್ನೆಲೆಯಲ್ಲಿ ಏಳು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಚೀನಾಗೆ ಭೇಟಿ ನೀಡಿರುವ ಪ್ರಧಾನಿ ಮೋದಿ ಅವರು ಕ್ಸಿಜಿನ್‌ಪಿಂಗ್‌ ಅವರ ಜತೆಗೆ ಸುಮಾರು 40 ನಿಮಿಷಗಳ ಕಾಲ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಈ ವೇಳೆ ಗಡಿ, ವ್ಯಾಪಾರ ಸೇರಿ ವಿವಿಧ ವಿಚಾರಗಳ ಕುರಿತು ಉಭಯ ನಾಯಕರು ಪ್ರಸ್ತಾಪಿಸಿದರು.

ಭಾರತ ಮತ್ತು ಚೀನಾ ನಡುವಿನ ಬಾಂಧವ್ಯ ಸುಧಾರಣೆಗೆ ಗಡಿ ಪ್ರದೇಶದಲ್ಲಿ ಶಾಂತಿ ಮತ್ತು ನೆಮ್ಮದಿಯ ಅಗತ್ಯವನ್ನು ಒತ್ತಿಹೇಳಿರುವ ಮೋದಿ ಅವರು ಭಾರತವು ಪರಸ್ಪರ ನಂಬಿಕೆ, ಪರಸ್ಪರ ಗೌರವ ಮತ್ತು ಪರಸ್ಪರರ ವಿಚಾರದಲ್ಲಿ ಸೂಕ್ಷ್ಮತೆಗೆ ಬದ್ಧವಾಗಿದೆ. ನಮ್ಮ ಸಹಭಾಗಿತ್ವವು ಎರಡೂ ದೇಶಗಳ 280 ಕೋಟಿ ಜನರ ಹಿತಾಸಕ್ತಿಯನ್ನಾಧರಿಸಿದೆ. ಈ ಸಹಭಾಗಿತ್ವ ಮಾನವ ಕಲ್ಯಾಣಕ್ಕೂ ದಾರಿ ಮಾಡಿಕೊಡಲಿದೆ ಎಂದು ಮೋದಿ ಹೇಳಿದ್ದಾರೆ.ಜತೆಗೆ, ಭಾರತ ಮತ್ತು ಚೀನಾ ಎರಡೂ ದೇಶಗಳು ತಮ್ಮದೇ ಆದ ವ್ಯೂಹಾತ್ಮಕ ಸ್ವಾಯತ್ತತೆಯನ್ನು ಹೊಂದಿವೆ. ಈ ಎರಡೂ ದೇಶಗಳ ಸಂಬಂಧವನ್ನು ಮೂರನೇ ದೇಶದ ಕನ್ನಡಕದ ಮೂಲಕ ನೋಡುವ ಅಗತ್ಯವಿಲ್ಲ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟಿದ್ದಾರೆ.

ಮಾತುಕತೆ ವೇಳೆ ಉಭಯ ನಾಯಕರು ದ್ವಿಪಕ್ಷೀಯ ವ್ಯಾಪಾರ, ಹೂಡಿಕೆ ಒಪ್ಪಂದ, ವಿತ್ತೀಯ ಕೊರತೆ ಇಳಿಕೆ ಮತ್ತು ದ್ವಿಪಕ್ಷೀಯ, ಪ್ರಾದೇಶಿಕ ಹಾಗೂ ಭಯೋತ್ಪಾದನೆಯಂಥ ಅಂತಾರಾಷ್ಟ್ರೀಯ ವಿಚಾರಗಳು, ಸವಾಲುಗಳು, ನ್ಯಾಯಸಮ್ಮತ ವ್ಯಾಪಾರಗಳ ವಿಚಾರದಲ್ಲಿ ಸಮಾನ ಆಸಕ್ತಿ ಕಾಯ್ದುಕೊಳ್ಳಲು ಒಪ್ಪಿಕೊಂಡಿದ್ದಾರೆ ಎಂದು ಭಾರತದ ವಿದೇಶಾಂಗ ಇಲಾಖೆ ಹೇಳಿದೆ.‘ಭಾರತ ಮತ್ತು ಚೀನಾ ಪರಸ್ಪರ ಸ್ನೇಹಿತರಾಗಿರುವುದೇ ಉತ್ತಮ ಆಯ್ಕೆ. ಗಡಿ ಸಮಸ್ಯೆಯು ತಮ್ಮ ಸಂಬಂಧವನ್ನು ನಿರ್ಧರಿಸಲು ಎರಡೂ ದೇಶಗಳು ಆಸ್ಪದ ಮಾಡಿಕೊಡಬಾರದು. ಡ್ರ್ಯಾಗನ್ ಮತ್ತು ಆನೆ ಒಟ್ಟಿಗೆ ಕುಣಿಯುವಂತಾಗಬೇಕು’ ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅಪೇಕ್ಷಿಸಿದ್ದಾರೆ.

ಇದೇ ವೇಳೆ ಮೋದಿ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಕ್ಸಿನ್‌ಪಿಂಗ್‌ ಅವರ ಜತೆಗಿನ ಮಾತುಕತೆ ಫಲಪ್ರಧವಾಗಿತ್ತು ಎಂದು ಹೇಳಿಕೊಂಡಿದ್ದಾರೆ. ಈ ಹಿಂದೆ ರಷ್ಯಾದ ಕಝಾನ್‌ನಲ್ಲಿ ನಡೆದ ಭೇಟಿ ಬಳಿಕ ಎರಡೂ ದೇಶಗಳ ನಡುವಿನ ಸಂಬಂಧದ ವಿಚಾರದಲ್ಲಾದ ಧನಾತ್ಮಕ ಬದಲಾವಣೆಗಳನ್ನು ಅವಲೋಕಿಸಿದ್ದೇವೆ. ಗಡಿಯಲ್ಲಿ ಶಾಂತಿ ಮತ್ತು ನೆಮ್ಮದಿ ಕಾಯ್ದುಕೊಳ್ಳುವ ವಿಚಾರದಲ್ಲಿ ಪರಸ್ಪರ ಗೌರವ, ಆಸಕ್ತಿ ಮತ್ತು ಪರಸ್ಪರ ಸೂಕ್ಷ್ಮತೆ ಆಧಾರದ ಬದ್ಧತೆಯನ್ನು ಪುನರುಚ್ಚರಿಸಿದ್ದೇವೆ ಎಂದು ಅವರು ಹೇಳಿಕೊಂಡಿದ್ದಾರೆ.

Read more Articles on