ಹಿಮಾಲಯದ ತಪ್ಪಲಿನ ಪುಟ್ಟ ದೇಶ ನೇಪಾಳದಲ್ಲಿ ಬುಧವಾರ ಬೆಳಗ್ಗೆ ಅನಾಹುತಕಾರಿ ದಿಢೀರ್‌ ಪ್ರವಾಹ ಕಾಣಿಸಿಕೊಂಡಿದ್ದು, ನೂರಾರು ಜನರನ್ನು ಬಲಿ ಪಡೆದು, ಭಾರೀ ಪ್ರಮಾಣದ ಆಸ್ತಿಪಾಸ್ತಿಗೆ ಹಾನಿ ಮಾಡಿದೆ.

ಕಾಠ್ಮಂಡು: ಹಿಮಾಲಯದ ತಪ್ಪಲಿನ ಪುಟ್ಟ ದೇಶ ನೇಪಾಳದಲ್ಲಿ ಬುಧವಾರ ಬೆಳಗ್ಗೆ ಅನಾಹುತಕಾರಿ ದಿಢೀರ್‌ ಪ್ರವಾಹ ಕಾಣಿಸಿಕೊಂಡಿದ್ದು, ನೂರಾರು ಜನರನ್ನು ಬಲಿ ಪಡೆದು, ಭಾರೀ ಪ್ರಮಾಣದ ಆಸ್ತಿಪಾಸ್ತಿಗೆ ಹಾನಿ ಮಾಡಿದೆ. ಈ ದುರ್ಘಟನೆಯಲ್ಲಿ 105 ಭಾರತೀಯರು, 37 ಅನಿವಾಸಿ ಭಾರತೀಯರು ಸೇರಿ 500ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ಈ ಪೈಕಿ 400ಕ್ಕೂ ಹೆಚ್ಚು ಜನರು ಪವಿತ್ರ ಮಾನಸ ಸರೋವರ ಯಾತ್ರೆಗೆಂದು ತೆರಳಿದ್ದವರಾಗಿದ್ದಾರೆ.

ಟಿಬೆಟ್‌ನಲ್ಲಿ ಸಂಭವಿಸಿದ ಭೂಕಂಪದ ಪರಿಣಾಮ ಭಾರೀ ಪ್ರಮಾಣದ ನೀರ್ಗಲ್ಲು ಕುಸಿದು ಅದರ ನೀರು ನದಿಗೆ ಹರಿದ ಕಾರಣ ದುರ್ಘಟನೆ ಸಂಭವಿಸಿದೆ ಎಂದು ಒಂದು ವರದಿ ಹೇಳಿದ್ದರೆ, ಟಿಬೆಟ್‌ನ ಬೆಟ್ಟದ ಮೇಲೆ ಚೀನಾ ಕೈಗೊಂಡಿರುವ ಕಾಮಗಾರಿಗಳು ಈ ದುರ್ಘಟನೆಗೆ ಕಾರಣವಾಗಿದೆ ಎಂಬ ಆರೋಪಗಳೂ ಕೇಳಿಬಂದಿವೆ.

ಈ ನಡುವೆ ನಾಪತ್ತೆಯಾದ ಪ್ರವಾಸಿಗರು ಮತ್ತು ಸ್ಥಳೀಯರ ರಕ್ಷಣೆಗೆ ನೇಪಾಳದಲ್ಲಿ ಭಾರೀ ಕಾರ್ಯಾಚರಣೆ ಮುಂದುವರೆದಿದೆ. ಈ ನಡುವೆ ನೇಪಾಳ ಪ್ರಧಾನಿ ಬಾಲೆನ್‌ ಶಾಗೆ ಕರೆ ಮಾಡಿರುವ ಭಾರತದ ಪ್ರಧಾನಿ ಮೋದಿ ಘಟನೆ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸಿದ್ದು, ಅಗತ್ಯ ನೆರವಿನ ಭರವಸೆ ನೀಡಿದ್ದಾರೆ.

ದಿಢೀರ್‌ ಪ್ರವಾಹ ಕಾಣಿಸಿಕೊಂಡ ಭೋಟೆ ಕೋಶಿ, ಮುಂದೆ ಭಾರತ ಪ್ರವೇಶಿಸಿ ಉತ್ತರಪ್ರದೇಶ ಮತ್ತು ಬಿಹಾರದಲ್ಲಿ ಗಂದಕ್‌ ಹೆಸರಿನಲ್ಲಿ ಹರಿದು ಗಂಗಾ ನದಿ ಸೇರುತ್ತದೆ. ಹೀಗಾಗಿ ಭಾರತದಲ್ಲೂ ಪ್ರವಾಹದ ಪರಿಣಾಮಗಳು ಕಾಣಿಸಿಕೊಳ್ಳುವ ಆತಂಕ ಎದುರಾಗಿದ್ದು, ಇದನ್ನು ಎದುರಿಸಲು ಅಗತ್ಯ ಸಿದ್ಧತೆ ನಡೆಸಲಾಗಿದೆ.

ಏನಾಯ್ತು?:

ಚೀನಾಕ್ಕೆ ಸೇರಿರುವ ಟಿಬೆಟ್‌ ಗಡಿಭಾಗದಲ್ಲಿ ಬುಧವಾರ ಬೆಳಗ್ಗೆ 9 ಗಂಟೆ ವೇಳೆಗೆ ಭಾರೀ ಪ್ರಮಾಣದ ನೀರ್ಗಲ್ಲು ಕುಸಿತ ಸಂಭವಿಸಿದೆ. ಪರಿಣಾಮ ಬೆಟ್ಟದ ತಪ್ಪಲಿನಿಂದ ಭಾರೀ ಪ್ರಮಾಣದ ನೀರು, ಕಲ್ಲು, ಮಣ್ಣು ಪ್ರವಾಹೋಪಾದಿಯಲ್ಲಿ ಭೋಟೆ ಕೋಶಿ ನದಿಗೆ ಹರಿದುಬಂದ ಭೀಕರ ಜಲಪ್ರವಾಹವು ರಸುವಾ, ಧಾದಿಂಗ್‌, ನುವಾಕೋಟ್‌ ಮತ್ತು ಚಿತ್ರವನ ಜಿಲ್ಲೆಗಳಲ್ಲಿ ಹಾಹಾಕಾರ ಸೃಷ್ಟಿಸಿದೆ.

ಪ್ರವಾಹದ ರಭಸಕ್ಕೆ ನೂರಾರು ಮನೆ, ಕಟ್ಟಡ, ವಲಸೆ ವಿಭಾಗದ ಕಚೇರಿ, ಸೇತುವೆ, ಮಾರುಕಟ್ಟೆ ಹಾಗೂ ನದಿಪಾತ್ರದ ಪ್ರದೇಶಗಳು ಕೊಚ್ಚಿಹೋಗಿವೆ. ನೇಪಾಳ-ಚೀನಾ ಗಡಿ ಸಂಪರ್ಕಿಸುವ ಪ್ರಮುಖ ರಸ್ತೆ ಮಾರ್ಗ ಸಂಪೂರ್ಣ ಧ್ವಂಸಗೊಂಡಿದ್ದು, ಕನಿಷ್ಠ 13 ಜಲವಿದ್ಯುತ್‌ ಯೋಜನೆಗಳಿಗೆ ಹಾನಿಯಾಗಿದೆ. ದುರ್ಘಟನೆಯಲ್ಲಿ 200ಕ್ಕೂ ಹೆಚ್ಚು ಲಾರಿಗಳು ಸೇರಿದಂತೆ ಸಾವಿರಾರು ವಾಹನಗಳು ನೀರಿನಲ್ಲಿ ಕೊಚ್ಚಿ ಹೋಗಿದೆ. ದಿಢೀರ್‌ ಪ್ರವಾಹದ ದೃಶ್ಯಗಳ ಸಿಸಿಟೀವಿ ವಿಡಿಯೋ ದೃಶ್ಯಗಳು ಮೈಝುಮ್ಮೆನಿಸುವಂತಿದೆ.

140 ಭಾರತೀಯರು ನಾಪತ್ತೆ:

ನಾಪತ್ತೆಯಾದ ಸುಮಾರು 500 ಜನರಲ್ಲಿ 400ಕ್ಕೂ ಅಧಿಕ ಮಂದಿ ಟಿಬೆಟ್‌ನಲ್ಲಿರುವ ಕೈಲಾಸ ಮಾನಸ ಸರೋವರ ಯಾತ್ರೆಗೆ ತೆರಳಿದ್ದವರು. ಇವರಲ್ಲಿ 140ಕ್ಕೂ ಹೆಚ್ಚು ಮಂದಿ ಭಾರತ, ಭಾರತ ಮೂಲದವರಾಗಿದ್ದಾರೆ. ಇದರಲ್ಲಿ ತಮಿಳುನಾಡಿನ ಸುಮಾರು 50 ಪ್ರಯಾಣಿಕರು ಸೇರಿದ್ದಾರೆ. ಜೊತೆಗೆ ಕೊಯಮತ್ತೂರು ಮತ್ತು ಬೆಂಗಳೂರಿನ ಚಿಕ್ಕಬಳ್ಳಾಪುರದಲ್ಲಿ ಈಶ ಕೇಂದ್ರ ಹೊಂದಿರುವ ಸದ್ಗುರು ಅವರ ತಂಡದ 77 ಕೈಲಾಸ ಮಾಸನ ಸರೋವರ ಯಾತ್ರಿಕರು ಕೂಡ ನಾಪತ್ತೆಯಾಗಿದ್ದಾರೆ.

ದಿಢೀರ್‌ ಪ್ರವಾಹಕ್ಕೆ ಕಾರಣ?:

ಬುಧವಾರ ಬೆಳಗ್ಗೆ ಟಿಬೆಟ್‌ ಗಡಿಯಲ್ಲಿ 4.4 ತೀವ್ರತೆಯ ಭೂಕಂಪ ಸಂಭವಿಸಿತ್ತು. ಅದರ ಬೆನ್ನಲ್ಲೇ ನೀರ್ಗಲ್ಲು ಕುಸಿತ ಸಂಭವಿಸಿ ಅದರ ನೀರು ನದಿಗೆ ಸೇರಿ ದುರಂತಕ್ಕೆ ಕಾರಣವಾಗಿದೆ.

ರಕ್ಷಣಾ ಕಾರ್ಯ ಚುರುಕು:

ಪ್ರಸ್ತುತ ನೇಪಾಳ ಸೇನೆ, ಶಸ್ತ್ರಸಜ್ಜಿತ ಪೊಲೀಸ್ ಪಡೆ ಮತ್ತು ಸ್ಥಳೀಯ ಪೊಲೀಸರು ಬೃಹತ್ ಮಟ್ಟದ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ. ಸೇನಾ ಹೆಲಿಕಾಪ್ಟರ್‌ಗಳು, ಡ್ರೋನ್‌ಗಳು ಮತ್ತು ಶ್ವಾನದಳಗಳನ್ನು ಬಳಸಿ ಪ್ರವಾಹದಲ್ಲಿ ಸಿಲುಕಿದ 90ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ. ಕಾಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಭಾರತೀಯ ನಾಗರಿಕರ ನೆರವಿಗಾಗಿ ತುರ್ತು ಸಹಾಯವಾಣಿ ಸಂಖ್ಯೆಗಳನ್ನು (+977 985 131 6807, +977 970 910 7500) ಬಿಡುಗಡೆ ಮಾಡಿದ್ದು, ನೇಪಾಳ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದೆ. ನದಿ ಪಾತ್ರದಲ್ಲಿರುವ ಅಪಾಯಕಾರಿ ಪ್ರದೇಶಗಳಿಂದ ದೂರವಿರುವಂತೆ ಜನರಿಗೆ ಸೂಚಿಸಲಾಗಿದೆ.

ಏನಾಯ್ತು?

- ಟಿಬೆಟ್‌ನಲ್ಲಿ ಬೆಳಗ್ಗೆ ಭೂಕಂಪ. ನೀರ್ಗಲ್ಲು ನದಿಗೆ ಕುಸಿದು ಭಾರಿ ಪ್ರವಾಹ

- ಉಕ್ಕೇರಿದ ಭೋಟೆ ಕೋಶಿ ನದಿ. ಏಕಾಏಕಿ 6 ಮಹಡಿ ಎತ್ತರದಷ್ಟು ನೀರು

-ಗ್ರಾಮ, ಸೇತುವೆಗಳು, ಜನರು, ನೂರಾರು ಕಟ್ಟಡ, ವಾಹನ ನೀರುಪಾಲು

ಬಿಹಾರಕ್ಕೆ ಈಗ ನೆರೆ ಆತಂಕಪಟನಾ: ಬುಧವಾರ ನೇಪಾಳದಲ್ಲಿ ಸಂಭವಿಸಿದ ಹಠಾತ್‌ ಪ್ರವಾಹದ ಪರಿಣಾಮ ಬಿಹಾರಕ್ಕೆ ಪ್ರವಾಹ ಆತಂಕ ಎದುರಾಗಿದೆ. ನೇಪಾಳದಿಂದ ಭಾರಿ ಪ್ರಮಾಣದ ನೀರು ಹರಿದುಬರುತ್ತಿರುವ ಹಿನ್ನೆಲೆಯಲ್ಲಿ ಗಂಧಕ್‌ ಜಲಾಶಯದ ನೀರು ಖಾಲಿ ಮಾಡಲಾಗುತ್ತಿದೆ. ನದಿ ತೀರದಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ.

ನೇಪಾಳ ಸಹಾಯವಾಣಿ

+977 985 131 6807, +977 970 910 7500