- ಲಿಪುಲೇಖ್‌ ಪಾಸ್‌ ತನ್ನ ಅವಿಭಾಜ್ಯ ಅಂಗ ಎಂದ ನೇಪಾಳ । ಯಾತ್ರೆಗೆ ಕ್ಯಾತೆ

ಕಾಠ್ಮಂಡು: ಲಿಪುಲೇಖ್ ಮೂಲಕ ಭಾರತದ ಕೈಲಾಸ ಮಾನಸ ಸರೋವರ ಯಾತ್ರೆಗೆ ಅವಕಾಶ ನೀಡುವ ಬಗ್ಗೆ ಭಾರತ ಹಾಗೂ ಚೀನಾ ನಿರ್ಧರಿಸಿರುವುದಕ್ಕೆ ನೇಪಾಳ ಸರ್ಕಾರ ಕಳವಳ ವ್ಯಕ್ತಪಡಿಸಿದೆ. ಇದು ನೇಪಾಳ, ಭಾರತ ನಡುವೆ ಹೊಸ ರಾಜತಾಂತ್ರಿಕ ಬಿಕ್ಕಟ್ಟಿಗೆ ನಾಂದಿ ಹಾಡುವ ಸಾಧ್ಯತೆ ಇದೆ.

‘ಮಹಾಕಾಳಿ ನದಿಯ ಪೂರ್ವದಲ್ಲಿರುವ ಲಿಂಪಿಯಾಧುರ, ಲಿಪುಲೇಖ್ ಮತ್ತು ಕಾಲಾಪಾನಿ 1816 ರ ಸುಗೌಲಿ ಒಪ್ಪಂದದ ನಂತರ ನೇಪಾಳದ ಭೂಪ್ರದೇಶದ ಅವಿಭಾಜ್ಯ ಅಂಗಗಳಾಗಿವೆ. ಹೀಗಾಗಿ ಈ ಮಾರ್ಗದಲ್ಲಿ ತಾನು ಯಾತ್ರೆಗೆ ಅವಕಾಶ ನೀಡುವುದಿಲ್ಲ. ಈ ಬಗ್ಗೆ ರಾಜತಾಂತ್ರಿಕ ಮಾರ್ಗದ ಮೂಲಕ ನಮ್ಮ ನಿಲುವನ್ನು ಎರಡೂ ದೇಶಗಳಿಗೆ ತಿಳಿಸಿದ್ದೇವೆ’ ಎಂದು ಹೇಳಿದೆ.

ಲಿಪುಲೇಖ್‌ ಪಾಸ್‌ ಉತ್ತರಾಖಂಡ ಹಾಗೂ ನೇಪಾಳ ಗಡಿಯಲ್ಲಿದೆ. ಇದು ಸೇರಿ ಹಲವು ಪ್ರದೇಶಗಳು 1816ರ ಆಂಗ್ಲೋ-ನೇಪಾಳ ಕದನದ ನಂತರ ಭಾರತ ಹಾಗೂ ನೇಪಾಳ ನಡುವಿನ ವಿವಾದಿತ ಪ್ರದೇಶಗಳಾಗಿವೆ.

ಕೇಳದೇ ಯಾತ್ರೆ ಘೋಷಣೆಗೆ ಕಿಡಿ:


ಭಾರತದ ವಿದೇಶಾಂಗ ಸಚಿವಾಲಯ ಇತ್ತೀಚೆಗೆ 2026 ರ ಕೈಲಾಸ ಮಾನಸ ಸರೋವರ ಯಾತ್ರೆಯನ್ನು ಬೀಜಿಂಗ್‌ನ ಸಹಯೋಗದೊಂದಿಗೆ ಜೂನ್ ಮತ್ತು ಆಗಸ್ಟ್ ನಡುವೆ ನಡೆಸಲಾಗುವುದು ಎಂದು ಘೋಷಿಸಿತ್ತು.

50 ಜನರ ಬ್ಯಾಚ್‌ಗಳಲ್ಲಿ ಪ್ರಯಾಣಿಸುವ ಒಟ್ಟು 1,000 ಯಾತ್ರಿಕರು 2 ಮಾರ್ಗಗಳನ್ನು ಬಳಸುತ್ತಾರೆ. ಒಂದಿಷ್ಟು ತಂಡಗಳು ಸಿಕ್ಕಿಂನ ನಾಥು ಲಾ ಪಾಸ್ ಮೂಲಕ ಸಾಗಿದರೆ ಮತ್ತು ಇನ್ನಷ್ಟು ತಂಡಗಳು ಉತ್ತರಾಖಂಡದ ಲಿಪುಲೇಖ್ ಪಾಸ್ ಮೂಲಕ ಸಾಗುತ್ತವೆ. ಆನ್‌ಲೈನ್ ನೋಂದಣಿಗಳು ಈಗಾಗಲೇ ಪ್ರಾರಂಭವಾಗಿದ್ದು, ಮೇ 19ರ ಗಡುವು ನೀಡಲಾಗಿದೆ. ಅದರೆ ತನಗೆ ಕೇಳದೇ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂಬುದು ನೇಪಾಳದ ಆಕ್ಷೇಪವಾಗಿದೆ.