ಸಾರಾಂಶ
ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಕಾಯ್ದೆ ವಿರೋಧಿಸಿ 2020ರಲ್ಲಿ ದೆಹಲಿಯಲ್ಲಿ ನಡೆದಿದ್ದ ದಂಗೆಯು ಏಕಾಏಕಿ ಹುಟ್ಟಿಕೊಂಡ ಜನಾಕ್ರೋಶವಲ್ಲ. ಬದಲಾಗಿ ದೇಶದ ಆಡಳಿತ ವ್ಯವಸ್ಥೆಯನ್ನೇ ಬದಲಾಯಿಸಲು ರೂಪಿಸಲಾಗಿದ್ದ ಪೂರ್ವಯೋಜಿತ ಷಡ್ಯಂತ್ರವಾಗಿತ್ತು.
ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಕಾಯ್ದೆ ವಿರೋಧಿಸಿ 2020ರಲ್ಲಿ ದೆಹಲಿಯಲ್ಲಿ ನಡೆದಿದ್ದ ದಂಗೆಯು ಏಕಾಏಕಿ ಹುಟ್ಟಿಕೊಂಡ ಜನಾಕ್ರೋಶವಲ್ಲ. ಬದಲಾಗಿ ದೇಶದ ಆಡಳಿತ ವ್ಯವಸ್ಥೆಯನ್ನೇ ಬದಲಾಯಿಸಲು ರೂಪಿಸಲಾಗಿದ್ದ ಪೂರ್ವಯೋಜಿತ ಷಡ್ಯಂತ್ರವಾಗಿತ್ತು. ಇದರ ಹಿಂದಿನ ಶಕ್ತಿಗಳಿಗೆ ದೇಶಾದ್ಯಂತ ಇದೇ ರೀತಿಯ ಗಲಭೆ ಸೃಷ್ಟಿಸಿ ಅಸ್ಥಿರತೆ ಸೃಷ್ಟಿಯ ಉದ್ದೇಶವಿತ್ತು. ಈ ಮೂಲಕ ಸಿಎಎ ಕಾಯ್ದೆಯನ್ನು ಮುಸ್ಲಿಮರ ಮೇಲಿನ ದಾಳಿ ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಂಬಿಸುವ ಪ್ರಯತ್ನ ನಡೆಸಲಾಗಿತ್ತು ಎಂದು ದೆಹಲಿ ಪೊಲೀಸರು ಸ್ಫೋಟಕ ಆರೋಪ ಮಾಡಿದ್ದಾರೆ.
53 ಜನರ ಸಾವಿಗೆ ಕಾರಣವಾಗಿದ್ದ ದಂಗೆ ಘಟನೆ ಸಂಬಂಧ ಬಂಧಿತ ಆರೋಪಿಗಳಾದ ಉಮರ್ ಖಾಲೀದ್, ಶಾರ್ಜಿಲ್ ಇಮಾಂ, ಇತರರು ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯನ್ನು ವಿರೋಧಿಸಿ ದೆಹಲಿ ಪೊಲೀಸರು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಇಂಥದ್ದೊಂದು ಸ್ಫೋಟಕ ಅಂಶ ಬಹಿರಂಗಪಡಿಸಿದ್ದಾರೆ. ಜೊತೆಗೆ, ಆರೋಪಿಗಳು ಜೈಲಲ್ಲೇ ಇರಬೇಕೇ, ಹೊರತು ಬೇಲ್ ಮೇಲಲ್ಲ ಎಂದು ಪೊಲೀಸರು ವಾದಿಸಿದ್ದಾರೆ.
ಸಿಎಎ ವಿರುದ್ಧ ಜನರಲ್ಲಿ ಎದ್ದಿದ್ದ ಅಸಮ್ಮತಿಯನ್ನು ಮುಂದಿಟ್ಟುಕೊಂಡು ದೇಶದ ಸಾರ್ವಭೌಮತ್ವ ಮತ್ತು ಅಖಂಡತೆ ಮೇಲೆ ನಡೆಸಿದ ವ್ಯವಸ್ಥಿತ ದಾಳಿ ಅದಾಗಿತ್ತು. ತನಿಖೆ ವೇಳೆ ಆರೋಪಿಗಳ ವಿರುದ್ಧ ಸಾಕಷ್ಟು ದಾಖಲೆಗಳು, ಸಾಕ್ಷ್ಯಗಳು ಸಿಕ್ಕಿವೆ ಎಂದು ಪೊಲೀಸರು ಅಫಿಡವಿಟ್‌ನಲ್ಲಿ ಮಾಹಿತಿ ನೀಡಿದ್ದಾರೆ.
ಹೆಸರು ಕೆಡಿಸುವ ಸಂಚು:
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಭೇಟಿ ವೇಳೆಯೇ ಆರೋಪಿಗಳು ದೇಶದಲ್ಲಿ ಕೋಮು ಗಲಭೆ ಸೃಷ್ಟಿಸಲು ಸಂಚು ರೂಪಿಸಿದ್ದರು. ಈ ಮೂಲಕ ವಿದೇಶಿ ಮಾಧ್ಯಮಗಳ ಗಮನ ಸೆಳೆದು ಸಿಎಎ ವಿಚಾರವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಲು ಯತ್ನಿಸಿದ್ದರು. ಇದೊಂದು ಯೋಜಿತ ದಂಗೆಯಾಗಿದ್ದು, ಉತ್ತರಪ್ರದೇಶ, ಅಸ್ಸಾಂ, ಪಶ್ಚಿಮ ಬಂಗಾಳ, ಕೇರಳ ಮತ್ತು ಕರ್ನಾಟಕದಲ್ಲೂ ಇದೇ ಮಾದರಿಯ ಗಲಭೆಗಳು ನಡೆದಿದ್ದವು ಎಂದು ಪೊಲೀಸರು ಹೇಳಿದ್ದಾರೆ.
ದಂಗೆಗಾಗಿ ಚಕ್ಕಾ ಜಾಮ್:
ಆರೋಪಿ ಉಮರ್ ಖಾಲಿದ್ ಚಕ್ಕಾ ಜಾಮ್ (ರಸ್ತೆ ತಡೆ) ಕಾರ್ಯಸೂಚಿಯ ಮೂಲಪುರುಷ ಆಗಿದ್ದ. ದೆಹಲಿ ಪ್ರತಿಭಟನೆ ಬೆಂಬಲ ಗುಂಪನ್ನು (ಡಿಪಿಎಸ್‌ಜಿ) ಈ ಷಡ್ಯಂತ್ರ ಜಾರಿಗೆಂದೇ ರೂಪಿಸಲಾಗಿತ್ತು. ಫೋಟೋಗ್ರಾಫ್, ಚಾಟ್ ದಾಖಲೆಗಳು ಇದಕ್ಕೆ ಸಾಕ್ಷಿ ಇವೆ.
ಇನ್ನು ದೆಹಲಿಯ ಸೀಲಾಂಪುರದಲ್ಲಿ ನಡೆದ ರಹಸ್ಯ ಸಭೆಯಲ್ಲಿ ಸ್ಥಳೀಯ ಮಹಿಳೆಯರಿಗೆ ಚೂರಿ, ಬಾಟಲಿ, ಆ್ಯಸಿಡ್, ಕಲ್ಲು, ಕಾರದಪುಡಿ ಮತ್ತು ಇತರೆ ಅಪಾಯಕಾರಿ ವಸ್ತು ಸಂಗ್ರಹಿಸಿಟ್ಟುಕೊಳ್ಳುವಂತೆ ಖಾಲಿದ್ ಇತರೆ ಆರೋಪಿಗಳಿಗೆ ನಿರ್ದೇಶಿಸಿದ್ದ. ಆದರೆ ಆತ ಬಯಸಿದ ಮಟ್ಟದಲ್ಲಿ ಆರಂಭದಲ್ಲಿ ದಂಗೆ ನಡೆಯದೇ ಹೋದಾಗ ಜಫ್ರಾಬಾದ್ ಪ್ರತಿಭಟನೆಯಲ್ಲಿ ಬಾಂಗ್ಲಾದೇಶಿ ಮಹಿಳೆಯರನ್ನು ಕರೆತಂದಿದ್ದ ಎಂದು ಅಫಿಡವಿಟ್ ನಲ್ಲಿ ಪೊಲೀಸರು ಮಾಹಿತಿ ನೀಡಿದ್ದಾರೆ..
ಮತ್ತೊಬ್ಬ ಆರೋಪಿ ಶಾರ್ಜಿಲ್ ಇಮಾಂ, 2019ರ ಡಿ.13 ಮತ್ತು 20ರ ನಡುವೆ ನಡೆದಿದ್ದ ಆರಂಭಿಕ ಹಂತದ ದಂಗೆಯ ಹಿಂದಿನ ಷಡ್ಯಂತ್ರಗಾರನಾಗಿದ್ದ. ಜಾಮಿಯಾ ಮಿಲ್ಲಾ ಇಸ್ಲಾಮಿಯಾ ಮತ್ತು ಅಸನ್‌ನ್ಸೋಲ್‌ನಲ್ಲಿ ಮಾಡಿದ ಭಾಷಣದಲ್ಲಿ ದೆಹಲಿಯಲ್ಲಿ ರಸ್ತೆ ತಡೆಗೆ ಕರೆ ನೀಡಿದ್ದ. ಈತ ಕೋಮುಗಲಭೆಗೆ ಪ್ರಚೋದನೆ ನೀಡುವ ರೀತಿ ಕರಪತ್ರ ಹಂಚುತ್ತಿದ್ದ ಮೂಲಭೂತವಾದಿ ಗುಂಪುಗಳ ಜತೆಗೂ ಸಂಪರ್ಕದಲ್ಲಿದ್ದ. ಜಾಮಿಯಾ ಮತ್ತು ಜೆಎನ್‌ಯು ವಿದ್ಯಾರ್ಥಿಗಳಿಗೆ ರಸ್ತೆ ತಡೆಗೆ ಪ್ರೋತ್ಸಾಹಿಸಿದ್ದ. 2020ರಲ್ಲಿ ಮಾಡಿದ್ದ ಭಾಷಣದಲ್ಲಿ ಮುಸ್ಲಿಂ ಬಾಹುಳ್ಯವಿರುವ ಪ್ರದೇಶಗಳನ್ನು ದೇಶದಿಂದ ಪ್ರತ್ಯೇಕಿಸುವ ಕರೆ ನೀಡಿದ್ದ ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.
ಪ್ರಕರಣ ಹಿನ್ನೆಲೆ:
ಸಿಎಎ ಕಾಯ್ದೆ ಮತ್ತು ಎನ್‌ಆರ್‌ಸಿ ವಿರೋಧಿಸಿ ದೆಹಲಿ ಸೇರಿ, ದೇಶಾದ್ಯಂತ ದಂಗೆ ನಡೆದಿತ್ತು. ದೆಹಲಿ ದಂಗೆಯಲ್ಲಿ 53 ಮಂದಿ ಮೃತಪಟ್ಟಿದ್ದು, 700ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈ ಸಂಬಂಧ ಖಾಲಿದ್, ಇಮಾಂ ಗುಲ್ಫಿಶಾ ಫಾತಿಮಾ, ಮೀರಂ ಹೈದರ್ ಮತ್ತಿತರರನ್ನು ಯುಎಪಿಎ (ಕಾನೂನು ವಿರೋಧಿ ಚಟುವಟಿಕೆಗಳ ತಡೆ ಕಾಯ್ದೆ) ಅಡಿ ಬಂಧಿಸಲಾಗಿದೆ. ಇವರ ಜಾಮೀನು ಅರ್ಜಿ ವಿಚಾರಣೆ ಶುಕ್ರವಾರ ನ್ಯಾಯಾಲಯದ ಮುಂದೆ ಬರಲಿದೆ.
ಏನಿದು ಕೇಸ್?
- 2020ರಲ್ಲಿ ದೆಹಲಿಯಲ್ಲಿ ಸಿಎಎ ವಿರೋಧಿಸಿ ದೊಡ್ಡ ಹೋರಾಟ ನಡೆದು ಹಿಂಸೆಗೆ ತಿರುಗಿತ್ತು
- ಆ ವೇಳೆ 53 ಮಂದಿ ಮೃತಪಟ್ಟಿದ್ದರು. ಉಮರ್ ಖಾಲಿದ್ ಸೇರಿ ಕೆಲವರ ಬಂಧನವಾಗಿತ್ತು
- ಆರೋಪಿಗಳ ಜಾಮೀನು ಅರ್ಜಿ ಸುಪ್ರೀಂನಲ್ಲಿ ವಿಚಾರಣೆಗೆ ಬಂದಾಗ ಪೊಲೀಸರ ವಿರೋಧ
- ದೇಶದ ಆಡಳಿತ ವ್ಯವಸ್ಥೆಯನ್ನೇ ಬದಲಾಯಿಸಲು ಸಿಎಎ ಹೆಸರಲ್ಲಿ ಷಡ್ಯಂತ್ರ ರೂಪಿಸಿದ್ದರು
- ಇವರೆಲ್ಲಾ ಜೈಲ್‌ನಲ್ಲೇ ಇರಬೇಕೇ ಹೊರತು, ಬೇಲ್ ಮೇಲೆ ಅಲ್ಲ ಎಂದು ಪೊಲೀಸರ ವಾದ
)
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))