ಸಾರಾಂಶ
ನವದೆಹಲಿ: ಹರ್ಯಾಣ, ಉತ್ತರಾಖಂಡ ಮತ್ತು ಪಶ್ಚಿಮ ಬಂಗಾಳದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅಡಿಯಲ್ಲಿ ಸರ್ಕಾರ ಪೌರತ್ವವನ್ನು ನೀಡಲು ಕೇಂದ್ರ ಸರ್ಕಾರ ಆರಂಭಿಸಿದೆ ಎಂದು ಕೇಂದ್ರ ಗೃಹಸಚಿವಾಲಯ ಬುಧವಾರ ತಿಳಿಸಿದೆ.
ಈ ಮೂರು ರಾಜ್ಯಗಳಲ್ಲಿನ ಅರ್ಜಿದಾರರಿಗೆ ಆಯಾ ರಾಜ್ಯ ಸಶಕ್ತ ಸಮಿತಿಯು ಪೌರತ್ವವನ್ನು ನೀಡಲಿದೆ ಎಂದು ತಿಳಿಸಿದೆ. ಕೆಲ ದಿನಗಳ ಹಿಂದಷ್ಟೇ ಸಿಎಎ ಅಡಿಯಲ್ಲಿ ಪೌರತ್ವ ಪ್ರಮಾಣಪತ್ರಗಳ ಮೊದಲ ಪ್ರಮಾಣಪತ್ರಗಳನ್ನು ಮೇ15 ರಂದು ಕೇಂದ್ರ ಗೃಹ ಕಾರ್ಯದರ್ಶಿಯವರು ನವದೆಹಲಿಯಲ್ಲಿ ಅರ್ಜಿದಾರರಿಗೆ ಹಸ್ತಾಂತರಿಸಿದ್ದರು.
ಪಶ್ಚಿಮ ಬಂಗಾಳದಲ್ಲಿ ಕಡೆಯ ಹಂತದ ಲೋಕಸಭಾ ಚುನಾವಣೆಗೂ ಮುನ್ನ ಕೇಂದ್ರ ಸರ್ಕಾರ ಈ ವಿಷಯ ಪ್ರಕಟಿಸಿದೆ. ರಾಜ್ಯದಲ್ಲಿ ಸಿಎಎ ಜಾರಿಯನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ತೀವ್ರವಾಗಿ ವಿರೋಧಿಸಿದೆ.
ಏನಿದು ಯೋಜನೆ?
ನೆರೆಯ ದೇಶಗಳಾದ ಪಾಕಿಸ್ತಾನ, ಆಫ್ಘಾನಿಸ್ತಾನ, ಬಾಂಗ್ಲಾದೇಶಗಳಲ್ಲಿ ಧಾರ್ಮಿಕ ಅಥವಾ ಇತರೆ ಕಾರಣಗಳಿಂದ ಕಿರುಕುಳ ಅನುಭವಿಸಿ 2014ರ ಡಿ.31 ರಂದು ಅಥವಾ ಅದಕ್ಕೂ ಮೊದಲು ಭಾರತಕ್ಕೆ ಬಂದ ಹಿಂದೂ, ಸಿಖ್, ಬೌದ್ಧ, ಸಿಖ್ ಮತ್ತು ಕ್ರೈಸ್ತ ವಲಸೆಗಾರರಿಗೆ ಭಾರತೀಯ ಪೌರತ್ವ ನೀಡಲು ಕೇಂದ್ರ ಸರ್ಕಾರ ಈ ಯೋಜನೆ ರೂಪಿಸಿದೆ.