30ನೇ ಬಾರಿ ಎವರೆಸ್ಟ್‌ ಏರಿದ ರೀಟಾ ಶೆರ್ಪಾ ದಾಖಲೆ

| Published : May 23 2024, 01:09 AM IST / Updated: May 23 2024, 04:05 AM IST

ಸಾರಾಂಶ

ನೇಪಾಳದ ಪರ್ವತಾರೋಹಿ ಕಾಮಿ ರೀಟಾ ಶೆರ್ಪಾ 10 ದಿನದಲ್ಲಿ ಎರಡನೇ ಬಾರಿ ಎವರೆಸ್ಟ್ ಶಿಖರವನ್ನೇರುವ ಮೂಲಕ 30ನೇ ಬಾರಿಗೆ ಮೌಂಟ್ ಎವರೆಸ್ಟ್‌ ಏರಿದ ಸಾಧನೆಯನ್ನು ಮಾಡಿದ್ದಾರೆ.

ಕಾಠ್ಮಂಡು: ನೇಪಾಳದ ಪರ್ವತಾರೋಹಿ ಕಾಮಿ ರೀಟಾ ಶೆರ್ಪಾ 10 ದಿನದಲ್ಲಿ ಎರಡನೇ ಬಾರಿ ಎವರೆಸ್ಟ್ ಶಿಖರವನ್ನೇರುವ ಮೂಲಕ 30ನೇ ಬಾರಿಗೆ ಮೌಂಟ್ ಎವರೆಸ್ಟ್‌ ಏರಿದ ಸಾಧನೆಯನ್ನು ಮಾಡಿದ್ದಾರೆ. ಇದರ ಜೊತೆಗೆ ತಮ್ಮ ಈ ಹಿಂದಿನ ದಾಖಲೆಯನ್ನು ಕೇವಲ ಹತ್ತೇ ದಿನದಲ್ಲಿ ಮುರಿದಿದ್ದಾರೆ.

54 ವರ್ಷದ ಪರ್ವತಾರೋಹಿ ಕಾಮಿ ಸ್ಥಳೀಯ ಕಾಲಮಾನ ಬೆಳಿಗ್ಗೆ 7.49ರ ಹೊತ್ತಿಗೆ 8,849 ಅಡಿ ಎತ್ತರದ ಶಿಖರವನ್ನೇರಿದ್ದಾರೆ. ಕೇವಲ 10 ದಿನಗಳ ಹಿಂದೆ ಅಂದರೆ ಮೇ.12 ರಂದು ಕಾಮಿ 29ನೇ ಬಾರಿಗೆ ಜಗತ್ತಿನ ಅತ್ಯುನ್ನತ ಶಿಖರವನ್ನೇರುವ ಮೂಲಕ ಅತಿ ಹೆಚ್ಚು ಬಾರಿ ಮೌಂಟ್ ಎವರೆಸ್ಟ್ ಏರಿದ ಸಾಧನೆ ಮಾಡಿ ದಾಖಲೆ ಬರೆದಿದ್ದರು. ಇದೀಗ ಅವರೇ ತಮ್ಮ ಈ ಹಿಂದಿನ ದಾಖಲೆ ಮುರಿದಿದ್ದಾರೆ.

ಹಿರಿಯ ಪರ್ವತಾರೋಹಿ ಕಾಮಿ 1992ರಲ್ಲಿ ಮೊದಲ ಬಾರಿಗೆ ಮೌಂಟ್ ಎವರೆಸ್ಟ್‌ ಶಿಖರವನ್ನೇರಿದ್ದರು. ಕಳೆದ ವರ್ಷ ಇದೇ ಋತುವಿನಲ್ಲಿ 27 ಹಾಗೂ 28ನೇ ಸಲ ಎವರೆಸ್ಟ್‌ ತುತ್ತ ತುದಿ ತಲುಪಿದ್ದರು.