ಸಾರಾಂಶ
ನವದೆಹಲಿ: ಅಲ್‌ಖೈದಾ ನಾಯಕ ಒಸಾಮಾ ಬಿನ್ ಲಾಡೆನ್ ಹತ್ಯೆಯಾದ ಪಾಕಿಸ್ತಾನದ ಅಬೋಟಾಬಾದ್ ನಗರದಲ್ಲಿ ಇದೀಗ ಪಾಕಿಸ್ತಾನದ 3 ಉಗ್ರ ಸಂಘಟನೆಗಳು ಜಂಟಿ ತರಬೇತಿ ಕೇಂದ್ರ ತೆರೆದಿರುವ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ.
ಪಾಕಿಸ್ತಾನ ಸೇನೆಗೆ ಸೇರಿದ ವಿಶಾಲವಾದ ಜಾಗವೊಂದರಲ್ಲಿ ಲಷ್ಕರ್ ಎ ತೊಯ್ಬಾ, ಹಿಜ್ಬುಲ್ ಮುಜಾಹಿದೀನ್ ಮತ್ತು ಜೈಷ್ ಎ ಮೊಹಮ್ಮದ್ ಸಂಘಟನೆಗಳು ಈ ತರಬೇತಿ ಕೇಂದ್ರ ನಡೆಸುತ್ತಿವೆ ಎಂದು ಗುಪ್ತಚರ ಮೂಲಗಳನ್ನು ಉಲ್ಲೇಖಿಸಿ ಎನ್‌ಡಿಟೀವಿ ವರದಿ ಮಾಡಿದೆ.
ಈ ತರಬೇತಿ ಕ್ಯಾಂಪ್, 2011ರಲ್ಲಿ ಅಮೆರಿಕದ ದಾಳಿಗೆ ಒಸಾಮಾ ಬಿನ್ ಲಾಡೆನ್ ಹತ್ಯೆಯಾದ ಮನೆಯನ್ನು ಧ್ವಂಸ ಮಾಡಿದ ಜಾಗದಲ್ಲೇ ನಡೆಸಲಾಗುತ್ತಿದೆಯಾ? ಅಥವಾ ಬೇರೆ ಸ್ಥಳದಲ್ಲಾ ಎಂಬುದು ಖಚಿತಪಟ್ಟಿಲ್ಲ. ‘ಆದರೆ ಪಾಕಿಸ್ತಾನ ಸೇನೆಯ ಜನರಲ್ ಹುದ್ದೆಯ ಅಧಿಕಾರಿಯೊಬ್ಬರು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಸೂಚನೆ ಅನ್ವಯ ಈ ತರಬೇತಿ ಕ್ಯಾಂಪ್‌ನ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ‘ ಎಂದು ವರದಿ ಹೇಳಿದೆ.
ಪಾಕಿಸ್ತಾನದ ಸೇನೆಗೆ ಸೇರಿದ ಜಾಗದಲ್ಲೇ ತರಬೇತಿ ಕ್ಯಾಂಪ್ ಇರುವ ಕಾರಣ, ಅದು ಸೇನೆಗೆ ಗಮನಕ್ಕೆ ಬಾರದೇ ನಡೆಯುತ್ತಿರುವ ಸಾಧ್ಯತೆಯಂತೂ ಇಲ್ಲವೇ ಇಲ್ಲ. ಜೊತೆಗೆ ಸೇನೆಯ ಕ್ಯಾಂಪ್ ಸಮೀಪದಲ್ಲೇ ಈ ಉಗ್ರರ ಕ್ಯಾಂಪ್ ಇರುವ ಕಾರಣ ಅದಕ್ಕೂ ಎಲ್ಲಾ ರೀತಿಯ ಭದ್ರತೆ ಇದೆ. ಈ ಕ್ಯಾಂಪ್‌ನಲ್ಲಿ ಪುರುಷರು ಮತ್ತು ಮಹಿಳೆಯರು ಇಬ್ಬರಿಗೂ ಶಸ್ತ್ರಾಸ್ತ್ರ ಬಳಕೆ ಸೇರಿದಂತೆ ಭಯೋತ್ಪಾದನೆಗೆ ಸಂಬಂಧಿಸಿದ ವಿವಿಧ ಚಟುವಟಿಕೆಗಳ ಬಗ್ಗೆ ತರಬೇತಿ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಲಷ್ಕರ್ ಎ ತೊಯ್ಬಾ ಸಂಘಟನೆಗೆ ಹಫೀಜ್ ಸಯೀದ್, ಹಿಜ್ಬುಲ್ಲಾ ಸಂಘಟನೆಗೆ ಸಯ್ಯದ್ ಸಲಾಹುದ್ದೀನ್, ಮತ್ತು ಜೈಷ್ ಎ ಮೊಹಮ್ಮದ್ ಸಂಘಟನೆಗೆ ಮಸೂದ್ ಅಜರ್ ಮುಖ್ಯಸ್ಥರಾಗಿದ್ದು, ಈ ಮೂವರೂ ವಿವಿಧ ಪ್ರಕರಣಗಳಲ್ಲಿ ಭಾರತದ ತನಿಖಾ ಸಂಸ್ಥೆಗಳಿಗೆ ಬೇಕಾಗಿದ್ದಾರೆ.