ಅಮೆರಿಕದಲ್ಲಿ ಮತ್ತೆ ಸ್ವರ್ಣಯುಗ: ಟ್ರಂಪ್‌ ಭರವಸೆ

| Published : Nov 06 2024, 11:54 PM IST / Updated: Nov 06 2024, 11:55 PM IST

ಅಮೆರಿಕದಲ್ಲಿ ಮತ್ತೆ ಸ್ವರ್ಣಯುಗ: ಟ್ರಂಪ್‌ ಭರವಸೆ
Share this Article
  • FB
  • TW
  • Linkdin
  • Email

ಸಾರಾಂಶ

ಆರಂಭಿಕ ಹಿನ್ನಡೆಯ ಹೊರತಾಗಿಯೂ ಚುನಾವಣೆಯಲ್ಲಿ ರೋಚಕ ಗೆಲುವು ಕಂಡು ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌, ದೇಶವನ್ನು ಮತ್ತೆ ಸ್ವರ್ಣಯುಗದತ್ತ ಕೊಂಡೊಯ್ಯುವ ಭರವಸೆ ನೀಡಿದ್ದಾರೆ.

ವಾಷಿಂಗ್ಟನ್‌: ಆರಂಭಿಕ ಹಿನ್ನಡೆಯ ಹೊರತಾಗಿಯೂ ಚುನಾವಣೆಯಲ್ಲಿ ರೋಚಕ ಗೆಲುವು ಕಂಡು ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌, ದೇಶವನ್ನು ಮತ್ತೆ ಸ್ವರ್ಣಯುಗದತ್ತ ಕೊಂಡೊಯ್ಯುವ ಭರವಸೆ ನೀಡಿದ್ದಾರೆ. ಅಲ್ಲದೆ ಈ ಚುನಾವಣೆಗೆ ತಮಗೆ ಸಿಕ್ಕ ಬಹುಮತ, ಕಂಡುಕೇಳರಿಯದ್ದು ಮತ್ತು ಅತ್ಯಂತ ಶಕ್ತಿಶಾಲಿಯಾದದ್ದು ಎಂದು ಬಣ್ಣಿಸಿದ್ದಾರೆ.

ಅಧ್ಯಕ್ಷರಾಗಿ ಆಯ್ಕೆಯಾಗುತ್ತಲೇ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್‌, ‘ಇದು ನಿಜವಾಗಿಯೂ ಅಮೆರಿಕಕ್ಕೆ ಸ್ವರ್ಣಯುಗ. ಈ ಅಮೋಘ ಗೆಲುವು, ಅಮೆರಿಕವನ್ನು ಮತ್ತೊಮ್ಮೆ ಅತ್ಯದ್ಭುತ ದೇಶವನ್ನಾಗಿ ಮಾಡಲು ನಮಗೆಲ್ಲರಿಗೂ ನೆರವಾಗಲಿದೆ’ ಎಂದು ಬಣ್ಣಿಸಿದ್ದಾರೆ.

‘ನಿಜವಾಗಿ ಹೇಳಬೇಕೆಂದರೆ ಇದು ಹಿಂದೆಂದೂ ಯಾರೂ ಕಾಣದ ಆಂದೋಲನವಾಗಿತ್ತು. ಇದು ಸಾರ್ವಕಾಲಿಕ ಶ್ರೇಷ್ಠ ರಾಜಕೀಯ ಅಭಿಯಾನವಾಗಿತ್ತು. ಇಂಥದ್ದು ಹಿಂದೆಯೂ ಆಗಿರಲಿಲ್ಲ, ಮುಂದೆ ಆಗುವುದೂ ಅನುಮಾನ. ನಾವೀಗ ನೆರವಿನ ಅತ್ಯಂತ ದಯನೀಯ ನಿರೀಕ್ಷೆಯಲ್ಲಿರುವ ದೇಶದಲ್ಲಿದ್ದೇವೆ. ಅದನ್ನು ಸರಿಪಡಿಸಲು ನಾವು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಿದ್ದೇವೆ. ನಾವು ಶೀಘ್ರವೇ ನಮ್ಮ ಗಡಿಗಳನ್ನು ಬಲಪಡಿಸಲಿದ್ದೇವೆ. ನಮ್ಮ ದೇಶವನ್ನು ಎಲ್ಲಾ ಆಯಾಮಗಳಲ್ಲೂ ರಕ್ಷಣೆ ಮಾಡಲಿದ್ದೇವೆ. ಇದಕ್ಕಾಗಿಯೇ ನಾವು ಇಂದು ಇತಿಹಾಸ ರಚಿಸಿದ್ದೇವೆ. ದೇಶವನ್ನು ಇನ್ನಷ್ಟು ಉಚ್ಚ್ರಾಯ ಸ್ಥಿತಿಗೆ ಕೊಂಡೊಯ್ಯಲು ಎಲ್ಲಾ ಪ್ರಯತ್ನ ಮಾಡಲಿದ್ದೇವೆ’ ಎಂದು ಟ್ರಂಪ್‌ ಭರವಸೆ ನೀಡಿದರು.

ದೇಶದ ಪ್ರತಿ ನಾಗರಿಕರಿಗೂ, ನಾನು ನಿಮ್ಮ ಪರವಾಗಿ, ನಿಮ್ಮ ಕುಟುಂಬದ ಪರವಾಗಿ, ನಿಮ್ಮ ಭವಿಷ್ಯದ ಪರವಾಗಿ ಹೋರಾಡುತ್ತೇನೆ ಎಂದು ಭರವಸೆ ನೀಡುತ್ತೇನೆ. ಪ್ರತಿ ದಿನ ಕೂಡಾ ನಾನು ನಿಮಗಾಗಿ ಹೋರಾಡುತ್ತೇನೆ. ಅತ್ಯಂತ ಶಕ್ತಿಯುತವಾದ, ಸುರಕ್ಷಿತವಾದ ಮತ್ತು ಸಂಪದ್ಭರಿತ ಅಮೆರಿಕ ನಿರ್ಮಾಣ ಮಾಡಲು ನನ್ನ ಕೊನೆಯ ಉಸಿರಿನವರೆಗೂ ಹೋರಾಡುವ ಭರವಸೆಯನ್ನು ನಾನು ನೀಡುತ್ತೇನೆ. ಏಕೆಂದರೆ ನಮ್ಮ ಮಕ್ಕಳು ಮತ್ತು ಅಮೆರಿಕ ಅದಕ್ಕೆ ಅರ್ಹವಾಗಿದೆ. ಇದು ಅಕ್ಷರಶಃ ಅಮೆರಿಕದ ಪಾಲಿಗೆ ಸುವರ್ಣಯುಗವಾಗಲಿದೆ. ನಾವೆಲ್ಲಾ ಸೇರಿ ಅಮೆರಿಕವನ್ನು ಶ್ರೇಷ್ಠ ದೇಶವನ್ನಾಗಿ ಮಾಡೋಣ’ ಎಂದು ಟ್ರಂಪ್‌ ಹೇಳಿದರು.

==

ಟ್ರಂಪ್‌ ಅಮೆರಿಕದ ಅತಿ ಹಿರಿಯ ಅಧ್ಯಕ್ಷ!

ನ್ಯೂಯಾರ್ಕ್‌: ಇದೀಗ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೊನಾಲ್ಡ್‌ ಟ್ರಂಪ್‌, ಆ ದೇಶ ಕಂಡ ಅತಿ ಹಿರಿಯ ಅಧ್ಯಕ್ಷ ಎನಿಸಿಕೊಂಡಿದ್ದಾರೆ.ಎರಡನೇ ಬಾರಿಗೆ ಅಧ್ಯಕ್ಷರಾಗಿರುವ ಟ್ರಂಪ್‌ಗೆ ಈಗ 78 ವರ್ಷವಾಗಿದ್ದು, ಇವರ ಅಧಿಕಾರಾವಧಿ ಮುಕ್ತಾಯವಾಗುವ ಹೊತ್ತಿಗೆ 82 ಹರೆಯದವರಾಗಿರುತ್ತಾರೆ. 2016ರಲ್ಲಿ ಟ್ರಂಪ್‌ ಮೊದಲ ಬಾರಿ ಈ ಹುದ್ದೆಗೇರಿದಾಗ ಅವರಿಗೆ 70 ವರ್ಷವಾಗಿತ್ತು.

ಅತ್ತ ಮಾಜಿ ಅಧ್ಯಕ್ಷ ಜೋ ಬೈಡನ್‌ ಅಧಿಕಾರ ವಹಿಸಿಕೊಂಡಾಗ 77 ವರ್ಷದವರಾಗಿದ್ದು, ಈಗ 81ನೇ ವಯಸ್ಸಿಗೆ ನಿವೃತ್ತರಾಗಿದ್ದಾರೆ.

==

ದೇಶಕ್ಕಾಗಿ ದೇವರೇ ನನ್ನ ಜೀವ ಕಾಪಾಡಿದ: ಟ್ರಂಪ್‌

ವಾಷಿಂಗ್ಟನ್‌: ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಡೊನಾಲ್ಡ್‌ ಟ್ರಂಪ್‌, ದೇವರು ಒಂದು ಕಾರಣಕ್ಕಾಗಿ ನನ್ನ ಜೀವ ಕಾಪಾಡಿದ ಎಂದು ಸ್ಮರಿಸಿದ್ದಾರೆ.

ಗೆಲುವಿನ ಬೆನ್ನಲ್ಲೇ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್‌, ಜು.13ರಂದು ವ್ಯಕ್ತಿಯೊಬ್ಬ ತಮ್ಮ ಮೇಲೆ ನಡೆಸಿದ ಗುಂಡಿನ ದಾಳಿಯನ್ನು ನೆನಪಿಸಿಕೊಂಡು, ’ದೇವರು ನನ್ನ ಜೀವ ಕಾಪಾಡಿದ. ಅದು ಒಂದು ಉದ್ದೇಶಕ್ಕಾಗಿ (ಚುನಾವಣೆಯಲ್ಲಿ ಗೆದ್ದು ದೇಶ ಸೇವೆ ಮಾಡುವುದಕ್ಕಾಗಿ) ಎಂದು ಸ್ಮರಿಸಿದರು.

ಚುನಾವಣಾ ಪ್ರಚಾರದ ವೇಳೆ ವ್ಯಕ್ತಿಯೊಬ್ಬ ಹಾರಿಸಿದ ಗುಂಡು ಅದೃಷ್ಟವಶಾತ್‌ ಅವರ ತಲೆಗೆ ತಾಗದೇ ಕಿವಿಗೆ ತಗುಲಿತ್ತು. ಹೀಗಾಗಿ ಟ್ರಂಪ್‌ ಜೀವ ಉಳಿದಿತ್ತು.