ಲಂಡನ್‌ನಲ್ಲಿ ಪಾಕಿಸ್ತಾನದ ಆಂತರಿಕ ಸಚಿವ ಮೊಹ್ಸಿನ್ ನಖ್ವಿ ಅವರ ಕಾರನ್ನು ಸ್ಪೋಟಕಗಳನ್ನು ಇರಿಸಿರುವ ಸಂಶಯದ ಮೇರೆಗೆ ಪೊಲೀಸರು ತಪಾಸಣೆ ನಡೆಸಿದ್ದಾರೆ. ಇದು ಪಾಕಿಸ್ತಾನಕ್ಕೆ ರಾಜತಾಂತ್ರಿಕವಾಗಿ ದೊಡ್ಡ ಮಟ್ಟಿಗಿನ ಮುಜುಗರಕ್ಕೆ ಕಾರಣವಾಗಿದೆ.

ಲಂಡನ್: ಲಂಡನ್‌ನಲ್ಲಿ ಪಾಕಿಸ್ತಾನದ ಆಂತರಿಕ ಸಚಿವ ಮೊಹ್ಸಿನ್ ನಖ್ವಿ ಅವರ ಕಾರನ್ನು ಸ್ಪೋಟಕಗಳನ್ನು ಇರಿಸಿರುವ ಸಂಶಯದ ಮೇರೆಗೆ ಪೊಲೀಸರು ತಪಾಸಣೆ ನಡೆಸಿದ್ದಾರೆ. ಇದು ಪಾಕಿಸ್ತಾನಕ್ಕೆ ರಾಜತಾಂತ್ರಿಕವಾಗಿ ದೊಡ್ಡ ಮಟ್ಟಿಗಿನ ಮುಜುಗರಕ್ಕೆ ಕಾರಣವಾಗಿದೆ. 

ಲಂಡನ್‌ ಪೊಲೀಸರು ಕಾರುಗಳಲ್ಲಿ ಸ್ಪೋಟಕಗಳನ್ನು ಇರಿಸಲಾಗಿದೆ ಎನ್ನುವ ಸಂಶಯದ ಮೇರೆಗೆ ಎಲ್ಲಾ ಕಾರುಗಳನ್ನು ನಿಯಮಿತವಾಗಿ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಲಂಡನ್‌ ಪ್ರವಾಸದಲ್ಲಿದ್ದ ಮೊಹ್ಸಿನ್‌ ನಖ್ವಿಯವರ ಕಾರು ಬ್ರಿಟನ್‌ ವಿದೇಶಾಂಗ ಕಚೇರಿಯ ಹೊರ ಭಾಗದಲ್ಲಿ ನಿಂತಿತ್ತು. ನಖ್ವಿ ಕೂಡ ಕಾರಿನೊಳಗಿದ್ದರು. ಆದರೂ ಪೊಲೀಸರು ಕಾರಿನ ಬಾನೆಟ್‌ ಹಾಗೂ ಒಳಭಾಗವನ್ನು ಶೋಧಿಸಿದ್ದಾರೆ.

ಮೋದಿಗೆ ಇಸ್ರೇಲ್ ಪಿಎಂ ಕರೆ: ಗಾಜಾ ಶಾಂತಿ ಸೇರಿ ಹಲವು ವಿಷಯಗಳ ಚರ್ಚೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ಇಸ್ರೇಲ್ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಬುಧವಾರ ದೂರವಾಣಿ ಮೂಲಕ ಮಾತನಾಡಿ, ಕಾರ್ಯತಂತ್ರದ ಪಾಲುದಾರಿಕೆ, ಗಾಜಾದಲ್ಲಿ ಶಾಂತಿಸ್ಥಾಪನೆ, ಉಗ್ರವಾದ ನಿರ್ಮೂಲನೆ ಸೇರಿ ಹಲವು ವಿಚಾರಗಳನ್ನು ಚರ್ಚಿಸಿದ್ದಾರೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಪ್ರಧಾನಮಂತ್ರಿಗಳ ಕಚೇರಿ (ಪಿಎಂಒ), ‘ಗಾಜಾ ಶಾಂತಿ ಯೋಜನೆಯ ಅನುಷ್ಠಾನ ಸೇರಿದಂತೆ ಶಾಂತಿಸ್ಥಾಪನೆಯ ಎಲ್ಲ ಪ್ರಯತ್ನಗಳಿಗೆ ಭಾರತದ ಬೆಂಬಲವನ್ನು ಪ್ರಧಾನಿ ಮೋದಿ ಪುನರುಚ್ಚರಿಸಿದ್ದಾರೆ. ಭಾರತ-ಇಸ್ರೇಲ್ ಕಾರ್ಯತಂತ್ರದ ಪಾಲುದಾರಿಕೆ ಬಗ್ಗೆ ಇಬ್ಬರೂ ನಾಯಕರು ತೃಪ್ತಿ ವ್ಯಕ್ತಪಡಿಸಿದ್ದು, ಸಂಬಂಧ ಬಲವರ್ಧನೆಗೆ ಒತ್ತುಕೊಟ್ಟಿದ್ದಾರೆ. ಉಗ್ರವಾದಕ್ಕೆ ಶೂನ್ಯ ಸಹಿಷ್ಣುತೆಯನ್ನು ವ್ಯಕ್ತಪಡಿಸಿದ್ದಾರೆ’ ಎಂದು ತಿಳಿಸಿದೆ.

ಬ್ರಿಟಿಷರಿಗೆ ತಲೆಬಾಗಿದರು ಎನ್ನಲಾದ ಸಾವರ್ಕರ್‌ ಪ್ರಶಸ್ತಿ ಸ್ವೀಕರಿಸಲ್ಲ: ತರೂರ್‌

ತಿರುವನಂತಪುರ/ನವದೆಹಲಿ: ವಿ.ಡಿ.ಸಾವರ್ಕರ್‌ ಹೆಸರಿನ ಪ್ರಶಸ್ತಿಯನ್ನು ತಾವು ಸ್ವೀಕರಿಸುವುದಿಲ್ಲ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್‌ ಬುಧವಾರ ನಯವಾಗಿ ತಿರಸ್ಕರಿಸಿದ್ದಾರೆ. ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ತರೂರ್‌, ಕಾಂಗ್ರೆಸ್‌ ಸಂಸದರು ಬ್ರಿಟಿಷರ ಮುಂದೆ ತಲೆಬಾಗಿದರು ಎನ್ನಲಾದ ಸಿದ್ಧಾಂತವಾದಿ ಹೆಸರಿನ ಯಾವುದೇ ಗೌರವ ಸ್ವೀಕರಿಸಬಾರದು ಎಂದು ಪಕ್ಷದ ಹಿರಿಯ ಸಹೋದ್ಯೋಗಿಯೊಬ್ಬರು ಬಯಸಿದ್ದಾರೆ. ಅಲ್ಲದೆ ಪ್ರಶಸ್ತಿಯ ಸ್ವರೂಪ, ನೀಡುವ ಸಂಸ್ಥೆಯ ಬಗ್ಗೆ ಸ್ಪಷ್ಟೀಕರಣಗಳ ಅನುಪಸ್ಥಿತಿಯಲ್ಲಿ ತಾನು ‘ವೀರ ಸಾವರ್ಕರ್‌ ಪ್ರಶಸ್ತಿ’ ಸ್ವೀಕರಿಸುವುದಿಲ್ಲ. ಅದರ ಸಮಾರಂಭಕ್ಕೂ ಹೋಗುವುದಿಲ್ಲ ಎಂದಿದ್ದಾರೆ. ಕಾಂಗ್ರೆಸ್‌ ಸದಸ್ಯರು ಯಾರೂ ಸಾವರ್ಕರ್‌ ಹೆಸರಿನ ಪ್ರಶಸ್ತಿ ಸ್ವೀಕರಿಸಬಾರದು ಎಂದು ಕಾಂಗ್ರೆಸ್‌ ನಾಯಕ ಮುರುಳೀಧರನ್‌ ಹಿಂದಿನ ದಿನ ಹೇಳಿದ್ದರು.

ಮಾಜಿ ಪಿಎಂ ಇಮ್ರಾನ್, ಪಿಟಿಐ ಪಕ್ಷಕ್ಕೆ ನಿರ್ಬಂಧ: ಸೋದರಿ ಭೇಟಿಗಿಲ್ಲ ಚಾನ್ಸ್‌

ಇಸ್ಲಾಮಾಬಾದ್‌: ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಮತ್ತು ಅವರ ಅಧ್ಯಕ್ಷತೆಯ ಪಾಕಿಸ್ತಾನ್ ತೆಹ್ರೀಕ್ - ಇ- ಇನ್ಸಾಫ್ (ಪಿಟಿಐ) ಪಕ್ಷಕ್ಕೆ ನಿಷೇಧ ಹೇರುವ ಮಸೂದೆಯನ್ನು ಪಾಕಿಸ್ತಾನ ಪಂಜಾಬ್‌ ವಿಧಾನಸಭೆ ಅಂಗೀಕರಿಸಿದೆ. ‘ಇಮ್ರಾನ್‌ ಮತ್ತು ಪಿಟಿಐ ಶತ್ರು ರಾಷ್ಟ್ರದ ಸಾಧನ. ಖಾನ್ ಪಾಕ್‌ ವಿರೋಧಿ ಹೇಳಿಕೆ ನೀಡುತ್ತಿದ್ದಾರೆ. ಈ ಮೂಲಕ ದೇಶದಲ್ಲಿ ಅವ್ಯವಸ್ಥೆ ಮತ್ತು ಅರಾಜಕತೆ ಹರಡುತ್ತಿದ್ದಾರೆ’ ಎನ್ನುವ ಕಾರಣ ನೀಡಿ ನಿಷೇಧ ಹೇರಲಾಗಿದೆ. ಈ ನಡುವೆ ರಾವಲ್ಪಿಂಡಿ ಜೈಲಿನಲ್ಲಿರುವ ಇಮ್ರಾನ್ ಭೇಟಿಗೆ ಅವರ ಸೋದರಿಗೆ ಅವಕಾಶ ನಿರಾಕರಿಸಲಾಗಿದೆ. ಇದರ ವಿರುದ್ಧ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

150 ಕೋಟಿ ಜನ, ಹಲವು ಭಾಷೆ: ವೈವಿಧ್ಯದಲ್ಲಿ ಏಕತೆ ಭಾರತದ್ದು: ಪುಟಿನ್‌

ನವದೆಹಲಿ: ಇತ್ತೀಚೆಗಷ್ಟೇ ಭಾರತಕ್ಕೆ ಭೇಟಿ ನೀಡಿದ್ದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ ಇಲ್ಲಿನ ವಿವಿಧತೆಯಲ್ಲಿ ಏಕತೆ ಪರಿಕಲ್ಪನೆಗೆ ಫಿದಾ ಆಗಿದ್ದಾರೆ. ಹಿಂದಿ ಮಾತ್ರವಲ್ಲದೇ ಭಾರತದಲ್ಲಿನ ಬಹು ಭಾಷೆ ಸಂಸ್ಕೃತಿ ಶ್ಲಾಘಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಪುಟಿನ್‌, ‘ಭಾರತದಲ್ಲಿ 150 ಕೋಟಿ ಜನರಿದ್ದಾರೆ, ಆದರೆ ಅವರಲ್ಲಿ 50-60 ಕೋಟಿ ಜನರಷ್ಟೇ ಹಿಂದಿ ಮಾತನಾಡುತ್ತಾರೆ. ಉಳಿದವರು ಬೇರೆ ಬೇರೆ ಭಾಷೆಗಳನ್ನು ಬಲ್ಲವರು. ಪರಸ್ಪರ ಅರ್ಥವಾಗುವುದಿಲ್ಲ. ಆದರೂ ವಿವಿಧತೆಯಲ್ಲಿ ಏಕತೆ ಪ್ರದರ್ಶಿಸುತ್ತಾರೆ. ಭಾರತದಂತಹ ವಿಸ್ತಾರ ರಾಷ್ಟ್ರಕ್ಕೆ ಇಂತಹ ಏಕತೆ ಕಾಪಾಡಿಕೊಳ್ಳುವುದು ನಿರ್ಣಾಯಕ’ ಎಂದಿದ್ದಾರೆ.