ಸಾರಾಂಶ
ಟೆಲ್ ಅವಿವ್: ಇಸ್ರೇಲ್-ಹಮಾಸ್ ಯುದ್ಧಕ್ಕೆ ಸೋಮವಾರ 1 ವರ್ಷ ಆಗಲಿದ್ದು, ಇದಕ್ಕಿಂತ 1 ದಿನ ಮುಂಚೆ ಭಾನುವಾರ ಇಸ್ರೇಲ್ ಹಾಗೂ ಪ್ಯಾಲೇಸ್ತೀನ್ ನಡುವೆ ಕಾದಾಟ ತೀವ್ರಗೊಂಡಿದೆ. ಗಾಜಾದಲ್ಲಿ ಹಮಾಸ್ ಉಗ್ರರ ತಾಣವಾಗಿದೆ ಎನ್ನಲಾದ ಮಸೀದಿ ಮತ್ತು ಲೆಬನಾನ್‌ನಲ್ಲಿ ಹಿಜ್ಬುಲ್ಲಾ ಉಗ್ರರ ನೆಲೆಯಾಗಿದೆ ಎನ್ನಲಾದ ಕಟ್ಟಡಗಳ ಮೇಲೆ ಇಸ್ರೇಲ್ ಭಾನುವಾರ ದಾಳಿ ನಡೆಸಿದೆ. ಈ ಪ್ರತ್ಯೇಕ ದಾಳಿಗಳಲ್ಲಿ ಕನಿಷ್ಠ 47 ಜನರು ಸಾವನ್ನಪ್ಪಿದ್ದಾರೆ.
ಮತ್ತೊಂದೆಡೆ, ಇಸ್ರೇಲ್‌ನ ಬೀರ್‌ಶೇಬಾ ಎಂಬಲ್ಲಿ ಭಯೋತ್ಪಾದಕ ದಾಳಿ ನಡೆದಿದೆ. ಇದರಲ್ಲಿ ಒಬ್ಬಳು ಸಾವನ್ನಪ್ಪಿದ್ದಾಳೆ ಮತ್ತು 11 ಮಂದಿ ಗಾಯಗೊಂಡಿದ್ದಾರೆ. ಆದರೆ ದಾಳಿ ನಡೆಸಿದ ಭಯೋತ್ಪಾದಕನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಇನ್ನೊಂದು ಕಡೆ ಇಸ್ರೇಲ್ ಮೇಲೆ ಗಾಜಾದಿಂದ ಹಮಾಸ್ ಕ್ಷಿಪಣಿಗಳನ್ನು ಹಾರಿಸಿದೆ.
ಭಾನುವಾರ ಇಸ್ರೇಲ್‌ನ ಬೀರ್‌ಶೆಬಾದ ಕೇಂದ್ರ ಬಸ್ ನಿಲ್ದಾಣದಲ್ಲಿ ಭಯೋತ್ಪಾದಕನೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ. ಆಗ ಸ್ಥಳಕ್ಕೆ ಭದ್ರತಾ ಪಡೆಗಳು ಆಗಮಿಸಿ ದಾಳಿಕೋರನ ಮೇಲೇ ಪ್ರತಿದಾಳಿ ಮಾಡಿ ಆತನನ್ನು ಸಾಯಿಸಿವೆ. ಗುಂಡಿನ ದಾಳಿಯು 1 ವಾರದಲ್ಲಿ ಇಸ್ರೇಲ್‌ನಲ್ಲಿ ನಡೆದ 2ನೇ ಭಯೋತ್ಪಾದಕ ದಾಳಿ ಆಗಿದೆ. ಕಳೆದ ಮಂಗಳವಾರ ಮೊದಲ ದಾಳಿ ನಡೆದಿತ್ತು.
ಗಾಜಾದಿಂದ ಕ್ಷಿಪಣಿ ಮಳೆ:
ಇನ್ನೊಂದು ಕಡೆ ಇಸ್ರೇಲ್ ಮೇಲೆ ಗಾಜಾದಿಂದ ಹಮಾಸ್ ಉಗ್ರರು ಕ್ಷಿಪಣಿಗಳನ್ನು ಹಾರಿಸಿದ್ದಾರೆ. 1 ಕ್ಷಿಪಣಿಯನ್ನು ಪ್ರತಿರೋಧಕ ಬಳಸಿ ಹೊಡೆದುರುಳಿಸಲಾಗಿದೆ. ಇನ್ನು ಉಳಿದ ಕ್ಷಿಪಣಿಗಳು ಬಯಲು ಪ್ರದೇಶದಲ್ಲಿ ಬಿದ್ದಿವೆ. ಯಾರಿಗೂ ಅಪಾಯ ಆಗಿಲ್ಲ ಎಂದು ಇಸ್ರೇಲಿ ಸೇನೆ ಹೇಳಿದೆ.