ಚುನಾವಣ ಅಕ್ರಮ ತನಿಖೆಗೆ ಉನ್ನತ ಮಟ್ಟದ ಸಮಿತಿ ರಚಿಸಿದ ಪಾಕ್‌ ಆಯೋಗ

| Published : Feb 19 2024, 01:30 AM IST

ಸಾರಾಂಶ

ಪಾಕಿಸ್ತಾನ ಚುನಾವಣೆಯಲ್ಲಿ ನಡೆದಿರುವ ಅಕ್ರಮಗಳ ಕುರಿತು ಸಮಗ್ರ ತನಿಖೆ ನಡೆಸಲು ಚುನಾವಣಾ ಆಯೋಗವು ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಿದೆ.

ಇಸ್ಲಾಮಾಬಾದ್‌: ಇತ್ತೀಚೆಗೆ ಮುಕ್ತಾಯಗೊಂಡ ಸಂಸತ್‌ ಚುನಾವಣೆಯಲ್ಲಿ ಭಾರೀ ಅಕ್ರಮ ನಡೆದಿದೆ ಎಂಬ ಆರೋಪಗಳ ಬೆನ್ನಲ್ಲೇ ಈ ಕುರಿತ ತನಿಖೆ ನಡೆಸಿ ವರದಿ ಸಲ್ಲಿಸುವ ಸಲುವಾಗಿ ಪಾಕಿಸ್ತಾನದ ಚುನಾವಣಾ ಆಯೋಗ ಉನ್ನತ ಮಟ್ಟದ ಸಮಿತಿ ರಚಿಸಿದೆ.

ಈ ಸಮಿತಿ ವಿವಿಧ ಚುನಾವಣಾ ಅಧಿಕಾರಿಗಳನ್ನು ಭೇಟಿ ಮಾಡಿ ಅವರ ಹೇಳಿಕೆ ಸಂಗ್ರಹಿಸಿ 3 ದಿನಗಳಲ್ಲಿ ತನ್ನ ವರದಿ ಸಲ್ಲಿಸಲಿದೆ.

ಸಂಸತ್‌ ಚುನಾವಣೆಯಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಇಮ್ರಾನ್‌ ಖಾನ್‌, ನವಾಜ್‌ ಷರೀಫ್‌ ಮತ್ತು ಬಿಲಾವಲ್‌ ಭುಟ್ಟೋ ಪಕ್ಷಗಳು ದೂರಿದ್ದವು.

ಅದರ ಬೆನ್ನಲ್ಲೇ ಈ ಅಕ್ರಮದಲ್ಲಿ ಸ್ವತಃ ಚುನಾವಣಾಧಿಕಾರಿಗಳು, ನ್ಯಾಯಾಧೀಶರೇ ಭಾಗಿಯಾಗಿದ್ದಾರೆ ಎಂದು ಸ್ವತಃ ಚುನಾವಣಾಧಿಕಾರಿಯಾಗಿದ್ದ ರಾವಲ್ಪಿಂಡಿಯ ಮಾಜಿ ಚುನಾವಣಾ ಆಯುಕ್ತ ಲಿಖಾಯತ್‌ ಅಲಿ ಗಂಭೀರ ಆರೋಪ ಮಾಡಿ ಹುದ್ದೆಗೆ ರಾಜೀನಾಮೆ ನೀಡಿದ್ದರು.