ಸಾರಾಂಶ
ಪಾಕಿಸ್ತಾನದ ಸಾಲ ಏರುಗತಿಯಲ್ಲೇ ಸಾಗಿದ್ದು, ಅದರ ಒಟ್ಟು ಸಾಲವು ದೇಶದ ಒಟ್ಟು ಜಿಡಿಪಿ ಮೀರಿಸುವ ಹಂತ ತಲುಪಿದೆ. ಕೂಡಲೇ ಆರ್ಥಿಕ ಸುಧಾರಣೆ ಜಾರಿಗೆ ತರದಿದ್ದರೆ ಪಾಕಿಸ್ತಾನದ ಆರ್ಥಿಕತೆ ಮುಳುಗಿ ದಿವಾಳಿಯಾಗುವುದು ಖಚಿತ ಎಂದು ಇಸ್ಲಾಮಾಬಾದ್ ಮೂಲದ ಆರ್ಥಿಕ ವಿಶ್ಲೇಷಣಾ ಸಂಸ್ಥೆ ‘ತಬದ್ಲಾಬ್’ ಎಚ್ಚರಿಸಿದೆ.
ನವದೆಹಲಿ: ಪಾಕಿಸ್ತಾನದ ಸಾಲ ಏರುಗತಿಯಲ್ಲೇ ಸಾಗಿದ್ದು, ಅದರ ಒಟ್ಟು ಸಾಲವು ದೇಶದ ಒಟ್ಟು ಜಿಡಿಪಿ ಮೀರಿಸುವ ಹಂತ ತಲುಪಿದೆ. ಕೂಡಲೇ ಆರ್ಥಿಕ ಸುಧಾರಣೆ ಜಾರಿಗೆ ತರದಿದ್ದರೆ ಪಾಕಿಸ್ತಾನದ ಆರ್ಥಿಕತೆ ಮುಳುಗಿ ದಿವಾಳಿಯಾಗುವುದು ಖಚಿತ ಎಂದು ಇಸ್ಲಾಮಾಬಾದ್ ಮೂಲದ ಆರ್ಥಿಕ ವಿಶ್ಲೇಷಣಾ ಸಂಸ್ಥೆ ‘ತಬದ್ಲಾಬ್’ ಎಚ್ಚರಿಸಿದೆ.
ಈ ಕುರಿತು ‘ಎ ರೇಜಿಂಗ್ ಫೈರ್’ ಎಂಬ ಹೆಸರಿನಲ್ಲಿ ತಯಾರಿಸಿರುವ ವರದಿಯಲ್ಲಿ ಪಾಕಿಸ್ತಾನದ ಆರ್ಥಿಕತೆಯು ತೀವ್ರವಾಗಿ ಕುಸಿಯುತ್ತಿದೆ. ಪ್ರಸ್ತುತ ಆರ್ಥಿಕ ಸಾಲಿನಲ್ಲಿ ವಿಶ್ವಸಂಸ್ಥೆ ಮತ್ತು ದ್ವಿಪಕ್ಷೀಯ ಸಾಲಗಳನ್ನು ಬಿಟ್ಟು ಉಳಿದ ಸಾಲಗಳೇ 4 ಲಕ್ಷ ಕೋಟಿ ರು. ದಾಟಿದೆ.
ಇದು ಪಾಕಿಸ್ತಾನದ ಒಟ್ಟು ಜಿಡಿಪಿಯನ್ನೇ ಮೀರಿಸುವ ಹಂತ ತಲುಪಿದೆ. ಹೀಗಾಗಿ ಪಾಕಿಸ್ತಾನದಲ್ಲಿ ಸಾಲ ಮರುಪಾವತಿಗೆ ಮೊದಲ ಆದ್ಯತೆಯನ್ನು ನೀಡಬೇಕಾಗಿದ್ದು, ಉತ್ಪಾದಕ ಮತ್ತು ಅಭಿವೃದ್ಧಿ ವಲಯಗಳಿಗೆ ಹಣ ವಿನಿಯೋಗಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದೆ.
ಜೊತೆಗೆ 2011ಕ್ಕೆ ಹೋಲಿಸಿದರೆ ಪಾಕಿಸ್ತಾನದ ಸಾಲದ ಪ್ರಮಾಣ ಆರು ಪಟ್ಟು ಹೆಚ್ಚಾಗಿದ್ದು, ವಿದೇಶಿ ಅವಲಂಬನೆಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿದೆ.
ಇದನ್ನು ಕಡಿಮೆ ಮಾಡಿಕೊಂಡು ತನ್ನ ದೇಶದಲ್ಲೇ ಸರಕುಗಳನ್ನು ಉತ್ಪಾದಿಸುವತ್ತ ಗಮನ ಹರಿಸಿದರೆ ಆರ್ಥಿಕತೆ ಪುನಶ್ಚೇತನಗೊಳ್ಳಬಹುದು ಎಂದು ಸಲಹೆ ನೀಡಿದೆ.
ಇದನ್ನು ಹೀಗೆಯೇ ಬಿಟ್ಟರೆ ದೇಶದ ಆರ್ಥಿಕತೆ ದಿವಾಳಿಯಾಗಲಿದ್ದು, ಅದನ್ನು ತಪ್ಪಿಸಲು ಕ್ಷಿಪ್ರ ಆರ್ಥಿಕ ಸುಧಾರಣೆಗಳನ್ನು ಜಾರಿಗೆ ತರಬೇಕೆಂದು ವರದಿಯು ಸಲಹೆ ನೀಡಿದೆ.