ವಿಮಾನದಿಂದ ಇಳಿವಾಗ ಬಿದ್ದ ಪಾಕಿಸ್ತಾನದ ಅಧ್ಯಕ್ಷ ಆಸಿಫ್‌ ಅಲಿ ಜರ್ದಾರಿ - ಕಾಲು ಮುರಿತ

| Published : Nov 02 2024, 01:28 AM IST / Updated: Nov 02 2024, 04:10 AM IST

ಸಾರಾಂಶ

ಪಾಕಿಸ್ತಾನದ ಅಧ್ಯಕ್ಷ ಆಸಿಫ್‌ ಅಲಿ ಜರ್ದಾರಿ ದುಬೈನ ವಿಮಾನ ನಿಲ್ದಾಣದಲ್ಲಿ ವಿಮಾನದಿಂದ ಇಳಿಯುತ್ತಿದ್ದ ಸಂದರ್ಭದಲ್ಲಿ ಆಯತಪ್ಪಿ ಬಿದ್ದಿದ್ದಾರೆ.

ಇಸ್ಲಾಮಾಬಾದ್‌: ಪಾಕಿಸ್ತಾನದ ಅಧ್ಯಕ್ಷ ಆಸಿಫ್‌ ಅಲಿ ಜರ್ದಾರಿ ದುಬೈನ ವಿಮಾನ ನಿಲ್ದಾಣದಲ್ಲಿ ವಿಮಾನದಿಂದ ಇಳಿಯುತ್ತಿದ್ದ ಸಂದರ್ಭದಲ್ಲಿ ಆಯತಪ್ಪಿ ಬಿದ್ದಿದ್ದಾರೆ. ಪರಿಣಾಮ ಅವರ ಕಾಲು ಮುರಿದಿದ್ದು, ವೈದ್ಯರು 4 ವಾರಗಳ ವಿಶ್ರಾಂತಿಗೆ ಸೂಚಿಸಿದ್ದಾರೆ.ಬುಧವಾರ ತಡರಾತ್ರಿ ಈ ಘಟನೆ ನಡೆದಿದ್ದು, ಗುರುವಾರ ಅವರ ಕಚೇರಿ ಖಚಿತಪಡಿಸಿದೆ. ರಾಷ್ಟ್ರಪತಿ ಭವನದ ಬಳಿಕ ಪ್ರಕಾರ ‘ವಿಮಾನದಿಂದ ಇಳಿಯುತ್ತಿದ್ದಾಗ ಜರ್ದಾರಿ ಅವರು ಆಯತಪ್ಪಿ ಬಿದಿದ್ದಾರೆ. ಬಳಿಕ ತಕ್ಷಣವೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ತಪಾಸಣೆ ವೇಳೆ ಅವರ ಕಾಲು ಮುರಿತಕ್ಕೊಳಗಾಗಿದೆ ಎಂದು ವೈದ್ಯರು ತಿಳಿಸಿದ್ದು, 4 ವಾರಗಳ ವಿಶ್ರಾಂತಿಗೆ ಸೂಚಿಸಿದ್ದಾರೆ’ ಎಂದಿದೆ.

ಅಕ್ಟೋಬರ್‌ನಲ್ಲಿ ಭರ್ಜರಿ ₹1.87 ಲಕ್ಷ ಕೋಟಿ ಜಿಎಸ್ಟಿ ಸಂಗ್ರಹ

ನವದೆಹಲಿ: ಅಕ್ಟೋಬರ್‌ ಮಾಹೆಯಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹ ಶೇ.9 ರಷ್ಟು ಏರಿಕೆ ಕಂಡಿದೆ. ಈ ತಿಂಗಳಲ್ಲಿ 1.87 ಲಕ್ಷ ಕೋಟಿ ರು. ಜಿಎಸ್ಟಿ ಸಂಗ್ರಹವಾಗಿದೆ.ದೇಶೀಯ ವಹಿವಾಟುಗಳಿಂದ ಜಿಎಸ್‌ಟಿ ಶೇ.10.6 ರಷ್ಟು ಏರಿಕೆಯಾಗಿ 1.42 ಲಕ್ಷ ಕೋಟಿ ರು.ಗೆ ಸಂಗ್ರಹವಾಗಿದೆ. ಅಕ್ಟೋಬರ್‌ನಲ್ಲಿ ಆಮದು ಮೇಲಿನ ತೆರಿಗೆ ಶೇ.4ರಷ್ಟು ಏರಿಕೆಯಾಗಿದ್ದು, 45,096 ಕೋಟಿ ರು. ಸಂಗ್ರಹವಾಗಿದೆ.

ಈ ತಿಂಗಳಲ್ಲಿ ಒಟ್ಟು ಮರುಪಾವತಿ 19,306 ಕೋಟಿ ರು. ಆಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. 18.2 ಏರಿಕೆಯಾಗಿದೆ. ಏಪ್ರಿಲ್‌ನಲ್ಲಿ ದಾಖಲೆಯ 2.10 ಲಕ್ಷ ಕೋಟಿ ರು. ಹಾಗೂ ಕಳೆದ ವರ್ಷದ ಆಕ್ಟೋಬರ್‌ನಲ್ಲಿ 1.72 ಲಕ್ಷ ಕೋಟಿ ರು. ಜಿಎಸ್‌ಟಿಯಿಂದ ವರಮಾನ ಸಂಗ್ರಹವಾಗಿತ್ತು.

ಕೇಸರಿ ಧ್ವಜ: 18 ಬಾಂಗ್ಲಾ ಹಿಂದೂಗಳ ಮೇಲೆ ದೇಶದ್ರೋಹ ಕೇಸ್‌

ಢಾಕಾ: ಮಾಜಿ ಪ್ರಧಾನಿ ಶೇಖ್‌ ಹಸೀನಾ ಅವರ ಪದಚ್ಯುತಿ ತಮ್ಮ ಮೇಲೆ ನಡೆದ ದೌರ್ಜನ್ಯ ಖಂಡಿಸ ನಡೆಸಿದ ರ್‍ಯಾಲಿಯಲ್ಲಿ ಕೇಸರಿ ಧ್ವಜಾರೋಹಣ ಮಾಡಿದ ಆರೋಪದ ಮೇರೆಗೆ 18 ಹಿಂದೂಗಳ ಮೇಲೆ ಬಾಂಗ್ಲಾದೇಶ ಸರ್ಕಾರ ದೇಶದ್ರೋಹ ಪ್ರಕರಣ ದಾಖಲಿಸಿದೆ.ಅಲ್ಪಸಂಖ್ಯಾತರ ರಕ್ಷಣೆಗಾಗಿ ಕಾನೂನು ಮತ್ತು ನ್ಯಾಯಮಂಡಳಿಯನ್ನು ಜಾರಿ ಮಾಡಬೇಕೆಂದು ಆಗ್ರಹಿಸಿ ಅ.25 ರಂದು ಇಲ್ಲಿನ ಚತ್ತೊಗ್ರಾಂನಲ್ಲಿ ಹಿಂದೂಗಳು ಬೃಹತ್‌ ರ್‍ಯಾಲಿ ಕೈಗೊಂಡಿದ್ದರು. ಈ ವೇಳೆ ಕೇಸರಿ ಧ್ವಜಾರೋಹಣ ಮಾಡಿದ್ದರು. ಹೀಗಾಗಿ ಕೃತ್ಯ ಎಸಗಿದ ಆರೋಪ ಹೊರಿಸಿ 18 ಮಂದಿ ಮೇಲೆ ದೇಶದ್ರೋಹ ಕೇಸು ದಾಖಲಿಸಲಾಗಿದೆ.

ಇದಲ್ಲದೆ, ಇನ್ನೂ 15-20 ಮಂದಿ ಅನಾಮಧೇಯ ವ್ಯಕ್ತಿಗಳ ಹೆಸರನ್ನೂ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮುಂದಿನ ದಿನಗಳಲ್ಲಿ ಅವರನ್ನು ಈ ದೇಶದ್ರೋಹ ಪ್ರಕರಣದಲ್ಲಿ ಸೇರಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ದೀಪಾವಳಿ ಮುಹೂರ್ತ ಟ್ರೇಡಿಂಗ್‌: ಸೆನ್ಸೆಕ್ಸ್‌ 335 ಅಂಕ ಜಿಗಿತ

ಮುಂಬೈ: ದೀಪಾವಳಿ ವಿಶೇಷದ ಅಂಗವಾಗಿ ಒಂದು ತಾಸಿನ ಮುಹೂರ್ತ ಟ್ರೇಡಿಂಗ್‌ನಲ್ಲಿ ಭಾರತೀಯ ಷೇರುಪೇಟೆ ಏರಿಕೆಯಲ್ಲಿ ಅಂತ್ಯವಾಯಿತು. ಸೆನ್ಸೆಕ್ಸ್‌ 335 ಅಂಕಗಳ ಏರಿಕೆಯಿಂದ 79,724.12ಕ್ಕೆ ತಲುಪಿತು. ಇದೇ ವೇಳೆ ನಿಫ್ಟಿ ಸಹ 94.20 ಅಂಕ ಏರಿಕೆಯಾಗಿ 24,304.35ಕ್ಕೆ ತೃಪ್ತಿಪಟ್ಟಿತು. ಸಂಜೆ 6ರಿಂದ 7 ಗಂಟೆವರೆಗೆ ನಡೆದ ಮುಹೂರ್ತ ಟ್ರೇಡಿಂಗ್‌ನಲ್ಲಿ ಸೆನ್ಸೆಕ್ಸ್‌ನಿಂದ ಮಹೀಂದ್ರಾ ಮತ್ತು ಮಹೀಂದ್ರಾ ಮುಂತಾದವು, ನಿಫ್ಟಿಯಲ್ಲಿ 47 ಷೇರುಗಳು ಲಾಭ ಕಂಡವು.ಏನಿದು ಮುಹೂರ್ತ ಟ್ರೇಡಿಂಗ್‌?:

ದೀಪಾವಳಿ ಹಬ್ಬದ ಲಕ್ಷ್ಮೀ ಪೂಜೆ ದಿನದಂದು ಕೇವಲ 1 ತಾಸಿನ ಅವಧಿಗೆ ಷೇರುಪೇಟೆಯಲ್ಲಿ ವ್ಯವಹಾರ ಮಾಡಲಾಗುತ್ತದೆ. ಇದಕ್ಕೆ ಮುಹೂರ್ತ ಟ್ರೇಡಿಂಗ್‌ ಎನ್ನುತ್ತಾರೆ.